ಸಿದ್ದಾಪುರ: ಪ್ರಸ್ತುತ ದಿನಗಳಲ್ಲಿ ನಾಟಿ ಕೋಳಿಗೆ ಫುಲ್ ಡಿಮಾಂಡ್ ಇದೆಯಾದರೂ ನಾಟಿ ಕೋಳಿ ಸಾಕುವವರ ಸಂಖ್ಯೆ ವಿರಳ. ಮಾರುಕಟ್ಟೆಯ ಬೇಡಿಕೆ ನಾಡಿಮಿಡಿತ ತಿಳಿದ ಕೆಲವರು ಮಾತ್ರ ನಾಟಿ ಕೋಳಿ ಸಾಕಿ ಕೈ ತುಂಬ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಇಂತಹವರ ಪಟ್ಟಿಯಲ್ಲಿ ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲಿಯೇರಿ ಗ್ರಾಮದ ನಿವಾಸಿ ತೇಕುಂಕಾಟಿಲ್ ಟಿ.ಎಂ.ಸುದೀಶ್ ಸಹ ಒಬ್ಬರು.
ಬೆಂಗಳೂರಿನಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಟಿ.ಎಂ.ಸುದೀಶ್, ಕೋವಿಡ್ ಕಾಲಕ್ಕೆ ಊರಿಗೆ ಮರಳಿ ತಮ್ಮ ಮನೆಯ ಸುತ್ತ ಇರುವ ಜಾಗದಲ್ಲಿ ಸುಸಜ್ಜಿತ ಕೋಳಿ ಗೂಡು ನಿರ್ಮಿಸಿ ಕೋಳಿ ಹಾಗೂ ಮೊಟ್ಟೆ ಮಾರಾಟ ಮಾಡಿ ಇದೀಗ ಕೋಳಿ ಸಾಕಣೆ ಮಾಡಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಕೆನ್ ಕಲಾ ಶಾಲೆಯಿಂದ ಆರ್ಟ್ ಮಾಸ್ಟರ್ ಪಡೆದಿರುವ ಸುದೀಶ್, ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ, ಚಿತ್ರಸಂತೆ, ಚಿತ್ರಕಲಾ ಪರಿಷತ್ ಸೇರಿದಂತೆ ವಿವಿಧ ಭಾಗದಲ್ಲಿ ಚಿತ್ರಕಲೆ ಪ್ರದರ್ಶಿಸಿದ್ದರು. ಬೆಂಗಳೂರಿನ ಸ್ನೇಹಿತರು ಗ್ರಾಫಿಕ್ ಕೆಲಸಕ್ಕಾಗಿ ಕರೆ ಮಾಡಿದರೆ ಈಗಲೂ ಮನೆಯಲ್ಲಿಯೇ ಕುಳಿತು ಅವರಿಗೆ ಅಗತ್ಯವಿರುವ ವಿನ್ಯಾಸದ ಗ್ರಾಫಿಕ್ಸ್ ಮಾಡಿ ಕಳುಹಿಸುತ್ತಾರೆ. ಇದಲ್ಲದೆ ಸ್ವಸಹಾಯ ಸಂಘ, ಸಮುದಾಯ ಸಂಘಟನೆ ಮುಂತಾದವುಗಳಲ್ಲಿ ಗುರುತಿಸಿಕೊಂಡು ಸಾಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ.
ಸುದೀಶ್ ಪತ್ನಿ ಪಿ.ವಿ.ಶ್ರುತಿ ಅವರು ಸಿದ್ದಾಪುರದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುಲಿಯೇರಿ ಗ್ರಾಮದ ನಿವಾಸಿ ಸುದೀಶ್ ಅವರಿಗೆ ಸ್ವಂತ ಜಾಗವಿದ್ದು ಕರಿಮೆಣಸು ಹಾಗೂ ಅರ್ಧ ಎಕರೆಯಲ್ಲಿ ಕಾಫಿ, ಅಡಕೆ ಬೆಳೆದಿದ್ದಾರೆ. ಕೋಳಿ ಸಾಕಣೆಯೊಂದಿಗೆ ತೋಟದಲ್ಲಿ ಗಿಡ ನೆಡುವುದರ ಜತೆಗೆ ಗಿಡಗಳನ್ನು ಹಾರೈಕೆ ಮಾಡುತ್ತಿದ್ದಾರೆ. ಕಾಫಿ ತೋಟದಿಂದ ವಾರ್ಷಿಕ ಆದಾಯವನ್ನೂ ಪಡೆಯುತ್ತಿದ್ದಾರೆ.
ಕುಟುಂಬಸ್ಥರು ಹಾಗೂ ಅಮ್ಮತ್ತಿ ಗ್ರಾಮ ಪಂಚಾಯಿತಿ ಸಹಕಾರ ಪಡೆದು ತಮ್ಮ ಮನೆಯ ಸಮೀಪವಿರುವ ಅಲ್ಪ ಜಾಗದಲ್ಲಿ ಸುಸರ್ಜಿತ ಕೋಳಿ ಗೂಡು ನಿರ್ಮಿಸಿದ್ದು, ನಾಟಿ ಹಾಗೂ ಗಿರಿರಾಜ ಕೋಳಿಗಳನ್ನು ಸಾಕುತ್ತಿದ್ದಾರೆ. ಪ್ರಸ್ತುತ ಸುಮಾರು 230 ಗಿರಿರಾಜ ಕೋಳಿ ಹಾಗೂ ಸುಮಾರು 150 ನಾಟಿಕೋಳಿಗಳಿವೆ. ಸ್ಥಳೀಯವಾಗಿ ಕೋಳಿಗಳನ್ನು ಮಾಂಸಕ್ಕೆ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ, ಕೋಳಿ ಸಾಕಣೆೆ ಮಾಡುವವರಿಗೆ ಮರಿಗಳನ್ನೂ ಮಾರಾಟ ಮಾಡುತ್ತಾರೆ.
ಪ್ರಸ್ತುತ ಕೋಳಿ ಮಾಂಸಕ್ಕೆ ಉತ್ತಮ ದರವಿದ್ದು, ಉತ್ತಮ ಲಾಭ ಕಂಡುಕೊಂಡಿದ್ದಾರೆ. ಇದಲ್ಲದೆ ಪ್ರತಿದಿನ ಸುಮಾರು 200 ಮೊಟ್ಟೆಗಳನ್ನು ಸೂಪರ್ ಮಾರ್ಕೆಟ್ ಹಾಗೂ ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದಾರೆ. ಉಳಿದಂತೆ ಮೊಟ್ಟೆಗೆ ನಿಗದಿತ ಗ್ರಾಹಕರಿದ್ದು ಅವರ ಮನೆಗೆ ತೆರಳಿ ಮೊಟ್ಟೆ ಕೊಡುವುದು ನಿತ್ಯ ಕಾಯಕವಾಗಿದೆ. ಪ್ರತಿ ದಿನ ಅಂದಾಜು 2 ಸಾವಿರ ರೂ. ಲಭ್ಯವಾಗುತ್ತಿದ್ದು, ನಾಟಿ ಕೋಳಿ ಸಾಕಣೆಗೆ ಹೆಚ್ಚಿನ ಬಂಡವಾಳವೇನೂ ಬೇಕಾಗುವುದಿಲ್ಲ ಎನ್ನುತ್ತಾರೆ ಟಿ.ಎಂ.ಸುದೀಶ್.
ನಾಟಿ ಕೋಳಿಗಳು ಆರು ತಿಂಗಳ ನಂತರ ಮೊಟ್ಟೆ ಇಡಲು ಆರಂಭಿಸುತ್ತವೆ. ಕೋಳಿಯೊಂದು ವರ್ಷಕ್ಕೆ ಸುಮಾರು 60-80 ಮೊಟ್ಟೆ ಇಡುತ್ತದೆ. ಈ ಮೊಟ್ಟೆಗಳಲ್ಲಿ ಒಂದಿಷ್ಟು ಮಾರಾಟ ಮಾಡಿ ಮತ್ತೊಂದಿಷ್ಟು ಮೊಟ್ಟೆಯನ್ನು ಕಾವಿಗೆ ಹಾಕಿ ಮರಿ ಮಾಡಿಕೊಳ್ಳುತ್ತಾರೆ. 22 ದಿನಗಳ ಕಾಲ ಮರಿ ಮಾಡಿ ನಂತರ ಒಂದೆರಡು ತಿಂಗಳು ಮರಿಗಳನ್ನು ಆಡಿಸಿ ಬೆಳೆಸಿ ಮತ್ತೆ ಮೊಟ್ಟೆ ಇಡಲು ಕೋಳಿ ಆರಂಭಿಸುತ್ತವೆ. ಈ ನಾಟಿ ಕೋಳಿಯ ರೊಟಿನ್‌ಗೆ ಕಡಿಮೆ ವೆಚ್ಚವಾಗಲಿದ್ದು, ನಿತ್ಯ ಕೈ ತುಂಬ ಆದಾಯ ಪಡೆಯುವುದರ ಜತೆಗೆ ಖರ್ಚಿಲ್ಲದೆ ವಂಶ ವೃದ್ಧಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.
ಹೆಚ್ಚಿನ ಖರ್ಚು ಇಲ್ಲ. ಕಾಳು, ತರಕಾರಿ ಸೇರಿದಂತೆ ಇತರ ವೇಸ್ಟೇಜ್ ಸಾಕು. ನಾಟಿ ಕೋಳಿಗಳನ್ನು ಜಮೀನಿನಲ್ಲಿ ಓಡಾಡಲು ಬಿಡುವುದರಿಂದ ಅವು ಕಾಳು, ಕಡ್ಡಿಯೊಂದಿಗೆ ಹುಳು, ಹುಪ್ಪಟೆ ಹೆಕ್ಕಿ ತಿನ್ನುತ್ತವೆ. ಒಂದರ್ಥದಲ್ಲಿ ಉಳುಮೆ ಮಾಡಿ ಬೆಳೆಗೆ ಪೂರಕವಾದ ಗೊಬ್ಬರ ಕೊಡುತ್ತವೆ ಎನ್ನುತ್ತಾರೆ ಸುದೀಶ್.
ಕೃಷಿಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುವುದಕ್ಕಿಂತ ಕೋಳಿ ಸಾಕಣೆಯಂತಹ ಉಪ ಕಸುಬು ಮಾಡಿದರೆ ರೈತರು ಲಾಭ ಗಳಿಸಬಹುದು. ನಾನು ಕೋವಿಡ್ ಕಾಲಕ್ಕೆ ಊರಿಗೆ ಮರಳಿ ಕೋಳಿ ಸಾಕಣೆ ಆರಂಭಿಸಿದೆ. ಕೃಷಿ, ಹೈನುಗಾರಿಕೆಯಿಂದ ಉತ್ತಮ ಲಾಭವಿದೆ. ಮನೆಯ ಸಮೀಪದಲ್ಲೆ ಗೂಡು ನಿರ್ಮಿಸಿದ್ದು, ಕೋಳಿ ಹಾಗೂ ಮೊಟ್ಟೆ ಮಾರಾಟ ಮಾಡುತ್ತಿದ್ದೇನೆ. ಇದರಿಂದಾಗಿ ಉತ್ತಮ ಆದಾಯ ಕಂಡುಕೊಂಡಿದ್ದೇನೆ.
ತೇಕುಂಕಾಟಿಲ್ ಟಿ.ಎಂ.ಸುದೀಶ್ ಪುಲಿಯೇರಿ ಗ್ರಾಮ