ಪಾಂಡವಪುರ: ಭೂಮಿಗೆ ಬಿತ್ತಿದ ಬೀಜ ತಲೆಗೆ ಬಿದ್ದ ಅಕ್ಷರ ಎಂದೂ ನಷ್ಟವಾಗುವುದಿಲ್ಲ ಎಂಬ ಹಿರಿಯರ ಮಾತಿನಂತೆ ತಾಲೂಕಿನ ರೈತರೊಬ್ಬರು ಸಾವಯವ ಕೃಷಿ ಪದ್ಧತಿ ಅನುಸರಿಸುವ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.
ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ರೈತ ಸಣ್ಣಪುಟ್ಟೇಗೌಡ (ಕುಳ್ಳೇಗೌಡ) 74 ಹರೆಯದಲ್ಲೂ ಯಾವ ಯುವಕರಿಗೂ ಕಡಿಮೆ ಇಲ್ಲದಂತೆ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಾತನ ಕಾಲದಿಂದಲೂ ಬೇಸಾಯವನ್ನೇ ನಂಬಿರುವ ಸಣ್ಣಪುಟ್ಟೇಗೌಡ ಈಗಲೂ ಯಂತ್ರೋಪಕರಣಗಳ ಬಳಕೆ ಮತ್ತು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿಲ್ಲ.
ರಾಸಾಯಿನಿಕ ಗೊಬ್ಬರ, ಕ್ರಿಮಿನಾಶಕಗಳ ಬಳಕೆ ಇಲ್ಲದೆ ಹಳೆಯ ಕೃಷಿ ಪದ್ಧತಿಯಂತೆ ನೈಸರ್ಗಿಕವಾಗಿ ಸಾವಯವ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ಇಳಿವಯಸ್ಸಿನಲ್ಲೂ ನೇಗಿಲು ಹಿಡಿದು ಉಳುಮೆ ಮಾಡುವುದು, ಪಟ ಹೊಡೆಯುವುದು, ನೀರು ಹಾಯಿಸುವುದು, ಕಟಾವು, ಕೊಯ್ಲು, ಕಳೆ ಕೀಳುವುದು ಸೇರಿದಂತೆ ಯಾವ ಕೆಲಸಕ್ಕೂ ಬೆನ್ನು ತೋರಿಸದೆ ಎಲ್ಲ ಕೆಲಸಗಳನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.
ರಾಗಿಮುದ್ದನಹಳ್ಳಿಯಿಂದ ಬನ್ನಂಗಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ಅಷ್ಟೇನೂ ಫಲವತ್ತತೆ ಇಲ್ಲದ ತಮ್ಮ ಮೂರು ಎಕರೆ ಜಮೀನನ್ನು ಬೆವರು ಸುರಿಸಿ ಹಸನುಗೊಳಿಸಿದ್ದಾರೆ. ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿರುವ ಇವರು ಅಡಕೆ ಗಿಡದ ಬುಡದಲ್ಲಿ ಈರುಳ್ಳಿ ಬೆಳೆಯುವುದರ ಜತೆಗೆ ತೆಂಗು, ಮಾವು, ಅಡಕೆ, ಸೀಬೆ, ದಾಳಿಂಬೆ, ಬೆಳ್ಳುಳ್ಳಿ, ನುಗ್ಗೆ, ಸಪೋಟ, ದ್ವಿದಳ ಧಾನ್ಯಗಳು, ಅವರೆ, ಉದ್ದು, ತಣ್ಣಿ ಬೆಳೆಯುತ್ತಿದ್ದಾರೆ. ಬೆಳೆದ ಬೆಳೆಯನ್ನು ಮೈಸೂರಿನ ಎಪಿಎಂಸಿ ಮಾರುಕಟ್ಟೆಗೆ ನೇರವಾಗಿ ಸಾಗಿಸುವ ವ ಮೂಲಕ ಕೃಷಿಯನ್ನು ಲಾಭದಾಯಕವಾಗಿಸಿಕೊಂಡಿದ್ದಾರೆ. ಜತೆಗೆ ಬೇಡಿಕೆ ಇರುವ ಬೆಳೆಗಳನ್ನು ಸ್ಥಳೀಯವಾಗಿ ಮಾರಾಟ ಮಾಡುವುದೂ ಉಂಟು. ಕೆರೆ-ಕಟ್ಟೆ, ಕಾಲುವೆ ಹೀಗೆ ಯಾವುದೇ ನೀರಿನ ಮೂಲ ಇಲ್ಲವಾದರೂ ಜಮೀನಿನಲ್ಲಿರುವ ಎರಡು ಪಂಪ್‌ಸೆಟ್‌ಗಳ ಮೂಲಕ ಕೃಷಿಗೆ ಅಗತ್ಯವಾದ ನೀರು ಪಡೆದುಕೊಳ್ಳುತ್ತಿದ್ದಾರೆ.
ನಾಟಿ ಹಸು ಸಾಕಣೆ: ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಬಳಕೆಯಿಂದ ಭೂಮಿಗೆ ವಿಷ ಉಣಿಸುವುದು ಬೇಡ ಎಂಬ ಕಾರಣಕ್ಕೆ ತಾವು ಬೆಳೆದ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿಲ್ಲ. ಆದರೆ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಎರಡು ನಾಟಿ ಹಸು, ಎರಡು ನಾಟಿ ಎಮ್ಮೆ ಹಾಗೂ 10 ಮೇಕೆಗಳನ್ನು ಸಾಕುತ್ತಿದ್ದಾರೆ. ಮೇಕೆಯ ಗೊಬ್ಬರವನ್ನು ಸಂಗ್ರಹಿಸಿ ಅದನ್ನು ಬೆಳೆಗಳ ಬುಡಕ್ಕೆ ಹಾಕುತ್ತಾರೆ. ಇನ್ನು ಗುಂಡಿಯಲ್ಲಿ ಹಸು, ಎಮ್ಮೆ ತೊಪ್ಪೆ ಮತ್ತು ಗಂಜಲವನ್ನು ಮಿಶ್ರಣ ಮಾಡಿ ಬೆಳೆಗಳಿಗೆ ನೀರು ಹಾಯಿಸುವಾಗ ಅದರೊಂದಿಗೆ ಗಂಜಲದ ಮಿಶ್ರಣ ಬೆಳೆಗಳಿಗೆ ಹಾಯುವಂತೆ ಮಾಡುತ್ತಾರೆ. ಸಾವಯವ ಕೃಷಿ ಪದ್ಧತಿಯಡಿ ಬೆಳೆ ಬೆಳೆಯುವುದರಿಂದ ಇವರು ಬೆಳೆದ ಬೆಳೆಗೆ ಬೇಡಿಕೆಯೂ ಇದೆ.
ಅಡಕೆ ಸಸಿ ಮಾರಾಟದಿಂದ ಲಾಭ: ಶಿವಮೊಗ್ಗದಿಂದ ಅಡಕೆ ಗೋಟುಗಳನ್ನು ಖರೀದಿಸಿ ತರುವ ಇವರು, ಅವುಗಳನ್ನು ಸಸಿಯಾಗಿಸಿ ಒಂದಕ್ಕೆ 30 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಸಾವಯವ ಕೃಷಿ ಪದ್ಧತಿಯಡಿ ಅಡಕೆ ಸಸಿಗಳನ್ನು ಬೆಳೆಸುವುದರಿಂದ ಈ ಸಸಿಗಳಿಗೆ ಬೇಡಿಕೆಯೂ ಇದೆ. ಇದರ ಜತೆಗೆ ತೆಂಗಿನ ತಳ್ಳುಗಳನ್ನು ಸಸಿಯಾಗಿಸಿ ಒಂದಕ್ಕೆ ನೂರು ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಲೂ ವಾರ್ಷಕವಾಗಿ ಒಂದಿಷ್ಟು ಲಾಭಾಂಶ ಕಾಣುತ್ತಿದ್ದಾರೆ.
ಕೃಷಿ ರತ್ನ ಪ್ರಶಸ್ತಿ ಪುರಸ್ಕೃತ: ನಿರಂತರ ಶ್ರಮ, ಸಾವಯವ ಬೇಸಾಯದೊಂದಿಗೆ ಮಾದರಿ ಕೃಷಿಯನ್ನು ಮೈಗೂಡಿಸಿಕೊಂಡಿರುವ ರೈತ ಸಣ್ಣಪುಟ್ಟೇಗೌಡರಿಗೆ ವಿಶ್ವೇಶ್ವರಯ್ಯ ಡೆವಲಪ್‌ಮೆಂಟ್ ಆರ್ಗನೈಜೇಷನ್ ಆ್ಯಂಡ್ ಮೈಕ್ರೋ ಬಿ ಫೌಂಡೇಷನ್ ಎಂಬ ಸಂಸ್ಥೆ ಕೃಷಿ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ತಂದೆಗೆ ಮಗನ ಸಾಥ್: ಹಿಂದಿನಿಂದಲೂ ಕೃಷಿಯನ್ನೇ ನಂಬಿರುವ ಕುಟುಂಬ ಕೃಷಿಯನ್ನು ಬಿಟ್ಟು ಇತರ ಯಾವುದೇ ವ್ಯವಹಾರಗಳಿಗೆ ಕೈಹಾಕಿಲ್ಲ. ಇಳಿವಯಸ್ಸಿನಲ್ಲಿರುವ ತಂದೆಗೆ ಮಗ ಚಂದ್ರಶೇಖರ್ ಸಾಥ್ ನೀಡುತ್ತಿದ್ದು, ಕೃಷಿ ಚಟುವಟಿಗಳಿಗೆ ಸಹಾಯಕರಾಗಿ ನಿಂತಿದ್ದಾರೆ. ನಮ್ಮ ತಂದೆಗೆ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಡ. ನಾವು ಆ ಕೆಲಸ ಮಾಡುತ್ತೇವೆ ಎಂದರೂ ಕೇಳುವುದಿಲ್ಲ. ಒಂದು ದಿನವೂ ಸುಮ್ಮನೆ ಕೂರುವುದಿಲ್ಲ. ಏನಾದರೊಂದು ಕೆಲಸ ಮಾಡುತ್ತಿರಲೇಬೇಕು. ಅದೇ ಅವರಿಗೆ ಸಮಾಧಾನ ತರುವ ಸಂಗತಿ ಎಂದು ಮಗ ಚಂದ್ರಶೇಖರ್ ತಂದೆ ಬಗ್ಗೆ ಮೆಚ್ಚುಗೆ ಮಾತನಾಡುತ್ತಾರೆ.
ಹಿಂದಿನಿಂದಲೂ ಕೃಷಿ ನಂಬಿಕೊಂಡು ಬಂದಿದ್ದೇವೆ. ನಮ್ಮ ಕುಟುಂಬಕ್ಕೆ ಕೃಷಿಯೇ ಪ್ರಧಾನವಾಗಿದೆ. ನಾವು ರಸಗೊಬ್ಬರ, ಕ್ರಿಮಿನಾಶಕ ಸಿಂಪಡಿಸಿ ಬೆಳೆ ಬೆಳೆಯುವುದಿಲ್ಲ. ಕ್ರಿಮಿನಾಶಕ ಸಿಂಪಡಿಸದಿದ್ದರೂ ಯಾವುದೇ ಬೆಳೆಗಳಿಗೆ ರೋಗ ಬಂದಿಲ್ಲ. ಕೆಲವೆಡೆ ಕ್ರಿಮಿನಾಶಕ ಸಿಂಪಡಿಸಿದರೂ ರೋಗ ಬರುತ್ತವೆ. ಅದಕ್ಕಾಗಿ ನಾವು ನಾಟಿ ಹಸುಗಳ ಗಂಜಲ ಮತ್ತು ತೊಪ್ಪೆ ಬಳಕೆ ಮಾಡುತ್ತಿದ್ದೇವೆ. ಕೃಷಿಯಿಂದಲೇ ನೆಮ್ಮದಿಯ ಬದುಕು ಸಾಗಿಸುವಷ್ಟು ಹಣ ಸಂಪಾದನೆ ಮಾಡುತ್ತಿದ್ದೇವೆ.
ಸಣ್ಣಪುಟ್ಟೇಗೌಡ ರೈತ, ರಾಗಿಮುದ್ದನಹಳ್ಳಿ