ಜಿಲ್ಲೆ

ಲಾಭ ತಂದುಕೊಟ್ಟ ಮಿಶ್ರ ಬೇಸಾಯ

ಪ್ರಸಿನ್ ಕೆ.ಆರ್

ಭೇರ್ಯ ಸಿ.ಸಿ. ಮಹದೇವ್ ಸಾಲಿಗ್ರಾಮ

ವಿಶ್ರಾಂತಿ ಪಡೆಯದೆ ನಿರಂತರ ದುಡಿಮೆಯಿಂದ 68ರ ಹರೆಯದಲ್ಲೂ ಸಮಗ್ರ ಕೃಷಿಯಲ್ಲಿ ಸಾಧನೆ ಮಾಡುವ ಮೂಲಕ ಸಾಲಿಗ್ರಾಮದ ರಾಜೇಗೌಡ ಇತರರಿಗೆ ಮಾದರಿಯಾಗಿದ್ದಾರೆ.

ತಮ್ಮ 3.5ಎಕರೆ ಜಮೀನಿನಲ್ಲಿ ತೆಂಗು, ಅಡಕೆ, ಮೆಣಸು, ಬಾಳೆ, ತೇಗ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುವ ಮೂಲಕ ವಾರ್ಷಿಕ 15ಲಕ್ಷ ರೂ.ಗೂ ಅಧಿಕ ಆದಾಯ ಗಳಿಸುತ್ತಿದ್ದಾರೆ. ಪಟ್ಟಣದಲ್ಲಿ ದುಡಿದರೆ ಮಾತ್ರ ಹೆಚ್ಚು ಹಣ ಸಂಪಾದಿಸಬಹುದು ಎನ್ನುವವರ ಮಧ್ಯೆ ಉತ್ತಮ ಆದಾಯದ ಜತೆಗೆ ಕೃಷಿ ಎಂದರೆ ನಷ್ಟ ಎನ್ನುವವರಿಗೆ ಮಾದರಿಯಾಗಿದ್ದಾರೆ. ಜಮೀನಿನಲ್ಲಿ 2 ಸಾವಿರ ಅಡಕೆ ಮರ, 150 ತೆಂಗು, ಕಾಳುಮೆಣಸು, ತೇಗ, 500 ಬಾಳೆ ಸೇರಿದಂತೆ ಮಿಶ್ರ ಬೇಸಾಯ ಅಳವಡಿಸಿಕೊಂಡಿದ್ದಾರೆ.

ರಾಜೇಗೌಡರು ತಮ್ಮ 18ನೇ ವಯಸ್ಸಿನಲ್ಲಿ ತಂದೆಯೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ತಮ್ಮ ಅನುಭವ ಹಾಗೂ ಕುಟುಂಬದವರ ನೆರವಿನಿಂದ ಇಂದು ಉತ್ತಮ ಗಳಿಕೆಯೊಂದಿಗೆ ಯಶಸ್ವಿ ಜೀವನ ನಡೆಸುತ್ತಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ತಿಳಿಯದ ಹಲವು ವಿಷಯಗಳನ್ನು ರಾಜೇಗೌಡರಿಗೆ ಅರಿವಿದೆ. ಕೃಷಿ ಮಾಡುವುದು ಮುಖ್ಯವಲ್ಲ, ಮಾಡಿ ಇಳುವರಿ ಪಡೆದು ಆದಾಯ ಗಳಿಸುವುದು ಮುಖ್ಯ. ಅದರಲ್ಲೂ ಕೃಷಿಯಲ್ಲಿ ಏಳುಬೀಳಿನ ಅನುಭವ ಇದ್ದರೆ ಸಾಧನೆ ಮಾಡಬಹುದು ಎನ್ನುವುದು ಅವರ ಮಾತು.

ಸ್ವಂತ ಅನುಭವದಿಂದ ಮಾಡುವ ಕೃಷಿ ಯಾವತ್ತೂ ನನಗೆ ಕೈ ಕೊಟ್ಟಿಲ್ಲ, ತರಬೇತಿ ಪಡೆದು ಮಾಡಿದ ಕೃಷಿಯಲ್ಲಿ ಇಳುವರಿ ಕೊರತೆಯಾಗುತ್ತದೆ, ತಪ್ಪಿದಲ್ಲಿ ಬೆಲೆ ಸಿಗದಂತಾಗುತ್ತದೆ. ಯಾವ ಸಮಯಕ್ಕೆ ಯಾವ ಬೆಳೆಯನ್ನು ಬೆಳೆಯಬೇಕು. ಎಷ್ಟು ಸಾವಯವ ಮತ್ತು ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂಬುದನ್ನು ಅರಿತರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬಹುದಾಗಿದೆ ಎಂದು ರಾಜೇಗೌಡ ಹೇಳುತ್ತಾರೆ.

ಮಿಶ್ರ ಬೇಸಾಯ: ರಾಜೇಗೌಡ ಅವರು, ಮಿಶ್ರ ಬೇಸಾಯದಿಂದ ಅಧಿಕ ಲಾಭ ಪಡೆದುಕೊಳ್ಳುತ್ತಿದ್ದಾರೆ. ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡರೆ, ಒಂದಲ್ಲ ಒಂದು ಬೆಳೆಗೆ ಉತ್ತಮ ಬೆಲೆ ಇದ್ದೇ ಇರುತ್ತದೆ. ಮಿಶ್ರ ಬೇಸಾಯದಿಂದ ನಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದು. ಪ್ರತಿ ಬೆಳೆಗಳನ್ನು ದಿನನಿತ್ಯ ಪಾಲನೆ ಮಾಡಬಹುದು. ಜತೆಗೆ ಇಳುವರಿ ಹಾಗೂ ಬೆಲೆ ಹಾಗೂ ಯಾವ ಸಂದರ್ಭದಲ್ಲಿ ಮಾರಾಟ ಮಾಡಬೇಕು ಎಂಬುದರ ಅರಿವು ಹೊಂದಿರಬೇಕು ಎನ್ನುತ್ತಾರೆ ರಾಜೇಗೌಡ.

ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ: ರಾಜೇಗೌಡ ಕೃಷಿ ಮಾಡಿಕೊಂಡೇ ತಮ್ಮ ಕುಟುಂಬ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದಾರೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ. ಒಬ್ಬ ಮಗ ಶರತ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರೆ, ಎರಡನೇಯವನು ಬಿ.ಇ, ಎಂಟೆಕ್, ಪಿಎಚ್.ಡಿ ಪಡೆದು ಮೈಸೂರಿನ ವಾಸು ಪಿಯುಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಜೇಗೌಡ ಮದುವೆ ಸಂದರ್ಭದಲ್ಲಿ ಹಠ ಹಿಡಿದು ರೈತನ ಮಗಳನ್ನೇ ಮದುವೆಯಾಗಿದ್ದಾರೆ.

ವರ್ಷಕ್ಕೆ ಆರು ಕೊಯ್ಲು: ವರ್ಷಕ್ಕೆ ಆರು ಬಾರಿ ತೆಂಗು ಕೊಯ್ಲು ಮಾಡಿಸುತ್ತಾರೆ. ಕೆಜಿಗೆ ಕನಿಷ್ಠ 50 ರೂ. ಬೆಲೆ ಇದೆ. ವಾರ್ಷಿಕ 4 ಕ್ವಿಂಟಾಲ್ ಮೆಣಸು, 6 ಕ್ವಿಂಟಾಲ್ ಅಡಕೆ, ಬಾಳೆ, ತೇಗದಿಂದ ವಾರ್ಷಿಕ 15 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.

ಸಾಲ ಮಾಡದೆ ಕೃಷಿ: ರಾಜೇಗೌಡರು ತಮ್ಮ ಜಮೀನಿನಲ್ಲಿ ಕೃಷಿ ಮಾಡಲು ಯಾವುದೇ ಸರ್ಕಾರಿ ಸೌಲಭ್ಯ ಬಳಸಿಕೊಂಡಿಲ್ಲ. ಬ್ಯಾಂಕ್‌ನಿಂದ ಸಾಲವನ್ನು ಕೂಡ ಪಡೆಯದೆ ಯಶಸ್ವಿ ಕೃಷಿ ಮಾಡುತ್ತಿದ್ದಾರೆ. ಕೃಷಿಯಲ್ಲಿ ಗಳಿಸಿದ ಲಾಭವನ್ನು ಮತ್ತೆ ಕೃಷಿಗೆ ವಿನಿಯೋಗಿಸುವ ಮೂಲಕ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.