ಜಿಲ್ಲೆ

ಸಮಗ್ರ ಕೃಷಿಯಿಂದ ಲಾಭದಾಯಕ ಜೀವನ

* ಅಕ್ಕೂರಿನ ರೈತ ರಂಗಸ್ವಾಮಿಗೆ ಕುಟುಂಬವೇ ಬಲ

* ಬರಗಾಲದಲ್ಲೂ ಬರಪೂರ ಬೆಳೆ ಬೆಳೆದ ಕೃಷಿಕ

*ತೋಟಗಾರಿಕಾ ಬೆಳೆಯಲ್ಲಿ ಯಶಸ್ಸು

* ಕೊಟ್ಟಿಗೆ ಗೊಬ್ಬರಕ್ಕೆ ಆದ್ಯತೆ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಸಮಗ್ರ ಕೃಷಿ ಅನುಸರಿಸಿ ತೋಟಗಾರಿಕಾ ಬೆಳೆ ಬೆಳೆಯುವುದರ ಮೂಲಕ ಲಾಭದಾಯಕ ಕೃಷಿ ಮಾಡಿಕೊಂಡು ಯಶಸ್ಸು ಸಾಧಿಸಿದ್ದಾರೆ ರಾಮನಗರ ತಾಲೂಕಿನ ಕೂಟಗಲ್ ಹೋಬಳಿಯ ಅಕ್ಕೂರು ಗ್ರಾಮದ ರೈತ ರಂಗಸ್ವಾಮಿ.

ಇವರಿಗಿರುವ 6 ಎಕರೆ ಸ್ವಂತ ಜಮೀನಿನ ಜತೆಗೆ ಗುತ್ತಿಗೆ ಪಡೆದಿರುವ 6 ಎಕರೆ ಸೇರಿ ಒಟ್ಟು 12 ಎಕರೆ ಜಾಗದಲ್ಲಿ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಅಡಕೆ, ಮಾವು, ತೆಂಗು, ರೇಷ್ಮೆ, ಬಾಳೆ, ಜೇನುಕೃಷಿ, ಅರಣ್ಯ ಕೃಷಿ ಜತೆಗೆ ಈ ಭಾಗದಲ್ಲಿ ಅಪರೂಪವಾದ ಮೆಣಸು ಬೆಳೆಯುವ ಮೂಲಕ ಕೃಷಿಯಲ್ಲಿ ಲಾಭದತ್ತ ಮುಖ ಮಾಡಿ ಮಾದರಿ ರೈತರಾಗಿ ಗುರುತಿಸಿಕೊಂಡಿದ್ದಾರೆ.

ರೈತ ರಂಗಸ್ವಾಮಿ ಅವರ ಕುಟುಂಬ ಕೃಷಿಗೆ ಬೆನ್ನೆಲುಬಾಗಿ ನಿಂತಿದೆ. ಅಲ್ಲದೇ, ತಮ್ಮ ಜಮೀನಿನಲ್ಲಿ ಮಿಶ್ರ ಬೇಸಾಯ ಪದ್ಧತಿ ಅನುಸರಿಸುವ ಮೂಲಕ ನೀರಾವರಿಗೆ ಕೊರತೆಯಾಗದಂತೆ ಹನಿ ನೀರಾವರಿ ಅಳವಡಿಸಿಕೊಂಡು, ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರಕ್ಕೆ ಒತ್ತುಕೊಟ್ಟು ರಾಸಾಯನಿಕ ಗೊಬ್ಬರವನ್ನು ಕಡಿಮೆ ಬಳಸುವ ಮೂಲಕ ಆಧುನಿಕ ಕೃಷಿ ನಡೆಸಿದ್ದಾರೆ.

ತುಂತುರು, ಹನಿ ನೀರಾವರಿ 

ತೋಟದ ಬೆಳೆಗಳಿಗೆ ನೀರುಣಿಸಲು 5 ಕೊಳವೇಬಾವಿ ಕೊರೆಸಿದ್ದು, ನೀರು ಕೊರತೆಯಾಗದಂತೆ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಜತೆಗೆ ಹನಿನೀರು ಕೂಡ ವ್ಯಯವಾಗದಂತೆ ತುಂತುರು ನೀರಾವರಿ ಮುಖಾಂತರ ವ್ಯವಸಾಯ ಮಾಡುತ್ತಿದ್ದಾರೆ.

ಕೃಷಿಹೊಂಡ

ವಿದ್ಯುತ್ ಇಲ್ಲದ ಸಮಯದಲ್ಲಿ ಕೃಷಿಗೆ ನೀರುಣಿಸಲು ಅನುಕೂಲವಾಗುವಂತೆ 20/20ಅಡಿ ಅಗಲದ ಕೃಷಿಹೊಂಡ ನಿರ್ಮಿಸಿದ್ದು, ಸದಾ ತೋಟ ಹಸಿರಾಗಿರುವಂತೆ ಕೃಷಿಹೊಂಡ ಸಹಕಾರಿಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಏಲಕ್ಕಿ ಮತ್ತು ಪಚ್ಚಬಾಳೆ ಬೆಳೆಯುತ್ತಿದ್ದಾರೆ. ರೋಗ ನಿರೋಧಕ ಗಿಡ ಬೆಳೆಸಿ, ಬಾಳೆಕಾಯಿಗಳನ್ನು ರೋಗದಿಂದ ಕಾಪಾಡಲು ವೈಜ್ಞಾನಿಕ ರೀತಿಯಲ್ಲಿ ಕೃಷಿ ನಡೆಸುತ್ತಾ ಬಂದು ಪ್ರತಿವರ್ಷ 10 ಟನ್‌ಗಳಿಗೂ ಹೆಚ್ಚಿನ ಬಾಳೆ ಇಳುವರಿ ಪಡೆಯುತ್ತಿದ್ದಾರೆ.

ರೇಷ್ಮೆಯಲ್ಲಿ ಲಾಭ

ಕೃಷಿ ಜತೆಗೆ ವಾಣಿಜ್ಯ ಬೆಳೆಯಾಗಿ ಹಲವು ವರ್ಷಗಳಿಂದ ರಂಗಸ್ವಾಮಿ ಕುಟುಂಬ ರೇಷ್ಮೆ ಬೆಳೆಯಲ್ಲಿ ತೊಡಗಿದೆ. ಎರಡೂವರೆ ಎಕರೆ ಪ್ರದೇಶದಲ್ಲಿ ರೇಷ್ಮೆ ಕಡ್ಡಿ ನಾಟಿ ಮಾಡಿದ್ದು, ಹೆಚ್ಚಾಗಿ ರಾಸಾಯನಿಕ ಗೊಬ್ಬರ ಮೊರೆ ಹೋಗದೆ ಕೊಟ್ಟಿಗೆ ಗೊಬ್ಬರಕ್ಕೆ ಆದ್ಯತೆ ನೀಡಿದ್ದಾರೆ. ಈ ಮೂಲಕ ವೈಜ್ಞಾನಿಕ ರೀತಿಯಲ್ಲಿ ಉತ್ತಮ ರೇಷ್ಮೆ ಬೆಳೆದು ಲಾಭವನ್ನು ಪಡೆಯುತ್ತಾ ಬಂದಿದ್ದಾರೆ.

ಮಾವು ಬೆಳೆ

ರಂಗಸ್ವಾಮಿ ಅವರ ತೋಟದಲ್ಲಿ ವಿಶೇಷವಾಗಿ ಬಾದಾಮಿ ತಳಿ ಮಾವಿನ ಗಿಡಗಳಿದ್ದು, ಪ್ರತಿವರ್ಷ ಉತ್ತಮ ಆದಾಯ ಸಿಗುತ್ತಿದೆ. ತೋಟ ಒಣಗದಂತೆ ನೀರನ್ನು ಹಾಯಿಸುವುದರಿಂದ ತೊಟದಲ್ಲಿ ಮಾವಿನ ಮರಗಳು ಹುಲುಸಾಗಿ ಬೆಳೆದು ಉತ್ತಮ ಸಲು ನೀಡುತ್ತಿವೆ. ಈ ಬಾರಿ ಮಾವಿನ ಬೆಳೆಯಲ್ಲಿ ವಿರಳ ಎನಿಸಿದರೂ ರಂಗಸ್ವಾಮಿ ಅವರ ತೋಟದಲ್ಲಿ ಸಲು ಹೆಚ್ಚಿದೆ.

ಜೇನು ಸಾಕಣೆ

ಕಳೆದ ಮೂರು ವರ್ಷಗಳಿಂದ ಬೇಸಾದ ಜತೆಯಲ್ಲಿ ಜೇನು ಸಾಕಾಣಿಕೆಯಲ್ಲಿ ತೊಡಗಿರುವ ರೈತ ರಂಗಸ್ವಾಮಿ ಜೇನು ಸಾಕಣೆಯಿಂದ ಉತ್ತಮ ಆದಾಯಗಳಿಸುತ್ತಿದ್ದಾರೆ.

ಉಪ ಕಸುಬು

ಕೃಷಿ ಜತೆಗೆ ಉಪ ಕಸುಬಾಗಿ ಮೇಕೆ, ಕುರಿ ಹಾಗೂ ನಾಟಿ ಹಸು ಸಾಕಣೆ ಮಾಡುತ್ತಿದ್ದಾರೆ. ಅಲ್ಲದೇ, ಮನೆ ಬಳಕೆಗೆ ಗೋಬರ್‌ಗ್ಯಾಸ್ ಬಳಕೆ ಮಾಡುತ್ತಿದ್ದಾರೆ. ಸಾಲದೆಂಬಂತೆ ಕೈತೋಟ ನಡೆಸಿ ಮನೆಗೆ ಆಗುವಷ್ಟು ಕಬ್ಬು, ಮೆಣಸಿನ ಗಿಡಗಳು, ವಿವಿಧ ಹಣ್ಣಿನ ಗಿಡಗಳು, ಸೊಪ್ಪು, ಟೊಮ್ಯಾಟೊ, ಬದನೆಕಾಯಿ ಸೇರಿ ಮತ್ತಿತರ ತರಕಾರಿ ಕೃಷಿ ಜತೆಗೆ ಜಾನುವಾರುಗಳಿಗೆ ಹುಲ್ಲು, ಜೋಳ ಬೆಳೆಯುತ್ತಿದ್ದಾರೆ.

ಕೃಷಿ ನಮಗೆ ಕೈ ಹಿಡಿದಿದೆ. ಲಾಭ ಕಡಿಮೆ ಇರಬಹುದು. ಆದರೆ, ನಮ್ಮ ಕುಟುಂಬ ಕೃಷಿಯಿಂದಲೇ ಬದುಕು ಕಟ್ಟಿಕೊಂಡಿದೆ. ಕೃಷಿ ಎಂದಿಗೂ ಹಿಮ್ಮುಖವಾಗುವಂತೆ ಮಾಡಿಲ್ಲ. ಕೃಷಿ ಲಾಭದಾಯಕವೇ ಆಗಿದೆ. ಮುಂದೆ ಮತ್ತಷ್ಟು ವಿಶೇಷ ತಳಿಯ ತೋಟಗಾರಿಕೆ ಬೆಳೆ ಬೆಳೆಯಲು ಆಸಕ್ತನಾಗಿದ್ದೇನೆ.

ರಂಗಸ್ವಾಮಿ ರೈತ, ಅಕ್ಕೂರು

ಸಂಪರ್ಕ ಸಂಖ್ಯೆ: 8971307875

ರಂಗಸ್ವಾಮಿ, ರೈತ

ರಂಗಸ್ವಾಮಿ ಪ್ರಗತಿಪರ ಮಾದರಿ ಕೃಷಿಕರಾಗಿದ್ದು, ಮಿಶ್ರ ಬೇಸಾಯ ಸೇರಿ ಹತ್ತಾರು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತೋಟಗಾರಿಕೆ ಇಲಾಖೆ ಅವರ ತೋಟದ ಬೆಳೆಗಳಿಗೆ ಪೂರಕವಾಗಿ ಸರ್ಕಾರದಿಂದ ಸಿಗುವ ನೆರವು ಮತ್ತು ಕಾಲಕಾಲಕ್ಕೆ ಇಲಾಖೆಯಿಂದ ಮಾಹಿತಿ ನೀಡಿ ಪ್ರೋತ್ಸಾಹಿಸುತ್ತಿದೆ.

ಸಿದ್ದಗಂಗಯ್ಯ, ತೋಟಗಾರಿಕೆ ಅಧಿಕಾರಿ,ಕೂಟಗಲ್, ರಾಮನಗರ