ಯಳಂದೂರು: ಸಾವಯವ ಕೃಷಿಯಲ್ಲಿ ಯಶಸ್ಸು ಕಂಡು ಕೊಂಡಿರುವ ತಾಲೂಕಿನ ಹೊನ್ನೂರು ಗ್ರಾಮದ ರಂಗಸ್ವಾಮಿ- ಕೀರ್ತಿ ದಂಪತಿ ತಮ್ಮ ಬಳಿ ಇರುವ 3 ಎಕರೆ ಪ್ರದೇಶದಲ್ಲಿ ತೆಂಗು, ಬಾಳೆ, ಕರಿಮೆಣಸು, ಏಲಕ್ಕಿ, ವೀಳ್ಯದೆಲೆ, ಸಿಲ್ವರ್‌ಮರ , ಹುರಳಿ ಗಿಡ, ನುಗ್ಗೆ ಗಿಡ ಸೇರಿದಂತೆ ಸಮಗ್ರ ಬೆಳೆ ಬೆಳೆದು ವರ್ಷಕ್ಕೆ ಲಕ್ಷಾಂತರ ರೂ.ಆದಾಯ ಗಳಿಸುವ ಮೂಲಕ ಮಾದರಿಯಾಗಿದ್ದಾರೆ.
ಹೊನ್ನೂರು ಗ್ರಾಮದ ಉಪ್ಪಾರ ಬಡಾವಣೆ ನಿವಾಸಿಯಾಗಿರುವ ಈ ದಂಪತಿ 300 ತೆಂಗಿನ ಮರ, 300 ಅಡಕೆ ಮರ, 300 ಮೆಣಸು ಹಾಗೂ 100 ಏಲಕ್ಕಿ ಗಿಡ, 1000ಬಾಳೆ ಗಿಡ, ಅರಿಶಿಣ..ಹೀಗೆ ಮೂರು ಎಕರೆ ಪ್ರದೇಶದಲ್ಲಿ ಸಮಗ್ರ ಬೇಸಾಯಕ್ಕೆ ಆದ್ಯತೆ ನೀಡಿದ್ದರೆ. ಈ ಹಿಂದೆ ಬರಪೀಡಿತ ಪ್ರದೇಶದ ಜಮೀನಿನಲ್ಲಿ ಜೋಳ, ರಾಗಿ, ಹುರುಳಿ ಸೇರಿದಂತೆ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುತ್ತಿದ್ದರು. ಆಗ ಬೆಳೆಗಳು ಕೈ ಸೇರುತ್ತಿರಲ್ಲಿಲ್ಲ. ನಂತರ ಕೊಳೆವೆ ಬಾವಿ ಕೊರೆಸಿ ಜಮೀನಿನ ಸುತ್ತಲೂ ತೆಂಗು, ಅಡಕೆ ಗಿಡಗಳನ್ನು ಬೆಳೆಸಿ ಜೀವನ ಕಂಡುಕೊಂಡರು.
ಶಿಕ್ಷಕಿ ವೃತ್ತಿ ಬಿಟ್ಟು ಕೃಷಿಯತ್ತ ಮುಖ: ರೈತರಿಗೆ ಹೆಣ್ಣು ಕೊಡಲು ಹಿಂದೇಟು ಹಾಕುವ ಕಾಲ ಇದು. ಅದರಲ್ಲೂ ಉನ್ನತ ಶಿಕ್ಷಣ ಪಡೆದ ಹೆಣ್ಣು ಮಕ್ಕಳನ್ನು ಉದ್ಯೋಗದಲ್ಲಿರು ವವರಿಗೆ ಹೆಣ್ಣು ಕೊಟ್ಟು ಮದುವೆ ಮಾಡುವುದು ವಡಿಕೆಯಾಗಿದೆ. ಆದರೆ ಇದಕ್ಕೆ ತದ್ವಿರುದ್ಧವೆಂಬಂತೆ ಬಿ.ಇಡಿ ಪದವಿ ಮಾಡಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದರೂ, ಶಿಕ್ಷಕ ವೃತ್ತಿ ತ್ಯಜಿಸಿ ಯುವ ರೈತನನ್ನು 6 ವರ್ಷದ ಹಿಂದೆ ಕೀರ್ತಿ ಮದುವೆಯಾದರು.
ಆ ಬಳಿಕ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡರಲ್ಲದೆ, ಮಲೆನಾಡಿನ ಕಪ್ಪು ಮೆಣಸನ್ನು ನಮ್ಮಲ್ಲಿ ಬೆಳೆಯಬೇಕು ಎಂಬ ಹಠದಿಂದ ಕೊಡುಗು ಜಿಲ್ಲೆಯ ಸೋಮವಾರಪೇಟೆಯಿಂದ ಕಪ್ಪು ಮೆಣಸು ಗಿಡ ತಂದು ತಮ್ಮ ಜಮೀನಿನಲ್ಲಿ ನಾಟಿ ಮಾಡಿದರು. ಇದೀಗ ಜಮೀನಿನಲ್ಲಿ ಕಪ್ಪು ಚಿನ್ನವನ್ನೇ ಬೆಳೆದಿದ್ದು ಜತೆಗೆ ಏಲಕ್ಕಿ, ಬಾಳೆ, ನಿಂಬೆಗಿಡ, ನುಗ್ಗೆ…ಹೀಗೆ ವಿವಿಧ ಬೆಳೆಗಳನ್ನು ಮಾಡುವ ಮೂಲಕ ಕೃಷಿ ಮೇಲಿನ ತಮ್ಮ ಆಸಕ್ತಿಯನ್ನು ತೋರ್ಪಡಿಸಿದ್ದಾರೆ.
ತೆಂಗು, ಅಡಕೆಮರ ಮಧ್ಯದಲ್ಲಿನ ಖಾಲಿ ಸ್ಥಳದಲ್ಲಿ ಸುಮಾರು 300 ಕ್ಕೂ ಹೆಚ್ಚು ಏಲಕ್ಕಿ ಗಿಡ ನೆಟ್ಟಿದ್ದರೆ. ಕೇರಳದಿಂದ ಗಿಡಗಳನ್ನು ತರಲಾಗಿದ್ದು, ಒಂದೂವರೆ ಅಡಿ ಆಳ ಮತ್ತು ಒಂದೂವರೆ ಅಡಿ ಹಗಲ ಗುಂಡಿ ತೆಗೆದು ಗೊಬ್ಬರ ಮತ್ತು ತರಗೆಲೆಗಳನ್ನು ತುಂಬುವುದರ ಜತೆಗೆ ಅರ್ಧ ಅಡಿ ಮಣ್ಣು ಹಾಕಿ ಗಿಡ ನೆಟ್ಟಿದ್ದಾರೆ. ಪರಿಣಾಮ ಏಲಕ್ಕಿ ಗಿಡಗಳ ಬೇರು ಚೆನ್ನಾಗಿ ಹರಡಿಕೊಂಡಿವೆ. ಇದರೊಂದಿಗೆ ಸಗಣಿ ಗೊಬ್ಬರ, ಎರೆಹುಳು ಗೊಬ್ಬರವನ್ನೂ ಬುಡಕ್ಕೆ ನೀಡಿದ್ದಾರೆ. ಇದರಿಂದ ಗಿಡಗಳ ಬೆಳವಣಿಗೆ ಚೆನ್ನಾಗಿ ಆಗುತ್ತಿದ್ದು, 1 ವರ್ಷದಿಂದ ಪೋಷಣೆ ಮಾಡುತ್ತಿದ್ದಾರೆ. ಮುಂದಿನ 1 ವರ್ಷದಲ್ಲಿ ಫಸಲು ಬರುವ ಸಾಧ್ಯತೆ ಇದ್ದು, ಇದರಿಂದ ಕ್ವಿಂಟಾಲ್‌ಗೆ ಸುಮಾರು 60 ಸಾವಿರ ರೂ.ದೊರೆಯಬಹುದೆಂಬ ನಿರೀಕ್ಷೆ ಇದೆ. ಜತೆಗೆ ಒದು ಗಿಡದಿಂದ ಸುಮಾರು 500 ಕಿ.ಗ್ರಾಂ ದೊರೆಯಬಹುದು ಎಂದು ಕೀರ್ತಿ ವಿಜಯವಾಣಿಗೆ ಮಾಹಿತಿ ನೀಡಿದರು.
ಕಾಳುಮೆಣಸು: ಜಮೀನಿನಲ್ಲಿ ಕಾಳುಮೆಣಸನ್ನು ಸಿಲ್ವರ್ ಮರಕ್ಕೆ ಹೊಂದಿಕೊಂಡಂತೆ ಬೆಳೆಸಲಾಗುತ್ತಿದೆ. ಈ ಬೆಳೆ ಹೆಚ್ಚು ಉಪಯುಕ್ತವಾಗಿದ್ದು, ಆದಾಯದ ಮೂಲವಾಗಿದೆ. ಹೀಗಾಗಿ ಸುಮಾರು 300 ಗಿಡಗಳನ್ನು ಬೆಳೆಸಲಾಗಿದೆ.
ಬಾಳೆ ಸುತ್ತ ಹುರುಳಿ, ಅರಿಶಿಣ: ಬಾಳೆ ಸುತ್ತಲೂ ಹುರುಳಿ ಗಿಡಗಳನ್ನು ಬೆಳೆಸುವುದರ ಮೂಲಕ ಖಾಲಿ ಜಾಗವನ್ನು ಈ ದಂಪತಿ ಉಪಯೋಗ ಮಾಡಿಕೊಂಡಿದ್ದಾರೆ. ಗಿಡದ ಸುತ್ತಲಿನ ಕಳೆಯನ್ನು ತೆಗೆದು ಹುರುಳಿಯನ್ನು ರಕ್ಷಣೆ ಮಾಡಲಾಗುತ್ತಿದೆ. ಇದರೊಂದಿಗೆ ಅರಿಶಿಣ ಬೆಳೆಗೂ ಆದ್ಯತೆ ನೀಡಲಗಿದ್ದು, ಆ ಮೂಲಕ ಸಮಗ್ರ ಕೃಷಿಯನ್ನು ಅವಲಂಬಿಸಿ ಹೆಚ್ಚು ಆದಾಯ ಕಂಡುಕೊಂಡಿದ್ದಾರೆ.
ಜಮೀನಿನಲ್ಲಿ ತೆಂಗು, ಅಡಕೆ, ಮೆಣಸು, ಏಲಕ್ಕಿ, ಬಾಳೆ, ಅರಿಶಿಣ, ಹುರುಳಿ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯುವ ಮೂಲಕ ಸಮ ಗ್ರ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಗಿದೆ. ಅಲ್ಲದೆ ಇದರಿಂದ ಪ್ರಗತಿ ಹೊಂದಬಹುದುದಾಗಿದ್ದು, ಇಂತಹ ಕ್ರಮದಿಂದ ಹೆಚ್ಚು ಕೆಲಸಗಾರರ ಅವಶ್ಯಕತೆ ಇರುವುದಿಲ್ಲ. ಜತೆಗೆ ಹೆಚ್ಚು ಆದಾಯವನ್ನೂ ಪಡೆಯಬಹುದು.
ಕೀರ್ತಿ, ರೈತ ಮಹಿಳೆ