ಚನ್ನಪಟ್ಟಣ: ರೈತ ಸಮುದಾಯ ಹೋರಾಟದ ಮೂಲಕ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದ್ದ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ರೈತ ಕುಲದ ಮಹಾನ್ ಚೇತನ ಎಂದು ರಾಜ್ಯ ರೈತಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಬಣ್ಣಿಸಿದರು.
ನಗರದ ಶತಮಾನೋತ್ಸವ ಭವನದಲ್ಲಿ ರಾಜ್ಯ ರೈತಸಂಘ ಗುರುವಾರ ಆಯೋಜಿಸಿದ್ದ ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ 84ನೇ ಜನ್ಮದಿನಾಚರಣೆ ಹಾಗೂ ರೈತ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ರೈತರಿಗೆ ಅನ್ಯಾಯವಾದಾಗ ನಂಜುಂಡಸ್ವಾಮಿ ಅವರು ರೈತ ಸಂಘದ ಮೂಲಕ ರಾಜ್ಯದ ಉದ್ದಗಲಕ್ಕೂ ಹೋರಾಟ ಮಾಡಿ ನ್ಯಾಯ ದೊರಕಿಸಿಕೊಟ್ಟವರು ಎಂದು ತಿಳಿಸಿದರು.
ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ರೈತಸಂಘದ ನೇತಾರರಾದ ಪ್ರೊ. ನಂಜುಂಡಸ್ವಾಮಿ, ಪುಟ್ಟಣ್ಣಯ್ಯ, ಎಚ್.ಎಸ್.ರುದ್ರಪ್ಪ, ಎನ್.ಡಿ.ಸುಂದರೇಶ್, ಸೋಮಲಿಂಗಯ್ಯ ಸೇರಿ ಅನೇಕ ಮಹನೀಯರು ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಂಘಟನೆಯನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆಸಬೇಕು. ಈ ಮೂಲಕ ಅವರ ಆತ್ಮಕ್ಕೆ ಶಾಂತಿ ದೊರಕಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.
ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಇಂದಿನ ಕೆಲ ಹೋರಾಟಗಾರರೇ ರಿಯಲ್ ಎಸ್ಟೇಟ್ ಮಾಫಿಯಾ ನಡೆಸುತ್ತಿದ್ದಾರೆ. ವೈಯಕ್ತಿಕ ಹಿತಾಸಕ್ತಿಗಾಗಿ ಚಳವಳಿಗಳು ಬಲಿಯಾಗುತ್ತಿವೆ. ಹಸಿರು ಟವೆಲ್ ಹಣ ಮಾಡುವ ವಸ್ತುವಾಗಿ ಬದಲಾಗಿದೆ. ಹೋರಾಟಗಾರರೇ ಭ್ರಷ್ಟಾಚಾರಿಗಳಾದರೆ ಸಮಾಜಕ್ಕೆ ದೊಡ್ಡ ಅಪಾಯ ಎಂದು ಆತಂಕ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಸು.ತ.ರಾಮೇಗೌಡ, ರೈತ ಮುಖಂಡರಾದ ತೊರೆಹೊಸೂರು ಕುಮಾರಸ್ವಾಮಿ, ಖಾಸಿಂ ಆಲಿ ಆಜಾದ್, ಸುನೀತಾ ಪುಟ್ಟಣ್ಣಯ್ಯ, ಅಶ್ವತ್ಥ್‌ನಾರಾಯಣ ಅರಸು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಭಾವಚಿತ್ರವನ್ನು ಎತ್ತಿನಗಾಡಿಯಲ್ಲಿಟ್ಟು ಮಂಗಳವಾರಪೇಟೆಯಿಂದ ಕಾರ್ಯಕ್ರಮದ ವೇದಿಕೆವರೆಗೂ ಮೆರವಣಿಗೆ ನಡೆಸಲಾಯಿತು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಎಂ ರಾಮು, ಜಿಲ್ಲಾಧ್ಯಕ್ಷ ಮಲ್ಲಯ್ಯ, ಕಸಾಪ ಜಿಲ್ಲಾಧ್ಯಕ್ಷ ಸಿಂ.ಲಿಂ.ನಾಗರಾಜು, ರೈತ ಮುಖಂಡರಾದ ನುಲೇನೂರು ಎಂ.ಶಂಕರಪ್ಪ, ವಕೀಲ ಗೋವಿಂದರಾಜು, ತಾಲೂಕು ಅಧ್ಯಕ್ಷ ರಾಮೇಗೌಡ, ಗೌರವಾಧ್ಯಕ್ಷ ಕೃಷ್ಣಪ್ಪ ಸೇರಿ ಸಾವಿರಾರು ರೈತರು ಭಾಗವಹಿಸಿದ್ದರು.
ಸರ್ಕಾರಕ್ಕೆ ಎಚ್ಚರಿಕೆ: ಎಚ್‌ಡಿಕೆ ಸರ್ಕಾರ ೋಷಿಸಿದ ರೈತರ ಸಾಲ ಮನ್ನಾ ಯೋಜನೆ ಸಂಪೂರ್ಣ ಜಾರಿಯಾಗಿಲ್ಲ. ಚುನಾವಣೆಗೂ ಮುನ್ನ ಪ್ರತಿ ರೈತರ 1 ಲಕ್ಷ ರೂ. ಸಾಲಮನ್ನಾ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದ ಸಿಎಂ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದು ಕೊಂಡಿಲ್ಲ. ಬಿಜೆಪಿ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ಸಾಲ ಮನ್ನಾ ಯೋಜನೆ ಪ್ರಕಟಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಚಾಮರಸ ಮಾಲೀ ಪಾಟೀಲ್ ಎಚ್ಚರಿಸಿದರು
ರಾಮನಗರ ಜಿಲ್ಲೆ ಹೆಸರು ಬದಲಿಸುವುದು ಬೇಡ
ಚನ್ನಪಟ್ಟಣ: ಜಿಲ್ಲೆಗೆ ‘ನವಬೆಂಗಳೂರು’ ಎಂದು ನಾಮಕರಣ ಮಾಡುವ ಉದ್ದೇಶದ ಹಿಂದೆ ಭೂಮಾಫಿಯಾ ಕೈವಾಡ ಇದೆ. ಜಿಲ್ಲೆಗೆ ರಾಮನಗರ ಎಂದೇ ಹೆಸಲಿರಲಿ. ಯಾವುದೇ ಕಾರಣಕ್ಕೂ ಹೆಸರು ಬದಲಿಸಬಾರದು ಎಂದು ಹಿರಿಯ ಪತ್ರಕರ್ತ ಸು.ತ.ರಾಮೇಗೌಡ ಹೇಳಿದರು.
ನಗರದ ಶತಮಾನೋತ್ಸವ ಭವನದಲ್ಲಿ ರೈತಸಂಘ ಆಯೋಜಿಸಿದ್ದ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಜನ್ಮದಿನಾಚರಣೆ ಹಾಗೂ ರೈತ ಜಾಗೃತಿ ಸಮಾವೇಶದಲ್ಲಿ ನವ ಬೆಂಗಳೂರು ವಿಚಾರವಾಗಿ ವಿಷಯ ಮಂಡಿಸಿದ ಅವರು, ಈ ಭಾಗದ ಜನತೆಗೆ ಆಡಳಿತ ಯಂತ್ರ ಹತ್ತಿರವಾಗಲಿ ಎಂದು ರಾಮನಗರ ಜಿಲ್ಲೆ ರಚಿಸಲಾಗಿದೆ. ಹೆಸರಿನಿಂದ ಅಭಿವೃದ್ಧಿ ಅಸಾಧ್ಯ. ನಿಜವಾಗಲೂ ಸರ್ಕಾರಕ್ಕೆ ಜಿಲ್ಲೆಯ ಮೇಲೆ ಕಾಳಜಿ ಇದ್ದರೆ ಜಿಲ್ಲೆಯನ್ನು ‘ರಾಮನಗರ’ ಎಂಬ ಹೆಸರಿನಿಂದಲೇ ಅಭಿವೃದ್ಧಿಗೊಳಿಸಲಿ. ಈ ಹೆಸರನ್ನು ನವ ಬೆಂಗಳೂರು ಎಂದು ಬದಲಿಸಿ, ಇಲ್ಲಿನ ಭೂಮಿ ಮೇಲೆ ಕಣ್ಣಿಟ್ಟಿರುವ ಕೆಲಮಂದಿ ಬೇಡದ ವಿಚಾರ ಪ್ರಸ್ತಾಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬೀಜ ಆಂದೋಲನದ ರೂವಾರಿ ಗಾಯತ್ರಿ ಮಾತನಾಡಿ, ಕೇಂದ್ರ ಸರ್ಕಾರ ರೂಪಿಸಿರುವ ಬೀಜ ಕಾಯಿದೆ-2019 ಕಾನೂನು ಕರಡು ರೂಪದಲ್ಲಿದೆ. ಈ ಕಾಯ್ದೆ ಜಾರಿಯಾದರೆ ಖಾಸಗಿ ಸಂಸ್ಥೆಗಳು ಬೀಜಗಳನ್ನು ನಿಯಂತ್ರಿಸುತ್ತವೆ. ನಪುಂಸಕ ಬೀಜ ನೀಡುತ್ತವೆ. ಇಂತಹ ಬೀಜಗಳಿಂದ ರೈತಕುಲಕ್ಕೆ ಗಂಡಾಂತರ ಕಾದಿದೆ. ಈ ಕಾಯ್ದೆಯನ್ನು ರೈತರು ವಿರೋಧಿಸಬೇಕು ಎಂದು ಕರೆನೀಡಿದರು.
ಸಮಾವೇಶದಲ್ಲಿ ಭೂ ಗುತ್ತಿಗೆ ಕಾಯ್ದೆ ಹಾಗೂ ಪೌರತ್ವ ಮಸೂದೆ ಬಗ್ಗೆ ಡಾ.ಎಚ್.ವಾಸು ವಿಚಾರ ಮಂಡಿಸಿದರು. ಬಂಡವಾಳ ಶಾಹಿಗಳ ಕೈಗೆ ಭೂಮಿ ನೀಡುವ ಹುನ್ನಾರವಾದ ಭೂ ಗುತ್ತಿಗೆ ಕಾಯ್ದೆ ಖಂಡಿಸುವುದು, ಸಿಎಎ, ಎನ್‌ಸಿಆರ್, ಎನ್‌ಆರ್‌ಪಿ ಜಾರಿಗೆ ತಡೆಯೊಡ್ಡುವುದು, ಈ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುವುದು ಸೇರಿ ಸಂಘಟನೆ ವಿಚಾರವಾಗಿ ಹಲವು ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಉಪಾಧ್ಯಕ್ಷ ಎಂ.ರಾಮು, ಜಿಲ್ಲಾಧ್ಯಕ್ಷ ಮಲ್ಲಯ್ಯ ಇತರರು ಇದ್ದರು.
ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಲಕ್ಷಾಂತರ ರೈತರಿಗೆ ಹೋರಾಟದ ದೀಕ್ಷೆ ನೀಡಿದ್ದಾರೆ. ಆದರೆ ಕೆಲವರು ಸ್ವಾರ್ಥ ಸಾಧನೆಗಾಗಿ ಸಂಘಟನೆ ಒಡೆಯುತ್ತಿದ್ದಾರೆ. ಕಾರ್ಯಕರ್ತರು ಈ ಬಗ್ಗೆ ತಲೆಕೆಡಿಸಿಕೊಳ್ಳಬಾರದು. -ಚಾಮರಸ ಮಾಲೀ ಪಾಟೀಲ್ ಗೌರವಾಧ್ಯಕ್ಷ, ರೈತಸಂಘ