ಚನ್ನಗಿರಿ: ಪಟ್ಟಣದ ಸರ್ಕಾರಿ ಶಿವಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜು ಆಂಗ್ಲಭಾಷೆ ಸಹಾಯಕ ಪ್ರಾಧ್ಯಾಪಕ ಜಿ.ಕೆ.ಸುರೇಶ್ ವಿದ್ಯಾರ್ಥಿನಿಯರ ಜತೆ ಅಸಭ್ಯ ವರ್ತನೆ ತೋರಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ.
ಕಾಲೇಜಿನ ಅಂತಿಮ ಬಿಎ ತರಗತಿ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ಮಾತನಾಡುವುದಲ್ಲದೆ, ಮೈಕೈ ಮುಟ್ಟುತ್ತಾರೆ ಎಂದು ವಿದ್ಯಾರ್ಥಿನಿಯರು ಬುಧವಾರ ಚನ್ನಗಿರಿ ಠಾಣೆಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗುರುವಾರ ಪ್ರಾಧ್ಯಾಪಕನನ್ನು ಬಂಧಿಸಿದ್ದಾರೆ.
ಕಳೆದ ಒಂದು ವರ್ಷದಿಂದಲೂ ಈ ಪ್ರಾಧ್ಯಾಪಕ ನಮ್ಮ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ಕುರಿತು ಅನೇಕ ಬಾರಿ ಪ್ರಾಚಾರ್ಯರ ಗಮನಕ್ಕೆ ತಂದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದೂರು ನೀಡಿದ್ದೇವೆ ಎಂದಿದ್ದಾರೆ.
ಈ ಕುರಿತು ಕಾಲೇಜಿನ ಪ್ರಾಚಾರ್ಯ ಹಾಲಸಿದ್ದಪ್ಪ ಪ್ರತಿಕ್ರಿಯೆ ನೀಡಿದ್ದು, ಅವರು ಸೇವೆಗೆ ಬಂದ ದಿನದಿಂದ ನನ್ನ ಬಳಿ ಯಾವ ವಿದ್ಯಾರ್ಥಿಗಳು ದೂರನ್ನು ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಇಂತಹ ಆರೋಪ ಕೇಳಿಬಂದಿದ್ದು, ನಂಬಲು ಆಗಲಿಲ್ಲ. ಆದರೂ, ಪ್ರಾಧ್ಯಾಪಕನಿಗೆ ಕರೆದು ಬುದ್ಧಿ ಹೇಳಲಾಗಿತ್ತು. ಅಷ್ಟರಲ್ಲೇ ಅವರ ವಿರುದ್ಧ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.