ಮಂಗಳೂರು: ವಕಾಲತ್ತು ಮಾನವನ ಬುದ್ದಿಮತ್ತೆಯನ್ನು ಅವಲಂಬಿಸಿದೆ. ಕೃತಕ ಬುದ್ದಿಮತ್ತೆಯಿಂದ ಈ ಕೆಲಸ ಸಾಧ್ಯವಿಲ್ಲ. ಆದ್ದರಿಂದ ಕಾನೂನು ವಿದ್ಯಾರ್ಥಿಗಳು ಎಐ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂದು ಕೇರಳದ ತ್ರಿಶೂರಿನ ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸೋನಿಯಾ ಕೆ.ದಾಸ್ ಹೇಳಿದರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು, ಸ್ನಾತಕೋತ್ತರ ಅಧ್ಯಯನ ಮತ್ತಯ ಸಂಶೋಧನ ಕೇಂದ್ರದಲ್ಲಿ ಹಳೇ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕ ರಕ್ಷಕ ಸಂಘದ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಕಾನೂನು ಹಬ್ಬ ‘ಲೆಕ್ಸ್ ಅಲ್ಟಿಮಾ 2025’ನ್ನು ಶುಕ್ರವಾರ ಉದ್ಘಾಟಸಿ ಅವರು ಮಾತನಾಡಿದರು.
ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಕ್ಷಿದಾರರೊಂದಿಗೆ ಸಂವಾದ, ಹೇಳಿಕೆಗಳನ್ನು ದಾಖಲಿಸುವುದು, ಸಾಕ್ಷಿ ವಿಚಾರಣೆ ಮೊದಲಾದ ಕೆಲಸಗಳನ್ನು ನಿರ್ವಹಿಸಲು ಎಐನಿಂದ ಸಾಧ್ಯವಿಲ್ಲ. ಅದಕ್ಕೆ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಕಾನೂನು ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆ ವಕೀಲರಿಗೆ ಪರ್ಯಾಯವಲ್ಲ ಎಂದರು.
ರಾಷ್ಟ್ರಮಟ್ಟದ ಇಂತಹ ಕಾನೂನು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಪಡೆದ ಅನುಭವಗಳು ಭವಿಷ್ಯದಲ್ಲಿ ಸಹಕಾರಿಯಾಗಲಿದೆ. ಉತ್ತಮ ವಕೀಲರಾಗಲು ವಿದ್ಯಾರ್ಥಿಗಳು ಪರಸ್ಪರ ಸಂಬಂಧಗಳನ್ನು ಉತ್ತಮ ಪಡಿಸಿಕೊಳ್ಳುವುದು ಅಗತ್ಯ ಎಂದರು.
ಇದೇ ವೇಳೆ ಪ್ಲೇಸ್‌ಮೆಂಟ್ ಬ್ರೋಶರ್ ಬಿಡುಗಡೆ ಮಾಡಲಾಯಿತು. ಸ್ಪರ್ಧೆಯ ವಿಜೇತರಿಗೆ ನೀಡುವ ಟ್ರೋಫಿಗಳನ್ನು ಅನಾವರಣಗೊಳಿಸಲಾಯಿತು.
ಪ್ರಾಂಶುಪಾಲ ಡಾ. ತಾರಾನಾಥ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಂದ ನಡೆಯುವ ಅಭಯದಾನ ಕಾರ್ಯಕ್ರಮಕ್ಕೆ ಪೂರಕವಾಗಿ ಕಾನೂನು ಕಾಲೇಜು ಸ್ಥಾಪನೆಯಾಗಿದೆ. ರಾಷ್ಟ್ರೀಯ ಕಾನೂನು ಹಬ್ಬ ಸ್ಪರ್ಧೆಯಲ್ಲಿ ಆಯೋಜಿಸುವ ಸ್ಪರ್ಧೆಗಳು ಮೂಲಕ ವಿದ್ಯಾರ್ಥಿಗಳ ಔದ್ಯೊಗಿಕ ಬದುಕುಕಿಗೂ ಹೆಚ್ಚಿನ ನೆರವಾಗಲಿದೆ ಎಂದರು.
ವಿದ್ಯಾರ್ಥಿ ಕಾರ್ಯಕಾರಿ ಸಮಿತಿ ಮುಖ್ಯ ಕಾರ್ಯದರ್ಶಿ ಸತ್ಯಾತ್ಮ ಭಟ್, ವಿದ್ಯಾರ್ಥಿ ಕಾರ್ಯದರ್ಶಿ ಶ್ರೀವರ ಪಿ, ವಿದ್ಯಾರ್ಥಿ ಸಂಯೋಜಕರಾದ ಪ್ರಿಯಾಂಕಾ ಥಾಕರ್, ವಿಂದ್ಯಾ ಕೆ., ಅಶ್ರ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಚಾಲಕಿ ಡಾ.ಸುಮಾ ಸುರೇಶ್ ಕೋಗಿಲ್‌ಗೇರಿ ಸ್ವಾಗತಿಸಿ, ವಿದ್ಯಾರ್ಥಿ ಸಂಯೋಜಕಿ ಅಶ್ವಥಿ ಕೃಷ್ಣ ವಂದಿಸಿದರು. ಆಯಿಷಾ ಮನಾಲ್ ಕಾರ್ಯಕ್ರಮ ನಿರೂಪಿಸಿದರು.