ಪ್ರಶಾಂತ ಭಾಗ್ವತ, ಉಡುಪಿ
ಮನೋರಂಜಕ, ಅಚ್ಚರಿಯ ಹಾಗೂ ಅಪರಿಚಿತವಾಗಿದ್ದ ಅಪರೂಪದ ಜಾದೂ ಕಲೆಯನ್ನು ಅಭ್ಯಸಿಸಿ, 60ರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ಆ ಕಲೆಗೆ ಮಾನ್ಯತೆ ದೊರಕಿಸಿಕೊಟ್ಟ ಹೆಗ್ಗಳಿಗೆ ಉಡುಪಿಯ ಜಾದೂಗಾರ ಪ್ರೊ.ಶಂಕರ್ ಅವರಿಗೆ ಸಲ್ಲುತ್ತದೆ.
ದೇಶವಷ್ಟೇ ಅಲ್ಲದೆ, ಯುಎಸ್ಎ, ಯುಕೆ, ಸ್ವಿಜರ್ಲ್ಯಾಂಡ್, ಜರ್ಮನಿ, ಯುಎಇ, ಶ್ರೀಲಂಕಾ, ಮಲೇಷಿಯಾ, ಮಾರಿಷಸ್ ಮುಂತಾದ ಅನೇಕ ವಿದೇಶಿ ನೆಲದಲ್ಲಿ ಜಾದೂ ಕೈಚಳಕ ತೋರಿದ್ದಾರೆ. 18 ಜನರನ್ನೊಳಗೊಂಡ ಗಿಲಿಗಿಲಿ ಮ್ಯಾಜಿಕ್ ತಂಡದೊಂದಿಗೆ ಹತ್ತು ಸಾವಿರಕ್ಕೂ ಅಧಿಕ ಪ್ರದರ್ಶನ ನೀಡಿ, ಭಾರತದ ಹಿರಿಮೆ ಹೆಚ್ಚಿಸಿದ್ದಾರೆ.
ಉಡುಪಿಯಲ್ಲಿ ಮೂರು ಬಾರಿ (ಗಿಲಿಗಿಲಿ-94, ಗಿಲಿಗಿಲಿ-97 ಹಾಗೂ ಗಿಲಿಗಿಲಿ-2001) ಜಾಗತಿಕ ಜಾದೂ ಸಮ್ಮೇಳನ ಆಯೋಜಿಸಿ ಜಗತ್ತಿನ ಪ್ರಸಿದ್ಧ ಜಾದೂಗಾರರಿಂದ ಪ್ರದರ್ಶನ ಏರ್ಪಡಿಸಿದ್ದರು. ಅಳಿದು ಹೋಗುತ್ತಿದ್ದ ದೇಶ-ವಿದೇಶಗಳ ಬೀದಿಬದಿಯ ಜಾದೂಗಾರರಿಗೂ ಉತ್ತಮ ವೇದಿಕೆ ಒದಗಿಸಿದರು. ಭಾರತದ ಸಾಂಪ್ರದಾಯಿಕ ಜಾದೂ 'ದ ಗ್ರೇಟ್ ಇಂಡಿಯನ್ ರೋಪ್ ಟ್ರಿಕ್'ಅನ್ನು ಈ ಸಮ್ಮೇಳನದಲ್ಲಿ ಪರಿಚಯಿಸಿದರು. ಭಾರತದಲ್ಲೆಲ್ಲೂ ಪ್ರದರ್ಶನ ನೀಡಲು ಒಪ್ಪದ ವಿಶ್ವದ ಶ್ರೇಷ್ಠ ಎಸ್ಕೇಪ್ ಏಕ್ಟ್ ಜಾದೂಗಾರ ಡೀನ್ ಗನರ್ಸನ್ 3ನೇ ಜಾಗತಿಕ ಜಾದೂ ಸಮ್ಮೇಳನಕ್ಕೆ ಆಗಮಿಸಿದ್ದಲ್ಲದೆ, ಶಂಕರ ಅವರ ಮನೆಯಲ್ಲೇ ವಾಸ್ತವ್ಯ ಮಾಡಿದ್ದರು.
ಎನ್ಸಿಸಿ ಕೆಡೆಟ್, ಚಿತ್ರ ಕಲಾವಿದ, ಕವಿ, ಕತೆಗಾರರೂ ಆಗಿದ್ದಾರೆ. 8ನೇ ತರಗತಿಯಲ್ಲಿದ್ದಾಗಲೇ ಬೆನ್ನು ಬಿಡದ ಬೇತಾಳ ಕಾದಂಬರಿ ಬರೆದು ಪ್ರಕಟಿಸಿದ್ದರು. ಯಕ್ಷಗಾನ, ತಾಳಮದ್ದಳೆ, ನಾಟಕ, ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಪುತ್ರ ತೇಜಸ್ವಿ (ಜ್ಯೂ.ಶಂಕರ)ಗೂ ಜಾದೂ ತರಬೇತಿ ನೀಡಿದ್ದು, ಆತ 3ನೇ ವಯಸ್ಸಿನಲ್ಲಿಯೇ ಅಮೆರಿಕಾದಲ್ಲಿ ಜಗತ್ ಪ್ರಸಿದ್ಧ 'ಹೌದಿನಿ ಜಾದೂ' ಪ್ರದರ್ಶಿಸಿದ್ದಾನೆ. ಆತನೂ ಸಹ ಜಗತ್ತಿನ ಶ್ರೇಷ್ಠ ಜಾದೂ ದಿಗ್ಗಜರಲ್ಲಿ ಒಬ್ಬನಾಗಿದ್ದಾನೆ.
ಪ್ರೊ.ಶಂಕರ ಅವರು ಕಾಸರಗೋಡು ಬದಿಯಡ್ಕ ಸಮೀಪದ ಶಿಮ್ಲಡ್ಕದಲ್ಲಿ ಶಂಭಟ್ಟ ಮತ್ತು ಪರಮೇಶ್ವರಿ ದಂಪತಿಯ ಮಗನಾಗಿ 1951ರಲ್ಲಿ ಜನಿಸಿದರು. ಸ್ವಭಾವತಹ ಕುತೂಹಲಿ, ಸಾಹಸಿಯಾಗಿದ್ದ ಶಂಕರ, ಚಿಕ್ಕವನಿರುವಾಗ ಡೊಂಬರಾಟದವರ ಜಾದೂ ಆಟ ನೋಡಿ ಆ ವಿದ್ಯೆಯತ್ತ ಆಸಕ್ತಿ ಹುಟ್ಟಿತು. ಹೈಸ್ಕೂಲ್ನಲ್ಲಿರುವಾಗಲೇ ಚಿಕ್ಕ ಜಾದೂ ಕಾರ್ಯಕ್ರಮ ನೀಡಿದರು. 14ನೇ ವಯಸ್ಸಿನಲ್ಲಿ ಬೆಳ್ತಂಗಡಿಯ ಸಮಾಜ ಮಂದಿರದಲ್ಲಿ ಕೋವಿಯಿಂದ ಹೊಡೆದ ಗುಂಡು ಹಿಡಿಯುವುದು, ಜೀವಂತ ಸಮಾಧಿಯಂತಹ ಅಪಾಯಕಾರಿ ಜಾದೂ ಪ್ರದರ್ಶಿಸಿ ಗಮನ ಸೆಳೆದರು. ಡಾ. ಕೋಟ ಶಿವರಾಂ ಕಾರಂತ್ ಅವರೂ ಸಹ ಶಂಕರರ ಜಾದೂ ಕಾರ್ಯಕ್ರಮ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೈಸೂರು ಪೇಟವನ್ನೂ ತೊಡಿಸಿ ಸನ್ಮಾನಿಸಿ, ಗೌರವಿಸಿದ್ದರು.
* ಗೆಳೆಯರೊಂದಿಗೆ ಕಣ್ಣಿಗೆ ಪ್ಲಾಸ್ಟರ್ ಬ್ಯಾಂಡೇಜ್ ಕಟ್ಟಿಕೊಂಡು ಬೈಕ್ನಲ್ಲಿ ಮಂಗಳೂರಿನಿಂದ ಕಾರವಾರದವರೆಗೆ 'ಜಾಗೃತಿಗಾಗಿ ಜಾದೂ' ಜಾಥಾ. * ರೋಗಿಗಳ ಆರೈಕೆಗಾಗಿ ಆಸ್ಪತ್ರೆಗಳಲ್ಲೂ ಕೈಚಳಕದ ಮೂಲಕ ದೈಹಿಕ, ಮಾನಸಿಕ ಸದೃಢರಾಗಲು ಪ್ರಯೋಗ.
* ವಿಶ್ವಶ್ರೇಷ್ಠ ಕಲಾವಿದನಿಗೆ ತವರೂರು ಸನ್ಮಾನ ಡಿ.14ರಂದು ಮಧ್ಯಾಹ್ನ 3:30ಕ್ಕೆ ಪ್ರೊಫೆಸರ್ ಶಂಕರ ಅಭಿನಂದನಾ ಸಮಿತಿ ಉಡುಪಿ, ಅಂತಾರಾಷ್ಟ್ರೀಯ ಜಾದು ಕಲಾವಿದ ಪ್ರೊ.ಶಂಕರ ಅವರ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದು, ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಹವಾನಿಯಂತ್ರಿತ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ವಿದುಷಿ ಮಂಜರಿಚಂದ್ರ ಅವರ ಶಿಷ್ಯರಿಂದ 'ನೃತ್ಯ ಸಿಂಚನ' ನಡೆಯಲಿದ್ದು, ಬಳಿಕ ಧರ್ಮದರ್ಶಿ, ಡಾ. ಹರಿಕೃಷ್ಣ ಪುನರೂರು ಉದ್ಘಾಟಿಸಲಿದ್ದಾರೆ. ಜಯಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿಯ ತೋನ್ಸೆ ಜಯಕೃಷ್ಣ ಶೆಟ್ಟಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಪಾಲ್ಗೊಳ್ಳಲಿದ್ದಾರೆ. ಪ್ರೊ. ಶಂಕರ ಕುರಿತಾದ ಪ.ರಾಮಕೃಷ್ಣ ಶಾಸ್ತ್ರಿ ರಚಿಸಿದ ಪುಸ್ತಕವನ್ನು ನಾಡೋಜ ಪ್ರೊ. ಕೆ.ಪಿ. ರಾವ್ ಬಿಡುಗಡೆ ಮಾಡಲಿದ್ದಾರೆ. ಪ್ರೊ.ಶಂಕರ ಕುರಿತಾಗಿ ತೇಜಸ್ವಿ ಶಂಕರ್ ಮಾತನಾಡಲಿದ್ದಾರೆ. ಸಂಜೆ 6:30ಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ವಿನಯ್ ಹೆಗಡೆ ಅವರಿಂದ 'ಗಾಳಿಯಲ್ಲಿ ಚಿತ್ತಾರ' ಎನ್ನುವ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 7ಕ್ಕೆ ಪ್ರೊ.ಶಂಕರ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಖ್ಯಾತ ವಾಗ್ಮಿ ಹಾಗೂ ಇಂದ್ರಜಾಲ ಪ್ರವೀಣ ಓಂ ಗಣೇಶ್ ಉಪ್ಪುಂದ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ನಂತರ ಸಂಘ-ಸಂಸ್ಥೆಗಳು ಹಾಗೂ ಅಭಿಮಾನಿಗಳಿಗೆ ಪ್ರೊ.ಶಂಕರ ಅವರನ್ನು ಗೌರವಿಸಲು ಅವಕಾಶ ನೀಡಲಾಗಿದೆ ಎಂದು ಅಭಿನಂದನಾ ಸಮಿತಿ ತಿಳಿಸಿದೆ.