ಜಿಲ್ಲೆ

ಸಾಹಿತಿಗಳ ಬಾಯಿ ಮುಚ್ಚಿಸಲು ಯತ್ನ : ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆತಂಕ

ತುಮಕೂರು: ಸಾಹಿತಿಗಳು, ಹೋರಾಟಗಾರರು ಹಾಗೂ ಲೇಖಕರನ್ನು ಬಾಯಿ ಮುಚ್ಚಿಸಲು ಅಮಾನವೀಯ ಶಕ್ತಿಗಳು ಹೆಚ್ಚು ಸಂಘಟಿತವಾಗುತ್ತಿವೆ ಎಂದು ಲೇಖಕ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದಲ್ಲಿ ವೀಚಿ ಸಾಹಿತ್ಯ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ವೀಚಿ ಸಾಹಿತ್ಯ ಪ್ರಶಸ್ತಿ -2019ರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನೈತಿಕ ಹೋರಾಟದ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದು, ಇಂತಹ ಸನ್ನಿವೇಶದಲ್ಲಿ ಅತ್ಯಂತ ವಿವೇಚನೆ ಹಾಗೂ ಸಂಯಮದಿಂದ ಯೋಚಿಸಿ ಹೆಜ್ಜೆ ಇಡಬೇಕಿದೆ ಎಂದರು.

ಸಾಹಿತ್ಯವು ತನ್ನೊಳಗಿನ ಅಭಿವ್ಯಕ್ತಿ ಸ್ವಾತಂತ್ರ್ಯ, ಲೋಕಜ್ಞಾನ ಹಾಗೂ ಆತ್ಮಗೌರವದಿಂದಾಗಿಯೇ ಇಂದಿಗೂ ಜಗತ್ತಿನೊಳಗಡೆ ಮತ್ತೆ ಮತ್ತೆ ಚರ್ಚೆಗೀಡಾಗುತ್ತಿದೆ. ಸಿದ್ಧಾಂತ, ತತ್ವಗಳನ್ನು ಮಾರಿಕೊಂಡಿರುವ ಸ್ವಾರ್ಥ ರಾಜಕಾರಣಿಗಳಿಂದಾಗಿ ರಾಜಕಾರಣವು ಅನೈತಿಕವಾಗಿದೆ. ಆದರೆ, ಮತದಾರರು ಇಂತಹವರನ್ನೇ ಚುನಾಯಿಸಿ ಕಳುಹಿಸುತ್ತಿರುವುದು ಬೇಸರ ಸಂಗತಿ. ಇಂತಹ ಎಲ್ಲ ಆತಂಕಗಳ ನಡುವೆ ಬರಹಗಾರರಿಗೆ, ಹೋರಾಟಗಾರರು ತಾಳ್ಮೆಯಿಂದಲೇ ಪರಿಸ್ಥಿತಿ ಅವಲೋಕಿಸಬೇಕಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಮಹಿಳೆಯರಿಗೆ ಸಮಾನತೆ ಸಿಕ್ಕಿಲ್ಲ. ಸಮಾಜವೂ ಕಿಂಚಿತ್ತು ಬದಲಾಗಿಲ್ಲ. ಅಂತರ್ಜಾತಿ ಮದುವೆಯಾದ ದಂಪತಿಗೆ ಮನೆಗಳು ಸಿಗುವುದೇ ಕಷ್ಟವಾಗಿದೆ. ಬರಹದ ಮೂಲಕ ತಮ್ಮ ಬದುಕನ್ನು ವಿಮರ್ಶಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಲೇಖಕಿ ಡಾ.ವಸುಂದರಾಭೂಪತಿ ಹೇಳಿದರು. ವ್ಯವಸಾಯ ಹಾಗೂ ಸಾಹಿತ್ಯ ಕೃಷಿಯನ್ನು ಏಕಕಾಲದಲ್ಲಿ ಮಾಡುತ್ತಿದ್ದ ಅಪರೂಪದ ಸಾಹಿತಿ ವೀಚಿ. ಅವರು ಯಾವುದೇ ಪದವಿ ಪಡೆದವರಲ್ಲ. ಸಾಹಿತ್ಯಾಸಕ್ತರು, ವಿದ್ವಾಂಸರ ಜತೆ ಒಡನಾಟವಿಟ್ಟುಕೊಂಡಿದ್ದರು.

ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ವೀಚಿ ಅವರ ಹೆಸರಿನಲ್ಲಿ 2002ರಿಂದ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ನೀಡುತ್ತಾ ಬರಲಾಗಿದೆ ಎಂದು ವೀಚಿ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಸವಯ್ಯ ತಿಳಿಸಿದರು. ಸಾಹಿತಿ ಡಾ.ಕರಿಗೌಡಬೀಚನಹಳ್ಳಿ, ಲೇಖಕ ಡಾ.ರವಿಕುಮಾರ್ ನೀಹ, ಪಾಲಿಕೆ ಸದಸ್ಯ ಎಚ್.ಮಲ್ಲಿಕಾರ್ಜುನಯ್ಯ, ವೀಚಿ ಸಾಹಿತ್ಯ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎಚ್.ನಾಗರಾಜು ಉಪಸ್ಥಿತರಿದ್ದರು. ರಾಣಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಶಸ್ತಿ ಪ್ರದಾನ: ಕಥೆಗಾರ ಎಸ್.ಗಂಗಾಧರಯ್ಯ ಅವರ ‘ದೇವರ ಕುದುರೆ’ ಕಥಾ ಸಂಕಲನ ಹಾಗೂ ಸುರೇಶ್ ನಾಗಲಮಡಿಕೆ ಅವರ ‘ಹಲವು ಬಣ್ಣದ ಹಗ್ಗ’ ವಿಮರ್ಶಾಕೃತಿಗಳಿಗೆ ವೀಚಿ ಸಾಹಿತ್ಯ ಪ್ರಶಸ್ತಿ, ಭುವನಾ ಹಿರೇಮಠ ಅವರ ‘ಟ್ರಯಲ್ ರೂಮಿನ ಅಪ್ಸರೆ’ಯರು ಕವನ ಸಂಕಲನಕ್ಕೆ ವೀಚಿ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಹಾಗೂ ಯಕ್ಷಗಾನ ಕಲಾವಿದ ಸಿ.ಎನ್.ಹನುಮಯ್ಯ ಅವರಿಗೆ ವೀಚಿ ಜಾನಪದ ಪ್ರಶಸ್ತಿ, ಎಂ.ಆರ್.ವೆಂಕಟೇಶ್‌ಗೆ ಕನಕಕಾಯಕ ಪ್ರಶಸ್ತಿಯನ್ನು ಪ್ರೊ.ಎಸ್. ಜಿ.ಸಿದ್ದರಾಮಯ್ಯ ಪ್ರದಾನ ಮಾಡಿದರು.