ಬೆಂಗಳೂರು: ಪ್ರೋ.ಎಂ.ವಿ ರಾಜೀವ್ ಗೌಡ (MV Rajeev Gowda) ಅವರನ್ನು ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಯ (SITK) ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ. ರಾಜೀವ್ ಗೌಡ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಈ ಜವಬ್ದಾರಿ ವಹಿಸಲಾಗಿದೆ.
ಬೆಂಗಳೂರು: ಹೊಸದಾಗಿ ರಚನೆಗೊಂಡಿರುವ ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಯ (ಎಸ್.ಐ.ಟಿ.ಕೆ.) ಉಪಾಧ್ಯಕ್ಷರಾಗಿ ರಾಜ್ಯ ಸಭೆಯ ಮಾಜಿ ಸದಸ್ಯ ಪ್ರೊ.ಎಂ.ವಿ.ರಾಜೀವ್ ಗೌಡ ಅಧಿಕಾರ ವಹಿಸಿಕೊಂಡರು.
ಈ ಹಿಂದೆ ರಾಜ್ಯ ಯೋಜನಾ ಮಂಡಳಿ ಎಂಬ ಹೆಸರಿನಲ್ಲಿ ಅಸ್ತಿತ್ವದಲ್ಲಿದ್ದ ಸಂಸ್ಥೆಗೆ ಈಗ ರಾಜ್ಯ ಪರಿವರ್ತನಾ ಸಂಸ್ಥೆ ಎಂದು ಮರು ನಾಮಕರಣ ಮಾಡಲಾಗಿದೆ. ಇದು ಕರ್ನಾಟಕದ ಪಾಲಿಗೆ ನೀತಿ ಆಯೋಗದ ಹೊಣೆಗಾರಿಕೆಗೆ ಸಮಾನವಾಗಿದೆ.
ಪ್ರೊ.ಎಂ.ವಿ.ರಾಜೀವ್ ಗೌಡ ಹಿರಿಯ ಅಧಿಕಾರಿಗಳೊಡನೆ ಸಂವಾದ ನಡೆಸಿ, ದೇಶದ ಇತರೆ ರಾಜ್ಯಗಳು ಅನುಸರಿಸುವಂತೆ ಕರ್ನಾಟಕವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ಅವಕಾಶ ದೊರೆತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.