ಜಿಲ್ಲೆ

ಎಸ್‌ಜೆಸಿಇ ಅಭಿವೃದ್ಧಿಗೆ ಶ್ರಮಿಸಿದ್ದ ಪ್ರೊ.ಎಂ.ಎಚ್.ಧನಂಜಯ ನಿಧನ

ಮೈಸೂರು: ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ಸಲಹೆಗಾರ ಪ್ರೊ.ಎಂ.ಎಚ್.ಧನಂಜಯ(92) ವಯೋಸಹಜ ಕಾಯಿಲೆಯಿಂದ ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ನಿಧನರಾದರು.

ಇವರಿಗೆ ಪುತ್ರ ಇದ್ದಾರೆ. ಚಾಮುಂಡಿಬೆಟ್ಟ ತಪ್ಪಲಿನ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.


ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ, 1974ರಲ್ಲಿ ಪ್ರಾಂಶುಪಾಲರಾಗಿ ಬಡ್ತಿ ಪಡೆದಿದ್ದರು. ಕಾಲೇಜಿನ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದರು.

1991ರಲ್ಲಿ ನಿವೃತ್ತರಾದ ಬಳಿಕ ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕರಾಗಿ 3 ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ಇದರೊಂದಿಗೆ, ಎಕ್ಸೆಲ್ ಸಾಫ್ಟ್ ಟೆಕ್ನಾಲಜಿ ಮತ್ತು ಎಕ್ಸೆಲ್ ಪಬ್ಲಿಕ್ ಸ್ಕೂಲ್‌ನ ಚೇರ‌್ಮನ್ ಆಗಿ ಕಾರ್ಯನಿರ್ವಹಿಸಿದ್ದರು.

ಸುತ್ತೂರು ಶ್ರೀಗಳ ಸಂತಾಪ


ಪ್ರೊ.ಎಂ.ಎಚ್. ಧನಂಜಯ ಅವರ ನಿಧನಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಎಸ್‌ಜೆಸಿಇ ಉಚ್ಛ್ರಾಯ ಸ್ಥಿತಿಗೇರುವಲ್ಲಿ ಅವರ ಕೊಡುಗೆ ಗಮನಾರ್ಹ. ನೊಯಿಡಾ, ದುಬೈ, ಮಾರಿಷಸ್‌ನಲ್ಲಿ ಜೆಎಸ್‌ಎಸ್ ತಾಂತ್ರಿಕ ಸಂಸ್ಥೆಗಳನ್ನು ಸ್ಥಾಪಿಸಲು ಅವರೇ ಕಾರಣರು ಎಂದು ಹೇಳಿದ್ದಾರೆ.


ಪ್ರೊ. ಧನಂಜಯ ಅವರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳ ಒಡನಾಟದಲ್ಲಿದ್ದರು. ಹಲವಾರು ಸಂಘ-ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿದ್ದರು. ಅವರ ಅಪೂರ್ವ ಪ್ರತಿಭೆಗಾಗಿ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಿದ್ದವು. ಶ್ರೀ ರಾಜೇಂದ್ರ ಸ್ವಾಮೀಜಿ ಅವರ ಕಾಲದಿಂದಲೂ ಶ್ರೀಮಠ ಮತ್ತು ಮಹಾವಿದ್ಯಾಪೀಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ಚೇತನ, ಕರ್ಮಯೋಗಿ ಆಗಿದ್ದರು. ಅವರ ಅಗಲಿಕೆಯಿಂದ ಸಂಸ್ಥೆ ನಿರ್ವಾತವನ್ನು ಅನುಭವಿಸುವಂತಾಗಿದೆ ಎಂದು ಹೇಳಿದ್ದಾರೆ.