ಮಂಡ್ಯ: ಪ್ರಾಧ್ಯಾಪಕ, ಪತ್ರಕರ್ತ ಹಾಗೂ ಸಮಾಜಮುಖಿಯಾಗಿ ವೈಚಾರಿಕತೆ ವಿಚಾರವನ್ನು ಜನಸಾಮಾನ್ಯರಲ್ಲಿ ಬಿತ್ತುವುದರ ಜತೆಗೆ ವಿಡಂಬನಾ ಬರಹದ ಮೂಲಕ ಸಮಾಜ ತಿದ್ದುವ ಕೆಲಸವನ್ನು ಪ್ರೊ.ಎಚ್.ಎಲ್ ಕೇಶವಮೂರ್ತಿ ತಮ್ಮ ಜೀವನದುದ್ದಕ್ಕೂ ಮಾಡಿದರು ಎಂದು ನಿವೃತ್ತ ಪ್ರಾಂಶುಪಾಲೆ ಡಾ.ಲೀಲಾ ಅಪ್ಪಾಜಿ ಹೇಳಿದರು.
ನಗರದ ಗಾಂಧಿಭವನದಲ್ಲಿ ಪ್ರೊ.ಎಚ್.ಎಲ್.ಕೇಶವಮೂರ್ತಿ ಪ್ರತಿಷ್ಠಾನದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಸಂಘಟಕಿ ಬೀಬೀ ಫಾತಿಮಾ ಅವರಿಗೆ ಪ್ರೊ.ಎಚ್‌ಎಲ್‌ಕೆ ವೈಚಾರಿಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಸಮಾಜಕ್ಕೆ ಗುರುವಿನ ಸ್ಥಾನದಲ್ಲಿದ್ದ ಕೇಶವಮೂರ್ತಿ ವೈಚಾರಿಕ ಚಿಂತನೆ ಬಿತ್ತುವ ಕೆಲಸವನ್ನು ಮಾಡಿದವರು. ಪ್ರಾಧ್ಯಾಪಕರಾಗಿ ಶಿಕ್ಷಣದ ಮಹತ್ವ ಜತೆಗೆ ಅರಿವು ಹಂಚಿದವರು. ಅದೇ ರೀತಿ ಸಮಾಜದಲ್ಲಿ ಮೌಲ್ಯದ ಮಹತ್ವ ಸಾರಿದವರು ಎಂದು ಹೇಳಿದರು.
ಉತ್ತಮ ವಿಚಾರಗಳಿಗೆ ಅಕ್ಷರರೂಪ ಕೊಟ್ಟು ಸಮಾಜದ ಒಳಿತು ಬಯಸಿದ್ದ ಅವರ ಲೇಖನಗಳನ್ನು ಓದುವಾಗ ನಕ್ಕು ಸುಮ್ಮನಾಗಿ ಬಿಟ್ಟರೆ ಅರ್ಥವಾಗುತ್ತಿರಲಿಲ್ಲ. ಬದಲಾಗಿ ಅವರ ವಿಷಯದ ಬಗ್ಗೆ ಆಲೋಚನೆ ಮಾಡಿದರೆ ಅವರು ಏನು ಹೇಳಿದ್ದಾರೆ ಎಂಬುದು ತಿಳಿಯುತಿತ್ತು. ವೈಚಾರಿಕ ಪ್ರಶಸ್ತಿಯನ್ನು ಸಿರಿಧಾನ್ಯ ಕೃಷಿಕರಿಗೆ ನೀಡಿರುವುದು ಹೆಚ್ಚಿನ ಮಹತ್ವ ತಂದಿದೆ. ಸಿರಿಧಾನ್ಯ ಸೇವನೆಯಿಂದ ಆರೋಗ್ಯಕರ ಜೀವನ ಸಾಧ್ಯ ಎಂಬ ಅರಿವು ಜನಸಾಮಾನ್ಯರಲ್ಲಿ ಮೂಡಿದೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ಸಂಕಷ್ಟದಲ್ಲಿರುವ ಜಿಲ್ಲೆಯ ಜನತೆ ನೀರನ್ನು ಮಿತ ಬಳಸಿ ಕೃಷಿ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಶಸ್ತಿ ಪುರಸ್ಕೃತೆ ಬೀಬೀ ಜಾನ್ ಮಾತನಾಡಿ, ಸಿರಿಧಾನ್ಯ ಉತ್ಪಾದನೆಯಿಂದ ನಮ್ಮ ಬದುಕಿನಲ್ಲಿ ಬದಲಾವಣೆಯಾಗಿದೆ. ಹಂತ ಹಂತವಾಗಿ ಮುನ್ನಡೆ ಕಂಡಿದ್ದು, ಹಲವರಿಗೆ ಉದ್ಯೋಗ ದೊರಕಿದೆ. ಮತ್ತಷ್ಟು ಜನರಿಗೆ ಕೆಲಸ ನೀಡಬೇಕೆಂಬ ಆಸೆ ಇದೆ. ಸಿರಿಧಾನ್ಯ ಉತ್ಪಾದಿಸಿ, ಸಂಸ್ಕರಿಸಿ ಮಾರಾಟ ಮಾಡುವುದರ ಜತೆಗೆ ಸಿರಿಧಾನ್ಯದ ಆಹಾರ ತಯಾರಿಸಿ ಜನರಿಗೆ ಮಾರಾಟ ಮಾಡುತ್ತಿದ್ದೇವೆ. ಜನತೆ ಒಳ್ಳೆಯ ಊಟ ಮಾಡಲಿ ಎಂಬ ಆಶಯ ನಮ್ಮದಾಗಿದೆ ಎಂದರು.
ಮೈಸೂರಿನ ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಕೃಷ್ಣಪ್ರಸಾದ ಮಾತನಾಡಿ, ಸಿರಿಧಾನ್ಯದ ಬಗ್ಗೆ ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾನಿಲಯ ಮಹತ್ವ ನೀಡಿಲ್ಲ. ಹೆಚ್ಚಿನ ಪ್ರೋತ್ಸಾಹ ಸಿರಿಧಾನ್ಯಕ್ಕೆ ಸಿಗಬೇಕಾಗಿದೆ. ಹಲವು ಕಡೆ ಪಾಲಿಷ್ ಮಾಡಿದ ಸಿರಿಧಾನ್ಯ ಮಾರಾಟ ಮಾಡಲಾಗುತ್ತಿದೆ. ಅದನ್ನು ಬಳಸುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು. ಕೆ.ಬೋರಯ್ಯ, ಕೆ.ರಾಜೇಂದ್ರ ಪ್ರಸಾದ್ ಇತರರಿದ್ದರು. ಇದೇ ವೇಳೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ತೀರ್ಥ ಗ್ರಾಮದ ಬೀಬೀ ಜಾನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.