ಕನ್ನಡದ ಖ್ಯಾತ ಲೇಖಕ ಹಾಗೂ ವಿಮರ್ಶಕ, ನೇರ ನಿಷ್ಠುರ ಮಾತುಗಳಿಗೆ ಹೆಸರಾಗಿದ್ದ ಪ್ರೊ.ಜಿ.ಎಚ್.ನಾಯಕ್(88) ಶುಕ್ರವಾರ ನಗರದ ಟಿ.ಕೆ.ಬಡಾವಣೆಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಬಹುಕಾಲದಿಂದ ಅವರು ವಯೋಸಹಜ ಆರೋಗ್ಯ ಸಮಸ್ಯೆಯಲ್ಲಿದ್ದ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಮೃತರಿಗೆ ಪತ್ನಿ, ಸಾಮಾಜಿಕ ಹೋರಾಟಗಾರ್ತಿ ಮೀರಾ ನಾಯಕ್, ಪುತ್ರಿ ಕೀರ್ತಿ ನಾಯಕ್ ಇದ್ದಾರೆ. ಜಿ.ಎಚ್.ನಾಯಕ್ ಮೈಸೂರಿನಲ್ಲಿ ವಾಸವಾಗಿದ್ದರಿಂದ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ 2 ಗಂಟೆಗೆ ನಗರದ ಚಾಮುಂಡಿಬೆಟ್ಟದ ತಪ್ಪಿಲಿನ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶನಿವಾರ ಮಧ್ಯಾಹ್ನ 12 ಗಂಟೆವರೆಗೂ ಟಿ.ಕೆ.ಬಡಾವಣೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಶುಕ್ರವಾರ ಸಾಹಿತಿ ದೇವನೂರು ಮಹಾದೇವ ದಂಪತಿ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಕಾಳಚೆನ್ನೇಗೌಡ, ಪ್ರೊ.ಕೆ.ಟಿ.ವೀರಪ್ಪ, ಪ್ರೊ.ವೈ.ಸಿ.ಭಾನುಮತಿ, ರಂಗಕರ್ಮಿಗಳಾದ ಮಂಡ್ಯ ರಮೇಶ್, ಮೈಮ್ ರಮೇಶ್, ಪ್ರಶಾಂತ್ ಹಿರೇಮಠ, ಹುಲುಗಪ್ಪ ಕಟ್ಟಿಮನಿ, ಚಿಂತಕರಾದ ನಾ.ದಿವಾಕರ್, ಸಂಸ್ಕೃತಿ ಸುಬ್ರಹ್ಮಣ್ಯ, ರಾಮಣ್ಣ, ಸಾ.ರಾ.ಸುದರ್ಶನ್, ಗಣೇಶ್ ಅಮೀನಗಡ, ಧನಂಜಯ ಸೇರಿದಂತೆ ಇತರರು ಅಂತಿಮ ದರ್ಶನ ಪಡೆದರು.
ಉತ್ತರ ಕನ್ನಡದ ಅಂಕೋಲ ತಾಲೂಕಿನ ಸೂರ್ವೆಯಲ್ಲಿ 1935 ಸೆಪ್ಟಂಬರ 18ರಂದು ಜನಿಸಿದ್ದ ಜಿ.ಎಚ್.ನಾಯಕ ಅವರು ವಿದ್ಯಾರ್ಥಿ ದೆಸೆಯಿಂದಲೂ ಮೈಸೂರಿನಲ್ಲಿಯೇ ನೆಲೆಸಿದ್ದು, ಅವರು ಮೈಸೂರಿಗರೇ ಆಗಿ ಹೋಗಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ಜಿ.ಎಚ್.ನಾಯಕ ಎಂದು ಚಿರಪರಿಚಿತರಾಗಿದ್ದ ಅವರ ಪೂರ್ಣ ಹೆಸರು ಗೋವಿಂದರಾಯ ಹಮ್ಮಣ್ಣ ನಾಯಕ . ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬಹುಕಾಲ ಅಧ್ಯಾಪಕರಾಗಿದ್ದ ಅವರು ಅಪಾರ ಶಿಷ್ಯ ವೃಂದ ಹೊಂದಿದವರಾಗಿದ್ದಾರೆ. ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲೇ ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿದ್ದರು. ಬಳಿಕ ಅವರು ತಮ್ಮ ದೇಹದಲ್ಲಿ ಶಕ್ತಿ ಇರುವವರೆಗೂ ಹಲವಾರು ಸಾಮಾಜಿಕ ಹೋರಾಟಗಳಲ್ಲಿ ನಿರಂತರ ಸಕ್ರಿಯರಾಗಿದ್ದರು.
ಕನ್ನಡ ಸಾಹಿತ್ಯಾಸಕ್ತರಲ್ಲಿ ಜಿ.ಎಚ್.ನಾಯಕ್ ಬಗ್ಗೆ ಗೊತ್ತಿಲ್ಲ ಎನ್ನುವವರಿಲ್ಲ. ಅವರು ಕೇವಲ ವಿಮರ್ಶಕರಲ್ಲ, ವಿಮರ್ಶೆಯ ಗುರು. ಕೇವಲ ಸಾಹಿತಿಯಲ್ಲ, ಅವರು ಕನ್ನಡ ಸಂಸ್ಕೃತಿಯ ಧೀಮಂತ ವಕ್ತಾರ. ಬದುಕಿ ಬರೆದ, ಅಂದಂತೆ ನಡೆದುಕೊಂಡ ಒಂದು ಸಾತ್ವಿಕ ತೇಜಸ್ಸು ಕೂಡ ಆಗಿದ್ದರು. ವಿಮರ್ಶೆ ಜತೆಗೆ ಸಂಪಾದನೆ, ಕನ್ನಡ ಸಣ್ಣಕಥೆಗಳು, ಹೊಸಗನ್ನಡ ಕವಿತೆಗಳನ್ನೂ ರಚಿಸಿದ್ದರು. ಬಾಳು ಎನ್ನುವುದು ಅವರ ಆತ್ಮಕಥನ.
ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷೆ (1984), ನಿಜದನಿ (1988), ವಿನಯ ವಿಮರ್ಶೆ (1991), ಸಕಾಲಿಕ (1995), ಗುಣ ಗೌರವ (2002), ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002), ಕೃತಿ ಸಾಕ್ಷಿ (2006), ಸ್ಥಿತಿ ಪ್ರಜ್ಞೆ (2007)ಮತ್ತೆ ಮತ್ತೆ ಪಂಪ (2008), ಸಾಹಿತ್ಯ ಸಮೀಕ್ಷೆ (2009), ಉತ್ತರಾರ್ಧ (2011) ಅವರ ಪ್ರಮುಖ ಕೃತಿಗಳು.
ಅವರ ‘ಉತ್ತರಾರ್ಧ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ನಿರಪೇಕ್ಷ’ ವಿಮರ್ಶಾ ಕೃತಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ಪ್ರಶಸ್ತಿ, ‘ನಿಜದನಿ’ ವಿಮರ್ಶಾ ಕೃತಿಗೆ ‘ವಿ.ಎಂ.ಇನಾಂದಾರ ಸ್ಮಾರಕ’ ಪ್ರಶಸ್ತಿ ಲಭಿಸಿವೆ. ಜತೆಗೆ 2010ನೇ ಸಾಲಿನ ‘ಪಂಪ ಪ್ರಶಸ್ತಿ’ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.
‘ಕನ್ನಡ ಸಣ್ಣಕಥೆಗಳು’, ‘ಹೊಸಗನ್ನಡ ಕವಿತೆಗಳು’, ‘ಸಂವೇದನೆ (ಅಡಿಗರ ಗೌರವ ಗ್ರಂಥ)’, ‘ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ’,‘ಆತ್ಮಕಥನ- ಬಾಳು’, ‘ಶತಮಾನದ ಕನ್ನಡ ಸಾಹಿತ್ಯ (ಸಂಪುಟ - 1,2)’ ಕೃತಿಗಳಿಗೆ ಸಂಪಾದಕರೂ ಆಗಿದ್ದರು.