ಶಿವಮೊಗ್ಗ: ಹಿಂದು ಎಂಬ ಪದವು ಅಮಾನುಷವಾದುದ್ದು ಎಂದಿರುವ ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಒಬ್ಬ ಅಯೋಗ್ಯ. ಆತನ ಬಗ್ಗೆ ಇನ್ನೂ ಕೆಟ್ಟ ಪದ ಬಳಕೆ ಮಾಡಬಹುದು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಭಗವಾನ್‌ಗೆ ಆ ಹೆಸರು ಯಾಕೆ ಇಟ್ಟಿದ್ದಾರೋ ಗೊತ್ತಿಲ್ಲ. ಆತ ಇಷ್ಟೊಂದು ಅಯೋಗ್ಯ ಆಗುತ್ತಾನೆಂದು ಗೊತ್ತಿದ್ದರೆ ಅವರ ಅಪ್ಪ-ಅಮ್ಮ ಕೂಡ ಆ ಹೆಸರಿಡುತ್ತಿರಲಿಲ್ಲ ಎಂದರು.
ಶೃಂಗೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಾಧು ಸಂತರ ರಕ್ಷಣೆಗೆ ಕರೆ ಕೊಟ್ಟಿದ್ದಾರೆ. ಅವರ ಹೃದಯದಲ್ಲಿದ್ದ ಮಾತು ಹೊರಬಂದಿದೆ. ಅದನ್ನು ನಾನು ಗೌರವಿಸುತ್ತೇನೆ. ಆದರೆ ಸಾಧುಸಂತರ ರಕ್ಷಣೆಗೆ ಮುಂಬರುವ ಬಜೆಟ್‌ನಲ್ಲಿ ಎಷ್ಟು ಅನುದಾನ ಮೀಸಲಿಡುವಿರಿ ಎಂದು ರಾಜ್ಯ ಸರ್ಕಾರಕ್ಕೆ ಈಶ್ವರಪ್ಪ ಪ್ರಶ್ನೆ ಮಾಡಿದರು.
ಡಿ.ವಿ.ಸದಾನಂದಗೌಡ ಸಿಎಂ ಆಗಿದ್ದಾಗ 109 ಕೋಟಿ ರೂ., ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ 128 ಕೋಟಿ ರೂ. ಅನ್ನು ಮಠಗಳಿಗೆ ನೀಡಿದ್ದೇವೆ. ಬಹಳಷ್ಟು ಸಣ್ಣಸಣ್ಣ ಮಠ ಮಂದಿರಗಳಿಗೆ ಅನುದಾನದ ಅಗತ್ಯವಿದೆ. ಡಿ.ಕೆ.ಶಿವಕುಮಾರ್ ದೈವ ಭಕ್ತರಿದ್ದು, ದೇವರ ಮೇಲೆ ನಂಬಿಕೆ ಇದೆ. ಭಕ್ತಿ ಇದೆ. ಹಾಗಾಗಿ ಮಠಮಂದಿರದಗಳಿಗೆ ಅನುದಾನ ನೀಡಿದರೆ ಒಳ್ಳೆಯದಾಗಲಿದೆ ಎಂದು ಸಲಹೆ ನೀಡಿದರು.