ಚಿತ್ರದುರ್ಗ: ಸಂಘಟನೆ ಬಲವರ್ಧನೆಯಿಂದ ನಮ್ಮ ಹೋರಾಟಗಳಿಗೆ ಜಯ ಸಿಗುತ್ತದೆ ಎಂದು ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಸಿ. ಚಂದ್ರಶೇಖರ್ ಹೇಳಿದರು.
ಸಾಮಾಜಿಕ ಸಂಘರ್ಷ ಸಮಿತಿ ಚಿತ್ರದುರ್ಗ ಹಾಗೂ ತುಮಕೂರಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ಆಶ್ರಯದಲ್ಲಿ ನಗರದ ಆದಿ ಕರ್ನಾಟಕ ಹಾಸ್ಟೆಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರೊ.ಬಿ. ಕೃಷ್ಣಪ್ಪ ಅವರ ಜನ್ಮದಿನ ಧೃವೀಕೃತ ದಲಿತ ಚಳವಳಿಯ ಕಟ್ಟುವಿಕೆ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷ್ಣಪ್ಪ ಅವರು ದಲಿತರ ಹಕ್ಕುಗಳೆಡೆ ಜಾಗೃತಿ ಮೂಡಿಸಲು ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದರು ಎಂದು ತಿಳಿಸಿದರು.
ಸಮಿತಿ ಮೂಲಕ ಮಾದಿಗ ಸಮುದಾಯ ಮಾತ್ರವಲ್ಲದೆ ತುಳಿತಕ್ಕೆ ಒಳಗಾದ ಶೋಷಿತ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರ ಏಳಿಗೆಗೆ ಹಾಗೂ ಅವರಿಗೆ ನ್ಯಾಯ ಒದಗಿಸಲು ಶ್ರಮಿಸಿದರು. ಈಗ ಅನೇಕ ಸಂಘಟನೆಗಳಾಗಿದ್ದರೂ ಆಲೋಚನಾ ಕ್ರಮಗಳು ಹೆಚ್ಚಾಗಿವೆ. ಚಳವಳಿ ನಿರಂತರವಾಗಿದ್ದರೂ ದಬ್ಬಾಳಿಕೆ, ಅತ್ಯಾಚಾರ, ಜಾತಿ ನಿಂದನೆಯಂಥ ಘಟನೆಗಳು ನಿಂತಿಲ್ಲ. ಇವುಗಳ ವಿರುದ್ಧ ನಮ್ಮ ಕೂಗು ಆಗಾಗ್ಗೆ ಎಚ್ಚರಿಕೆ ಕೊಡುತ್ತಿದೆ. ಜಾತಿಯನ್ನು ಪ್ರೀತಿಸದೆ ಮನುಕುಲವನ್ನು ಪ್ರೀತಿಸುವ ನಿಟ್ಟಿನಲ್ಲಿ ಸಂಘಟನೆಗಳು ಸಾಗಬೇಕಿದೆ ಎಂದರು.
ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ಮಾರೆಪ್ಪ ಅವರು ಮಾತನಾಡಿ, ಧೃವಿಕರಣ, ಕಟ್ಟುವಿಕೆ ಹಾಗೂ ಮುನ್ನಡೆಸುವುದು ಮಾದಿಗ ಸಮುದಾಯವರಿಂದ ಸಾಧ್ಯವಾಗಿದೆ. ಒಳಮೀಸಲು ಜಾರಿಗೊಳಿಸುವಂತೆ ಸುಪ್ರಿಂಕೋರ್ಟ್ ತೀರ್ಪು ನೀಡಿ ಆಗಸ್ಟ್ 1ಕ್ಕೆ ಒಂದು ವರ್ಷವಾಗಲಿದೆ. ಇನ್ನು ಸರ್ಕಾರಗಳಿಗೆ ಬುದ್ಧಿ ಬಂದಂತಿಲ್ಲ ಎಂದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಒಳಮೀಸಲು ಹೋರಾಟಕ್ಕೆ ಇಳಿದಿದ್ದೇವೆ. ಜಾಗತಿಕರಣ, ಖಾಸಗೀಕರಣದ ಬಗ್ಗೆ ಯಾರು ಗಂಭೀರವಾಗಿ ಮಾತನಾಡುತ್ತಿಲ್ಲ. ಕೃಷ್ಣಪ್ಪ ಅವರ ನಂತರ ಹೋರಾಟಗಳನ್ನು ಕೈ ಬಿಟ್ಟಿದ್ದೇವೆ. ಮಾಯಾವತಿ, ಕಾನ್ಶಿರಾಂ ಅವರನ್ನು ನೆನಪಿಸಿಕೊಳ್ಳಬೇಕು. ಒಳ ಮೀಸಲಾತಿ ಜಾರಿಗೆ, ಖಾಸಗೀಕರಣ, ಭೂ ಸುಧಾರಣೆ, ಭೂಮಿ ಹಕ್ಕಿನ ಬಗ್ಗೆ ಧ್ವನಿ ಎತ್ತದಿದ್ದರೆ ಚಳವಳಿಗಳಿಗೆ ಅರ್ಥ ಬರುವುದಿಲ್ಲ ಎಂದರು.
ಸಾಮಾಜಿಕ ಸಂಘರ್ಷ ಸಮಿತಿ ಅಧ್ಯಕ್ಷ ಕೆ. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಡಿ.ದುರುಗೇಶಪ್ಪ, ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ಅಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ್, ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಎ. ಚಿಕ್ಕಣ್ಣ, ಚಿಂತಕ ಪ್ರೊ.ಸಿ.ಕೆ. ಮಹೇಶ್, ನಿವೃತ್ತ ಪ್ರಾಂಶುಪಾಲ ವಿ. ಬಸವರಾಜ್, ಬಸವರಾಜ್, ಎಂ.ಡಿ.ರವಿ, ಇಮ್ತಿಯಾಜ್‌ಹುಸೇನ್, ಬಿ.ಜಿ. ಗೋವಿಂದಪ್ಪ, ಎಸ್. ಜಯಣ್ಣ ಇತರ ಪ್ರಮುಖರು ಇದ್ದರು.
ಸಮಾನ ಶಿಕ್ಷಣ ಸಿಕ್ಕಿದ್ದರೆ ಒಳಮೀಸಲಿನ ಪ್ರಶ್ನೆ ಬರುತ್ತಿರಲಿಲ್ಲ
ಅರವತ್ತು ವರ್ಷಗಳ ಹಿಂದೆಯೇ ಎಲ್ಲರಿಗೂ ಸಮಾನ ಶಿಕ್ಷಣ ದೊರಕಿದ್ದರೆ ಒಳಮೀಸಲು ಕೇಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಾಹಿತಿ ದು. ಸರಸ್ವತಿ ಅಭಿಪ್ರಾಯಪಟ್ಟರು.
ಹೊರಗಿನ ಹಾಗೂ ಒಳಗಿನ ಪ್ರಾಬಲ್ಯ ವಿರೋಧಿಸುತ್ತಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ನಾಗರಿಕ ಪ್ರಜ್ಞೆಯ ಬಗ್ಗೆ ಮಾತನಾಡಿದ್ದಾರೆ. ನಾವಷ್ಟೇ ಮಿಗಿಲೆನ್ನುವ ಮನುವಾದಿಗಳನ್ನು ನಿರ್ಲಕ್ಷಿೃಸಬೇಕು ಎಂದರು.
ಬಡವರು ಭೂಮಿ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ನೂರು ಪೌರ ಕಾರ್ಮಿಕರು ಶೌಚಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಪೌರ ಕಾರ್ಮಿಕರ ಕಷ್ಟ ಏನೆಂಬುದು ಆಳುವವರಿಗೆ ಗೊತ್ತಾಗುತ್ತಿಲ್ಲ. ಪ್ರಜ್ಞೆ, ಕರುಣೆ, ಮೈತ್ರಿ, ಬುದ್ಧತ್ವ, ಬಂಧುತ್ವವಿಲ್ಲದ ಸ್ವಾತಂತ್ರ್ಯ, ಸಮಾನತೆಗೆ ಅರ್ಥವಿಲ್ಲ. ಮಹಿಳೆಯರು ಸಕ್ರಿಯವಾಗಿ ಭಾಗವಹಿಸದ ಯಾವ ಚಳವಳಿ ಯಶಸ್ವಿಯಾಗದು ಎಂದರು.