* ಹೊಸ ವಿಧಾನದಲ್ಲಿ ಕಾರ್ಯಾಚಣೆ ನಡೆಸಲು ಅರಣ್ಯ ಇಲಾಖೆ ಸಜ್ಜು
* ತೆಂಗಿನಕಲ್ಲು, ಕಬ್ಬಾಳು ಅರಣ್ಯದಲ್ಲಿವೆ 25ಕ್ಕೂ ಗಜಪಡೆ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಜಿಲ್ಲೆಯ ತೆಂಗಿನಕಲ್ಲು, ಕಬ್ಬಾಳು ಅರಣ್ಯದಲ್ಲಿ ಬೀಡುಬಿಟ್ಟು ರೈತರು, ಅರಣ್ಯ ಇಲಾಖೆಯ ನಿದ್ದೆ ಗೆಡಿಸಿರುವ ಕಾಡಾನೆಗಳನ್ನು ಸ್ವ-ಸಾನಕ್ಕೆ ಅಟ್ಟಲು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಹೊಸ ವಿಧಾನಕ್ಕೆ ತಯಾರಾಗಿರುವ ಅರಣ್ಯ ಇಲಾಖೆ ಇಂದಿನಿಂದ ಸಾಕಾನೆಗಳ ಮುಖಾಂತರ ಕಾಡಾನೆ ನಿಯಂತ್ರಣಕ್ಕೆ ಮುಂದಡಿ ಇಟ್ಟಿದೆ.
ಇಷ್ಟು ದಿನ ಅರಣ್ಯ ಇಲಾಖೆ ಸಿಬ್ಬಂದಿ ಮೂಲಕ ಕಾಡಾನೆಗಳನ್ನು ಸ್ವಸ್ಥಾನಕ್ಕೆ ಅಟ್ಟುವ ಕೆಲಸ ಮಾಡುತ್ತಿತ್ತು. ಆದರೆ ಇದರಿಂದ ಅಂತಹ ಯಶಸ್ಸು ಅರಣ್ಯ ಇಲಾಖೆಗೆ ಸಿಗುತ್ತಿರಲಿಲ್ಲ. ಕಾರ್ಯಾಚರಣೆ ವೇಳೆ ಹೋದರೂ ಮತ್ತೆ ವಾಪಸ್ ಬಂದು ಜಿಲ್ಲೆಯ ಅರಣ್ಯ ಸೇರುತ್ತಿದ್ದವು. ಇದು ಅರಣ್ಯ ಇಲಾಖೆಗೆ ನುಂಗಲಾರದ ತುತ್ತಾಗಿತ್ತು. ಆನೆಗಳ ಕಾರ್ಯಾಚರಣೆಯಲ್ಲಿ ಆನೆ ಕಾರ್ಯಪಡೆ ಮತ್ತು ಅರಣ್ಯ ಸಿಬ್ಬಂದಿ ಹೈರಾಣಾಗುವಂತಾಗಿತ್ತು.
ಈಗ, ಹೊಸ ಪ್ರಯತ್ನದಲ್ಲಿ ಸಾಕಾನೆಗಳ ಮುಖಾಂತರವೇ ಕಾಡಾನೆಗಳು ಇರುವ ಜಾಗವನ್ನು ಡ್ರೋಣ್ ಕ್ಯಾಮರಾ ಮೂಲಕ ಪತ್ತೆ ಹಚ್ಚಿ ಆ ಸ್ಥಳವನ್ನು ಸಾಕಾನೆಗಳು, ಅರಣ್ಯ ಸಿಬ್ಬಂದಿ ಜತೆ ತಲುಪಿ ಕಾಡಾನೆಗಳನ್ನು ಸ್ವ-ಸ್ಥಾನದತ್ತ ಅಟ್ಟಲು ಕಾರ್ಯಾಚರಣೆ ನಡೆಸಲಾಗುವುದು. ಇದರಿಂದ ಆನೆಗಳು ಮತ್ತೆ ವಾಪಸ್ ಬರಲಾರವು ಎಂಬುದು ಅರಣ್ಯ ಇಲಾಖೆಯ ಚಿಂತನೆಯಾಗಿದೆ. ತೆಂಗಿನಕಲ್ಲು, ಕಬ್ಬಾಳು ಅರಣ್ಯದಲ್ಲಿ ಪ್ರಸ್ತುತ 25ಕ್ಕೂ ಹೆಚ್ಚಿನ ಆನೆಗಳು ಬಿಡಾರ ಹೂಡಿವೆ. ಒಂದು, ಎರಡು, ಮೂರು ಹೀಗೆ ತಂಡ ತಂಡವಾಗಿ ವಿಂಗಡಣೆಯಾಗಿ ನರೀಕಲ್ಲುಗುಡ್ಡ, ಕಬ್ಬಾಳು, ತೆಂಗಿನಕಲ್ಲು, ಚಿಕ್ಕಮಣ್ಣುಗುಡ್ಡೆ, ಹಂದಿಗೊಂದಿ ಅರಣ್ಯ ಸೇರಿವೆ. ಅರಣ್ಯ ಇಲಾಖೆ ಹೊಸ ಪ್ರಯತ್ನ ಫಲ ನೀಡುವುದೇ, ಇಲ್ಲಿರುವ 25ಕ್ಕೂ ಹೆಚ್ಚು ಆನೆಗಳು ಸ್ವಸ್ಥಾನ ಸೇರುತ್ತವೆಯೇ ನೋಡಬೇಕಿದೆ. ಅರಣ್ಯ ಇಲಾಖೆ ಹೊಸ ಪ್ರಯತ್ನ ಫಲ ನೀಡಿದರೆ ಆನೆ ಉಪಟಳ ತಪ್ಪಿ ರೈತರು ನೆಮ್ಮದಿ ದಿನಗಳತ್ತ ಮುಖ ಮಾಡುತ್ತಾರೆ.
ತೆಂಗಿನಕಲ್ಲು, ಕಬ್ಬಾಳು ಅರಣ್ಯದಲ್ಲಿನ ಕಾಡಾನೆ ಕಾರ್ಯಾಚರಣೆಗೆ ದುಬಾರೆ, ಮತ್ತಿಕೋಡು ಶಿಬಿರದ ಶ್ರೀಕಾಂತ, ಅಜೇಯ, ಶ್ರೀರಾಮ, ಲಕ್ಷ್ಮಣ, ಕಂಜನ್, ವಿಕ್ರಂ, ಈಶ್ವರ್ ಎಂಬ ಏಳು ಆನೆಗಳು ಜಿಲ್ಲೆಗೆ ಬಂದಿವೆ.
ಜಿಲ್ಲೆಯಲ್ಲಿ ನಿರಂತರವಾಗಿ ಆನೆಗಳ ಉಪಟಳ ಹೆಚ್ಚುತ್ತಿದೆ. ಜತೆಗೆ ಹಲವರು ಆನೆಗಳ ದಾಳಿಯಿಂದ ಮೃತಪಟ್ಟಿದ್ದಾರೆ. ಆನೆಗಳ ನಿಯಂತ್ರಣ ಅರಣ್ಯ ಇಲಾಖೆಯಿಂದ ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಸಾಕಾನೆಗಳ ಮುಖಾಂತರ ಆನೆ ಹಿಡಿದು ದೂರದ ಅರಣ್ಯಕ್ಕೆ ಬಿಡುವ ಕೆಲಸ ಮಾಡಿತ್ತು. ಆಗ ಎರಡು ಆನೆಗಳನ್ನು ಮಾತ್ರ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಅವಕಾಶ ನೀಡಿತ್ತು. ಇಲ್ಲಿದ್ದ 20ಕ್ಕೂ ಹೆಚ್ಚು ಆನೆಗಳ ನಿಯಂತ್ರಣ ಸಾಧ್ಯವಾಗಿರಲಿಲ್ಲ. ಆ ನಿಟ್ಟಿನಲ್ಲಿ ಸಾಕಾನೆಗಳ ಮೂಲಕವೇ ಕಾರ್ಯಾಚರಿಸಲು ಇಂತಹ ಪ್ರಯತ್ನಕ್ಕೆ ಅರಣ್ಯ ಇಲಾಖೆ ಕೈ ಹಾಕಿದೆ.
ಸಿಬ್ಬಂದಿ ಮುಖಾಂತರ ಕಾರ್ಯಾಚರಣೆ ತುಸು ಕಷ್ಟವಾಗುತ್ತಿದ್ದು, ಆನೆಗಳ ಹೆಜ್ಜೆ ಜಾಡು ಹಿಡಿದು ಅರಣ್ಯದ ಗಿಡ ಮರಗಳ ಮಧ್ಯೆ ಕಾರ್ಯಾಚರಣೆ ನಡೆಸಬೇಕು. ರಾತ್ರಿಯಾದರೆ ಆನೆಗಳು ಎಲ್ಲಿ ಹೋದವು ಯಾವ ಕಡೆ ಹೊರಟಿವೆ ಅವುಗಳ ಚಲನವಲನ ಗೊತ್ತಾಗದೆ ಸಿಬ್ಬಂದಿ ಸಮಸ್ಯೆಯಲ್ಲಿ ಸಿಕ್ಕುವ ನಿದರ್ಶನಗಳು ಸಾಕಷ್ಟಿರುತ್ತವೆ.
ಸಾಕಾನೆಗಳ ಮೂಲಕ ಡ್ರೋಣ್ ಕ್ಯಾಮರಾ ಮೂಲಕ ಆನೆಗಳನ್ನು ಕಾರ್ಯಾಚರಣೆ ನಡೆಸಿದರೆ ಕಾಡಾನೆಗಳು ದಾಳಿ ನಡೆಸಿದರೆ ಸಾಕಾನೆಗಳಿಂದ ಪ್ರತಿರೋಧ ಬಂದು ಅವುಗಳು ಮತ್ತೆ ವಾಪಸ್ ಬರದೆ ಸ್ವಸ್ಥಾನದ ಕಡೆ ಮುಖ ಮಾಡುತ್ತವೆ. ಸುಲಭವಾಗಿ ಕಾರ್ಯಾಚರಣೆ ನಡೆಸಬಹುದು ಎಂಬುದು ಅರಣ್ಯ ಇಲಾಖೆ ಲೆಕ್ಕಾಚಾರವಾಗಿದೆ.
ಜಿಲ್ಲೆಯಲ್ಲಿ ಆನೆಗಳ ಉಪಟಳ ಮಿತಿಮೀರಿದ್ದು, ಹಗಲಿನಲ್ಲೇ ಆನೆಗಳು ಕಾಣಿಸಿಕೊಂಡು ಜಿಲ್ಲೆಯ ಹಲವು ಭಾಗದ ರೈತರ ಕೃಷಿಯನ್ನು ಕಿತ್ತುಕೊಳ್ಳುತ್ತಿವೆ. ಸಾಕಾನೆಗಳ ಮೂಲಕ ಅರಣ್ಯ ಇಲಾಖೆ ಅರಣ್ಯದಲ್ಲಿ ಬಂದು ಸೇರಿರುವ ಎಲ್ಲ ಆನೆಗಳನ್ನು ಸ್ವ-ಸ್ಥಾನಕ್ಕೆ ಅಟ್ಟುವ ಕೆಲಸ ಆಗಬೇಕು. ಕೇವಲ ಬೆರೆಳೆಣಿಕೆ ಕಾರ್ಯಾಚರಣೆ ಆಗುವುದು ಬೇಡ ಕಾರ್ಯಾಚರಣೆ ಯಶಸ್ವಿಯಾಗಲಿ.ಕಾಳಾನಾಯ್ಕ, ದೇವರದೊಡ್ಡಿ ಸ್ಥಳೀಯತೆಂಗಿನಕಲ್ಲು, ಕಬ್ಬಾಳು ಅರಣ್ಯದಲ್ಲಿರುವ ಆನೆಗಳನ್ನು ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಲು ಸರ್ಕಾರ ಅನುಮತಿ ನೀಡಿದೆ. ಏಳು ಆನೆಗಳು ಕಾರ್ಯಾಚರಣೆಗೆ ಇಳಿಯಲಿವೆ. ಇದರಿಂದ ಯಶಸ್ಸು ಸಾಧಿಸುತ್ತೇವೆ ಎಂಬ ಭರವಸೆ ಇದೆ. ಮೊದಲು ಕಬ್ಬಾಳು ಅರಣ್ಯದ 7 ಆನೆಗಳನ್ನು ಕಾರ್ಯಾಚರಣೆ ನಡೆಸಲಾಗುತ್ತದೆ. ನಂತರ ತೆಂಗಿನಕಲ್ಲು ಭಾಗದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತದೆ. ರಾಮಕೃಷ್ಣಪ್ಪ, ಡಿಎಫ್‌ಓ, ರಾಮನಗರ.