ಜಿಲ್ಲೆ

ಕಾಡುತ್ತಿವೆ ಕಾಡುಪ್ರಾಣಿಗಳು : ಸುಳ್ಯದಲ್ಲಿ ಕೃಷಿಕರಿಗೆ ನಿತ್ಯ ಆತಂಕದ ಸ್ಥಿತಿ

ಸೌಮ್ಯ ಆರ್

ಗಣೇಶ್ ಮಾವಂಜಿ ಸುಳ್ಯ

ಸುಳ್ಯ ತಾಲೂಕು ಅತಿ ಹೆಚ್ಚು ಅರಣ್ಯ ಪ್ರದೇಶದಿಂದ ಆವೃತವಾಗಿದ್ದು, ಇಲ್ಲಿಕಾಡು ಪ್ರಾಣಿಗಳ ಸಂತತಿ ಅಭಿವೃದ್ಧಿ ಸಮಸ್ಯೆನ ಕೃಷಿಕರು ಕಾಡುಪ್ರಾಣಿಗಳ ನಿರಂತರ ಉಪಟಳದಿಂದಾಗಿ ನಿದ್ದೆಗೆಡುವಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಆನೆ, ಚಿರತೆ, ಕಾಡುಕೋಣಗಳ ಹಾವಳಿ ಮಿತಿಮೀರಿರುವ ಕಾರಣ ಇಲ್ಲಿನ ಜನರು ಕಾಡುಪ್ರಾಣಿಗಳನ್ನು ಬೇರೆಲ್ಲಿಂದಲೋ ತಂದು ಈ ಭಾಗಕ್ಕೆ ಬಿಡುತ್ತಿದ್ದಾರೆ ಎಂದು ದೂರಿದರೆ ಅರಣ್ಯ ಇಲಾಖೆ ಈ ಮಾತನ್ನು ಅಲ್ಲಗಳೆಯುತ್ತಿದೆ. ಸುಳ್ಯ ವಲಯದಲ್ಲಿ ಸುಮಾರು 34,441 ಹೆಕ್ಟೇರ್ ಅರಣ್ಯವಿದ್ದು, ಇದರಲ್ಲಿ ರಕ್ಷಿತಾರಣ್ಯ ಸುಮಾರು 23,441 ಹೆಕ್ಟೇರ್.

ಕೆಲ ದಿನಗಳ ಹಿಂದೆ ಪಂಜದ ಪೊಳೆಂಜ ಕರುಂಬುನೆಕ್ಕಿಲ ಎಂಬಲ್ಲಿ ಮೂರು ನಾಯಿಗಳು ನಾಪತ್ತೆಯಾಗಿವೆ. ಮೂರ್ನಾಲ್ಕು ದಿನಗಳ ಹಿಂದೆ ಕಲ್ಲಪಳ್ಳಿಯ ದೊಡ್ಡಮನೆ ಎಂಬಲ್ಲಿಂದ ಎರಡು ನಾಯಿಗಳು ನಾಪತ್ತೆಯಾಗಿದ್ದು, ಇನ್ನೊಂದೆಡೆ ಅರ್ಧ ತಿಂದ ಸ್ಥಿತಿಯಲ್ಲಿ ಹಸುವಿನ ಕಳೇಬರ ಸಿಕ್ಕಿದೆ. ತಿಂಗಳ ಹಿಂದೆ ಮಕರ್ಂಜದಲ್ಲಿ ಎರಡು ಹಸುಗಳನ್ನು ಚಿರತೆ ತಿಂದ ಸ್ಥಿತಿಯಲ್ಲಿ ಕಂಡುಬಂದಿದೆ. ಕಾಡುಕೋಣ ಹಾಗೂ ಮಂಗಗಳ ಹಾವಳಿಯಂತೂ ಹೇಳತೀರದಾಗಿದೆ.

ಈ ಮೊದಲೆಲ್ಲಾ ಆನೆ, ಚಿರತೆ, ಕಾಡುಕೋಣಗಳ ಹಾವಳಿ ಅರಣ್ಯ ಭಾಗಕ್ಕೆ ಅಂಟಿಕೊಂಡಿರುವ ಪ್ರದೇಶದಲ್ಲಿ ಮನೆ ಮಾಡಿರುವ ಕೆಲವರಿಗಷ್ಟೇ ಸೀಮಿತವಾಗಿದ್ದರೆ ಈಗ ಕಾಡನ್ನು ಹೊರತುಪಡಿಸಿದ ಕೃಷಿ ಜಾಗಕ್ಕೂ ಈ ವನ್ಯಮೃಗಗಳು ಲಗ್ಗೆ ಇಡುತ್ತಿವೆ. ಹೀಗಾಗಿ ಭವಿಷ್ಯದಲ್ಲಿ ಕಾಡುಪ್ರಾಣಿಗಳ ಉಪಟಳ ಮಿತಿಮೀರುವ ಆತಂಕದಲ್ಲಿ ಇಲ್ಲಿನ ಜನರಿದ್ದಾರೆ.

ವನಯಮೃಗಗಳ ವಂಶಾಭಿವೃದ್ಧಿಯೇ ಅವುಗಳ ಸಂಖ್ಯೆ ಹೆಚ್ಚಾಗಿ ಉಪಟಳ ಅಧಿಕವಾಗಿದೆ ಎಂಬುದು ಅರಣ್ಯ ಇಲಾಖಾಧಿಕಾರಿಗಳು ಸ್ಪಷ್ಟೀಕರಣ ನೀಡುತ್ತಾರೆ. ಸುಳ್ಯ, ಕಡಬ ಹಾಗೂ ಸುಬ್ರಹ್ಮಣ್ಯ ಭಾಗಗಳಲ್ಲಿ ಅರಣ್ಯ ಪ್ರದೇಶ ಅತಿ ಹೆಚ್ಚು ಆವೃತವಾಗಿರುವ ಕಾರಣ ಇಲ್ಲಿ ಕಾಡುಮೃಗಗಳ ಹಾವಳಿ ಹೆಚ್ಚಾಗಿದೆ ಎಂಬುದು ಅವರ ವಾದ.

ಇತ್ತೀಚೆಗೆ ಕಾಡುಪ್ರಾಣಿಗಳ ಉಪಟಳ ತೀವ್ರವಾಗಿದೆ. ಎಷ್ಟೇ ಎಚ್ಚರಿಕೆ ವಹಿಸಿದರೂ ಆನೆ, ಕಾಡುಕೋಣ, ಮಂಗಗಳ ಹಾವಳಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗುತ್ತಿದೆ. ರಕ್ಷಣೆಗಾಗಿ ನಾಯಿಗಳನ್ನು ಸಾಕಿದರೂ ಅವುಗಳು ಚಿರತೆಗಳಿಗೆ ಆಹಾರವಾಗುತ್ತಿವೆ. ಹೀಗಾದರೆ ಭವಿಷ್ಯದ ಬದುಕು ಹೇಗೆಂಬುದೇ ಚಿಂತೆಯಾಗಿದೆ. - ದಾಸಪ್ಪ ಗೌಡ, ಕೃಷಿಕ,

ಕಾಟ ಕೊಡುತ್ತಿರುವ ಕಾಡಾನೆಗಳು

ಕಾಡಾನೆಗಳ ಹಾವಳಿಯಂತೂ ಇತ್ತೀಚೆಗೆ ಮೇರೆ ಮೀರುತ್ತಿದ್ದು ಸೋಲಾರ್ ಬೇಲಿ, ಕಂದಕ ಮೊದಲಾದ ತಡೆಗಳು ಈಗ ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಹಾಕಿದ ಗೇಟನ್ನು ಸರಿಸಿ ನಾಜೂಕಾಗಿ ತೋಟದೊಳಗೆ ನುಗ್ಗುವ ಆನೆಗಳು, ಸೋಲಾರ್ ಬೇಲಿಯನ್ನು ಜಾಗರೂಕತೆಯಿಂದ ಜಗ್ಗಿ ಒಳನುಸುಳುವಷ್ಟು ಚಾಣಾಕ್ಷತನ ಹೊಂದಿವೆ. ವಿದ್ಯುತ್ ದೀಪ ಉರಿಸಿಟ್ಟರೆ ಅದರಡಿಯಲ್ಲೇ ಕೃಷಿ ಬೆಳೆಗಳನ್ನು ಧ್ವಂಸ ಮಾಡುವ ಸಲಗಗಳನ್ನು ಗಮನಿಸಿದರೆ ಸಾಕಿದ ಆನೆಗಳನ್ನು ಸಾಕಲು ಕಷ್ಟವಾಗಿ ಈ ಕಾಡಿಗೆ ಬಿಟ್ಟಿದ್ದಾರೇನೋ ಎಂದು ಅನುಮಾನವಾಗುವುದು ಸಹಜ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಈ ಸಾಧ್ಯತೆಯನ್ನು ತಳ್ಳಿ ಹಾಕುತ್ತಾರೆ.

ಸುಳ್ಯ, ಕಡಬ ಹಾಗೂ ಸುಬ್ರಹ್ಮಣ್ಯ ಪ್ರದೇಶಗಳು ಅತಿ ಹೆಚ್ಚು ಅರಣ್ಯ ಪ್ರದೇಶಗಳನ್ನು ಹೊಂದಿರುವುದರಿಂದ ಸಹಜವಾಗಿ ಕಾಡುಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ನಿಜ. ರಕ್ಷಿತಾರಣ್ಯಕ್ಕೆ, ವನ್ಯಮೃಗಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಕಾನೂನುಗಳ ಪಾಲನೆ ಕೂಡಾ ಕಟ್ಟುನಿಟ್ಟಾಗಿ ಇರುವ ಹಿನ್ನೆಲೆಯಲ್ಲಿ ಕಾಡುಮೃಗಗಳ ಬೇಟೆಗೂ ಕಡಿವಾಣ ಬಿದ್ದಿದೆ. ಹೀಗಾಗಿ ವನ್ಯಮೃಗಗಳ ಸಂಖ್ಯೆ ವೃದ್ಧಿಯಾಗಿದೆ. ಸಂಚಾರ ಅನುಕೂಲಕ್ಕಾಗಿ ಅರಣ್ಯದ ಮಧ್ಯಭಾಗದಲ್ಲೇ ರಸ್ತೆ ನಿರ್ಮಾಣವಾಗಿರುವ ಕಾರಣ ಇತ್ತೀಚೆಗೆ ಕಾಡುಪ್ರಾಣಿಗಳು ಜನರ ಕಣ್ಣಿಗೆ ಹೆಚ್ಚಾಗಿ ಕಾಣಿಸುತ್ತಿವೆಯೇ ಹೊರತು ಬೇರೆಲ್ಲಿಂದಲೋ ವನ್ಯಮೃಗಗಳನ್ನು ಇಲ್ಲಿಗೆ ತಂದು ಬಿಡುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. - ಎನ್ ಮಂಜುನಾಥ್ ವಲಯ ಅರಣ್ಯಾಧಿಕಾರಿ, ಸುಳ್ಯ