ಸಂಡೂರು: ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಲೋಕಾಯುಕ್ತ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸಭೆಯಲ್ಲಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಜನರು ಬಾರದಿದ್ದರಿಂದ ಸಭೆ ನೀರಸವಾಗಿ ನಡೆಯಿತು.
ಅಹವಾಲು ಸ್ವೀಕಾರಕ್ಕೆ ಬಂದಿದ್ದ ಅಧಿಕಾರಿಗಳಿಗೆ ಜನರ ಸಮಸ್ಯೆಗಳ ಕೊರತೆ ಮಂಗಳವಾರ ಕಂಡು ಬಂತು.
ಇದನ್ನು ಓದಿ:ಲಂಚ, ಬುಡಾ ಆಯುಕ್ತ ಸೇರಿ 6 ಮಂದಿ ಲೋಕಾಯುಕ್ತ ಬಲೆಗೆ
ಸಾರಿಗೆ, ತೋಟಗಾರಿಕೆ, ಮೀನುಗಾರಿಕೆ, ಅಕ್ಷರ ದಾಸೋಹ, ಅಲ್ಪಸಂಖ್ಯಾತರ ಇಲಾಖೆ ಸೇರಿ ಅನೇಕ ಅಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ. ಆರೋಗ್ಯ ಇಲಾಖೆ, ಪಿಡಬ್ಲ್ಯುಡಿ, ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ತಮ್ಮ ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿದ್ದು ಕಂಡುಬಂತು. ರೈತರೊಬ್ಬರು ಮನವಿ ಸಲ್ಲಿಸಿದ್ದನ್ನು ಬಿಟ್ಟರೆ ಸಮಸ್ಯೆಗಳನ್ನು ಹೇಳಿಕೊಳ್ಳಲು ಯಾರೂ ಬರಲಿಲ್ಲ.
ಲೋಕಾಯುಕ್ತ ಸಿಪಿಐ ಮೊಹಮ್ಮದ್ ರಫೀಕ್ ಮಾತನಾಡಿ, ಕೃಷಿ ಇಲಾಖೆಯಿಂದ ಬೀಜ ವಿತರಣೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬ ದೂರುಗಳಿವೆ. ಕಳಪೆ ಬೀಜ ಸಂಬಂಧ ಕೃಷಿ ಅಧಿಕಾರಿಗಳು, ರೈತ ಮುಖಂಡರು ಹಾಗೂ ಬೀಜ ಮಾರಾಟಗಾರರ ಸಭೆ ನಡೆಸಿ ಎಂದು ಸಭೆಗೆ ಆಗಮಿಸಿದ್ದ ಕೃಷಿ ಇಲಾಖೆಯ ಕೆ.ಸೋಮಶೇಖರಗೆ ಸೂಚಿಸಿದರು. ಬೆಳೆ ಸಮೀಕ್ಷೆಯಲ್ಲಿ ಲೋಪ ದೋಷಗಳಾಗಿವೆ ಚೋರನೂರು ಹೋಬಳಿ ವಡೇರಳ್ಳಿಯ ರೈತ ಕತ್ತಾಳಿ ದುರುಗಪ್ಪ ನಮ್ಮ ಜಮೀನಿನಲ್ಲಿ ಬೆಳೆ ಇದ್ದರೂ ಬೀಳು ಎಂದು ನಮೂದಿಸಲಾಗಿದೆ ಎಂದು ತಿಳಿಸಿದರು.
ಬೊಮ್ಮಗಟ್ಟದ ತಮ್ಮ ಜಮೀನಿನಲ್ಲಿ ಸಮೀಕ್ಷೆ ನಡೆಸಿ ಬೇಸಾಯದ ಭೂಮಿಯನ್ನು ಬೀಳು ಎಂದು ನಮೂದಿಸಿದ್ದಾರೆ ಎಂದು ರೈತ ಉಜ್ಜಿನಯ್ಯ ಸಭೆಯಲ್ಲಿಯೇ ಆರೋಪಿಸಿದರು. ಈ ವಿಷಯವನ್ನು ಎಡಿಎಗೆ ತಿಳಿಸುವಂತೆ ಸಿಪಿಐ ಸೂಚಿಸಿದರು.
ತಾಲೂಕಿನಲ್ಲಿರುವ 224 ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ವ್ಯವಸ್ಥೆಯ ಅಡಿಪಾಯ. ಅವರಿಂದ ಪ್ರತಿಯೊಂದು ಸೇವೆಯೂ ಸಮರ್ಪಕವಾಗಿ ದೊರೆಯಲಿ. ಗರ್ಭಿಣಿಯರಿಗೆ, ಮಕ್ಕಳಿಗೆ ಆಹಾರ ವಿತರಣೆಯಲ್ಲಿ ವ್ಯತ್ಯಯವಾಗದಿರಲಿ ಎಂದು ಸಿಡಿಪಿಒ ಎಳೆ ನಾಗಪ್ಪಗೆ ಸೂಚಿಸಿದರು.
ತಾಲೂಕಿನ ಜನರಿಗೆ ಲೋಕಾಯುಕ್ತರ ಸಭೆ ಬಗ್ಗೆ ಮುಂಚೆಯೆ ತಿಳಿಸಿ ತಮ್ಮ ಅಹವಾಲುಗಳನ್ನು ಲೋಕಾಯುಕ್ತರಿಗೆ ಸಲ್ಲಿಸಲು ಬಳ್ಳಾರಿಗೆ ಬರುತ್ತಾರೆ ಎಂದರು.
ಸಭೆಯಲ್ಲಿ ತಹಸೀಲ್ದಾರ್ ಅನಿಲ್ ಕುಮಾರ್, ಪಶು ಸಂಗೋಪನಾ ಇಲಾಖೆ ಎಡಿ ಡಾ. ವಲಿಬಾಷಾ, ಪುರಸಭೆ ಮುಖ್ಯಾಧಿಕಾರಿ ಜಯಣ್ಣ, ವಲಯ ಅರಣ್ಯಾಧಿಕಾರಿ ಗಿರೀಶ ಕುಮಾರ್, ಜೆಸ್ಕಾಂ ಎಇಇ ಉಮೇಶ ಕುಮಾರ್, ಬಿಸಿಎಂ ಅಧಿಕಾರಿ ಪಂಕಜ, ತಾಪಂ ಎಡಿಎ ದುರುಗಪ್ಪ ಇತರರಿದ್ದರು.