ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 9ರಿಂದ ವಿಧಾನಮಂಡಳ ಚಳಿಗಾಲ ಅಧಿವೇಶನ ನಡೆಸುವ ಮುನ್ನ ಈ ಭಾಗದ ಸಮಸ್ಯೆ ಗಳನ್ನು ಪರಿಹ ರಿಸಬೇಕು. ಬೆಳಗಾವಿಗೆ ವಿಶೇಷ ಅನುದಾನ ಘೋಷಿಸುವುದರ ಜತೆಗೆ ರಾಜ್ಯಮಟ್ಟದ ಕಚೇರಿಗಳ ಸ್ಥಳಾಂತರ ಮಾಡಲು ಕ್ರಮ ವಹಿಸಬೇಕು. ಜನ ಸಾಮಾನ್ಯರ ಸಮಸ್ಯೆ ಪರಿಹರಿಸದೆ ಅಧಿವೇಶನ ನಡೆಸುವ ನೈತಿಕತೆ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ರಾಜ್ಯ ಸರ್ಕಾರದ ವಾಗ್ದಾಳಿ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀವ್ರ ಬರ, ನದಿಗಳ ಪ್ರವಾಹ, ಧಾರಾಕಾರ ಮಳೆಯಿಂದಾಗಿ ಬೆಳೆಹಾನಿ ಸಂಭವಿಸಿ ರೈತರು ಆದಾಯ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಆದರೆ, ರಾಜ್ಯ ಸರ್ಕಾರವು ಇಲ್ಲಿಯವರೆಗೆ ಬೆಳೆಹಾನಿ ಪರಿಹಾರ ನೀಡಿಲ್ಲ. ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸಿಕೊಂಡು ಬರುತ್ತಿದೆ ಎಂದು ದೂರಿದರು.
ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯ: ಜಿಲ್ಲೆಯಲ್ಲಿನ ಇಬ್ಬರು ಸಚಿವರು ಜಿಲ್ಲಾ ವಿಭಜನೆ ಕುರಿತು ಹೇಳಿಕೆ ನೀಡುತ್ತಿದ್ದಾರೆ ವಿನಃ ಜಿಲ್ಲಾ ವಿಭಜನೆಗೆ ಪ್ರಯತ್ನಿಸುತ್ತಿಲ್ಲ. ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ, ಜನರ ಹಿತದೃಷ್ಟಿಯಿಂದ ಜಿಲ್ಲಾ ವಿಭಜನೆ ಆಗಲೇಬೇಕು. ಸರ್ಕಾರವು ಚಳಿಗಾಲ ಅಧಿವೇಶನದ ಒಳಗಾಗಿ ಜಿಲ್ಲಾ ವಿಭಜನೆ ಕುರಿತು ನಿರ್ಣಯ ಕೈಗೊಳ್ಳಬೇಕು. ಬೆಳಗಾವಿ ಮಹಾನಗರದಲ್ಲಿ ಕಳಪೆ ಕಾಮಗಾರಿಗಳಿಂದಾಗಿ ರೈಲ್ವೆ ಮೇಲ್ಸೇತುವೆ ಹಾಳಾಗಿರುವ ಕುರಿತು ಮಾಹಿತಿ ಬಂದಿದ್ದು, ಈ ಕುರಿತು ಪರಿಶೀಲನೆ ನಡೆಸಿ ಮಾಹಿತಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೇವೆ. ಕಳಪೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುವುದು. ಈ ಕುರಿತು ರೈಲ್ವೆ ಸಚಿವ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ವಕ್ತಾರ ಎಂ.ಬಿ.ಝಿರಲಿ, ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ, ಎಫ್.ಸಿ.ಸಿದ್ದನಗೌಡ ಇತರರಿದ್ದರು.
ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮ ನಿವೇಶನ ಪಡೆದಿರುವ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೋರ್ಟ್ ತನಿಖೆಗೆ ಆದೇಶಿಸಿದೆ. ಹಾಗಾಗಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಅನುದಾನವನ್ನು ಲೋಕಸಭೆ ಚುನಾವಣೆಗೆ ಬಳಕೆ ಮಾಡಿಕೊಂಡು ಜೈಲಿಗೆ ಹೋಗಿ ಬಂದಿರುವ ಮಾಜಿ ಸಚಿವರು ಜಾಮೀನಿನ ಮೇಲೆ ಓಡಾಡುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸಲು ಕಾಂಗ್ರೆಸ್ ನೈತಿಕತೆ ಕಳೆದುಕೊಂಡಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹರಿಹಾಯ್ದರು.
ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಅತಿವೃಷ್ಟಿ ಬೆಳೆಹಾನಿ ಪರಿಹಾರ ನೀಡದೆ ನಿರ್ಲಕ್ಷೃ ಮಾಡುತ್ತಿರುವುದು ಸರಿಯಲ್ಲ. ಸಾಕಷ್ಟು ಸಮಸ್ಯೆ ಇಟ್ಟುಕೊಂಡು ಯಾವ ಪುರುಷಾರ್ಥಕ್ಕಾಗಿ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸಲು ಹೊರಟಿದೆ.| ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯ