ಜಿಲ್ಲೆ

ರಸ್ತೆ ಮಧ್ಯೆ ಹರಿಯುತ್ತಿದ್ದ ಮಲಿನ ನೀರಿಗೆ ಮುಕ್ತಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ

ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾಮ ಫಂಚಾಯಿತಿ ವ್ಯಾಪ್ತಿಯ ಚಂದನಹೊಸಹಳ್ಳಿಯಲ್ಲಿ ಚರಂಡಿ ಕಾಮಗಾರಿ ನಡೆಸುವ ಮೂಲಕ ಈ ಭಾಗದಲ್ಲಿನ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿದೆ.

ಚರಂಡಿ ಇಲ್ಲದ ಕಾರಣ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿತ್ತು, ಈ ಕೊಳಚೆ ನೀರನ್ನು ದಾಟಿಕೊಂಡು ಶಿವಗಂಗೆ ದೇವಸ್ಥಾನಕ್ಕೆ ಹೋಗಬೇಕಾದ ಪರಿಸ್ಥಿತಿ ಇತ್ತು. ಈ ಭಾಗದಲ್ಲಿ ಸಂಚರಿಸುವ ವಾಹನಗಳಿಂದ ಚಿಮ್ಮುತ್ತಿದ್ದ ಕೊಳಚೆ ನೀರಿನಿಂದ ಸ್ಥಳೀಯರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿತ್ತು.

ವರದಿ ಪರಿಣಾಮ: ರಸ್ತೆ ಮಧ್ಯೆ ಹರಿದ ಕೊಳಚೆ ನೀರು ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ಮೇ 12ರಂದು ವರದಿ ಪ್ರಕಟವಾಗಿತ್ತು, ವರದಿಯನ್ನು ಗಮನಿಸಿದ ಅಗಳಕುಪ್ಪೆ ಪಂಚಾಯಿತಿ ಅಧ್ಯಕ್ಷೆ ವನಿತಾ ಹಾಗೂ ಕಾರ್ಯದರ್ಶಿ ಕೆಂಪರಂಗಯ್ಯ ಗುರುವಾರ ಸ್ಥಳ ಪರಿಶೀಲನೆ ನಡೆಸಿದ್ದಲ್ಲದೆ ಸ್ಥಳದಲ್ಲೇ ನಿಂತು ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು. ಇದರಿಂದ ಈ ಭಾಗದಲ್ಲಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.

ಶಾಶ್ವತ ಪರಿಹಾರ: ಶಿವಗಂಗೆ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ ಜತೆಗೆ ದಕ್ಷಿಣ ಕಾಶಿ ಶಿವಗಂಗೆಗೆ ಸಾಗಲು ಇದೇ ರಸ್ತೆ ಮಾರ್ಗ ಅನುಸರಿಸಬೇಕು, ಇಲ್ಲಿನ ಕೊಳಚೆ ನೀರಿನಿಂದ ಪ್ರಯಾಣಿಕರು ಹಾಗೂ ಸ್ಥಳೀಯರು ತೊಂದರೆ ಎದುರಿಸುತ್ತಿದ್ದರು. ಈ ಭಾಗದಲ್ಲಿ ಚರಂಡಿ ನಿರ್ಮಾಣ ಮಾಡುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗಿದೆ ಎಂದು ಪಂಚಾಯಿತಿ ಅಧ್ಯಕ್ಷೆ ವನಿತಾ ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಈ ಸಮಸ್ಯೆ ಎದುರಾಗಿತ್ತು ಈ ಬಗ್ಗೆ ಪತ್ರಿಕೆಯ ವರದಿಯಿಂದಾಗಿ ಜನರಿಗೆ ಅನುಕೂಲವಾಗಿದೆ ಪಂಚಾಯಿತಿ ಅಧ್ಯಕ್ಷರು ಮುತುವರ್ಜಿ ವಹಿಸಿ ಕಾಮಗಾರಿ ನಡೆಸಿಕೊಟ್ಟಿದ್ದಾರೆ. ಇದರಿಂದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಸ್ಥಳೀಯ ರಾಮು ಎಂಬುವರು ಪ್ರತಿಕ್ರಿಯಿಸಿದ್ದಾರೆ.