ಎಂಎಸ್.ಸಿದ್ದಲಿಂಗೇಶ್ವರ ಮಾಗಡಿ
ಕಸವಿಲೇವಾರಿ ಘಟಕದಿಂದ ನಿರಂತರವಾಗಿ ಹೊಗೆ ಬರುತ್ತಿರುವುದರಿಂದ ಸುತ್ತಮುತ್ತಲ ನಿವಾಸಿಗಳಿಗೆ ಅಲ್ಲದೆ ಪಟ್ಟಣದ ಜನರಿಗೆ ತೊಂದರೆ ಉಂಟಾಗಿದ್ದು, ಘಟಕವನ್ನು ಬೇರೆಡೆ ಸ್ಥಳಾಂತರ ಮಾಡುವಂತೆ ನಾಗರಿಕರ ಒತ್ತಾಯವಾಗಿದೆ.
ಪಟ್ಟಣದ 23 ವಾರ್ಡ್‌ಗಳ ಘನತ್ಯಾಜ್ಯ ಘಟಕದಿಂದ ಹೊರಸೂಸುವ ವಿಷಕಾರಿ ಹೊಗೆಯಿಂದ ಘಟಕದ ಸಮೀಪದಲ್ಲಿಯೇ ವಾಸಿಸುತ್ತಿರುವ ಅನೇಕರು ಹಲವು ವರ್ಷಗಳಿಂದಲೂ ವಿಷ ಅನಿಲವನ್ನು ಸೇವಿಸಿ ರೋಗ ಸೋಂಕಿನಿಂದ ಬದುಕುತ್ತಿದ್ದು, ಬಹುತೇಕರಲ್ಲಿ ಕ್ಯಾನ್ಸರ್, ಚರ್ಮರೋಗ, ಶ್ವಾಸಕೋಶ ಸಂಬಂಧಿತ ರೋಗಗಳಿಂದ ನಿರಂತರವಾಗಿ ನರಳುತ್ತಿದ್ದಾರೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಈಶಾನ್ಯ ಭಾಗದಲ್ಲಿ ಇತಿಹಾಸ ಪ್ರಸಿದ್ಧ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಾಲಯದ ಸಮೀಪವೆ ಇರುವ ತ್ಯಾಜ್ಯ ಘಟಕದ ಪಕ್ಕದಲ್ಲಿಯೇ ರೈತರು ತಮ್ಮ ಜಮೀನುಗಳನ್ನು ಹೊಂದಿದ್ದಾರೆ. ಈ ವಾಸನೆಯಿಂದ ಬೇಸಾಯ ಮಾಡುವುದನ್ನೆ ಬಿಟ್ಟಿದ್ದಾರೆ. 20 ವರ್ಷಗಳ ಹಿಂದೆ ಸಾಕಷ್ಟು ವೈಜ್ಞಾನಿಕ ಮತ್ತು ತಾಂತ್ರಿಕ ಜ್ಞಾನವಿಲ್ಲದೆ ಅಂದು ಉತ್ಪತ್ತಿಯಾಗುತ್ತಿದ್ದ ಸಣ್ಣ ಪ್ರಮಾಣದ ತ್ಯಾಜ್ಯ ನಿರ್ವಹಿಸಲು ಈ ಘಟಕವನ್ನು ಸ್ಥಾಪಿಸಿರುವಂತೆ ಕಾಣುತ್ತಿದೆ. ಆದರೆ, ಇಂದು ಈ ಘನ ತ್ಯಾಜ್ಯ ಘಟಕ ಪಟ್ಟಣದ ನಾಗರಿಕರ ಪ್ರಾಣಕ್ಕೆ ಕಂಟಕವಾಗಿದೆ.
ಎರಡು ವರ್ಷಗಳ ಹಿಂದೆ ಬೃಹತ್ ಪ್ರಮಾಣದ ತ್ಯಾಜ್ಯಕ್ಕೆ ಒಮ್ಮೆಲೆ ಬೆಂಕಿ ಬಿದ್ದಿದ್ದಾಗ ಮಾಗಡಿ ಪಟ್ಟಣ ಪೂರ್ತಿ ಹೊಗೆಯಿಂದ ಆವೃತವಾಗಿ ಸುಮಾರು ಒಂದು ವಾರ ಕಾಲ ವಿಷಾನಿಲ ಜನರ ಶ್ವಾಶಕೋಶಗಳನ್ನು ಕಲುಷಿತಗೊಳಿಸಿ ಉಸಿರು ಕಟ್ಟುವ ವಾತಾವರಣ ನಿರ್ಮಿಸಿತ್ತು. ಈ ತ್ಯಾಜ್ಯ ಘಟಕದ ಪಶ್ಚಿಮ ಭಾಗದಲ್ಲಿ ಜಮೀನನ್ನು ಹೊಂದಿರುವ ರೇಣುಕಯ್ಯ, ಹನುಮಂತಯ್ಯ, ಅರುಣ್ ಕುಮಾರ್, ಶಿವಣ್ಣ ,ಮುನಿರಾಜು, ನಾಗರಾಜು ,ವೆಂಕಟಪ್ಪ, ವೆಂಕಟಸ್ವಾಮಿ ,ಚಂದ್ರಪ್ಪ ಮುಂತಾದವರ ಕುಟುಂಬದ ಎಲ್ಲ ಸದಸ್ಯರು ಇನ್ನಿಲ್ಲದ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.
ಘನತ್ಯಾಜ್ಯ ಘಟಕದ ಪರಿಸರದಲ್ಲಿಯೇ ಜೀವಿಸುತ್ತಿರುವ ಜನರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಇಲ್ಲಿ ಜಾನುವಾರುಗಳು ಕೂಡ ಆರೋಗ್ಯದ ಸಮಸ್ಯೆಗಳಿಂದ ಹೊರತಾಗಿಲ್ಲ. ಇದರಿಂದಾಗಿಯೇ ಬಹುತೇಕ ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡಿಕೊಂಡಿದ್ದಾರೆ. ಉಸಿರಾಟದ ತೊಂದರೆ, ಚರ್ಮದ ಅಲರ್ಜಿ, ನಿರಂತರ ಕೆಮ್ಮು ಸೇರಿ ಅನೇಕ ಆರೋಗ್ಯ ಸಮಸ್ಯೆ ಇವರನ್ನು ಬೆನ್ನು ಬಿಡದೆ ಕಾಡುತ್ತಿದೆೆ. ಪ್ರತಿದಿನ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ. ಬೆಂಗಳೂರು ಮತ್ತು ರಾಮನಗರದ ಆಸ್ಪತ್ರೆಗಳಿಗೆ ಹೋಗುವ ಗಂಭೀರ ಸಮಸ್ಯೆಗಳು ಇವರಿಗೆ ಇವೆ. ಇಲ್ಲಿನ ಮರ ಗಿಡಗಳ ಮೇಲೆ ನಿತ್ಯ ವಿಷ ಅನಿಲಗಳು ರಾಚುತ್ತಿವೆ. ಜನರ ಜೀವನವು ದಾರುಣ ಸ್ಥಿತಿ ತಲುಪುವಂತೆ ಮಾಡಿವೆ.
ಈ ಘಟಕದ ಕೂಗಳತೆಯ ಸಮೀಪದಲ್ಲಿಯೇ ಸರ್ಕಾರಿ ಪದವಿ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಹೈಸ್ಕೂಲ್, ಬಾಲಾಜಿ ಶಾಲೆ, ಬಿಜಿಎಸ್ ಪದವಿಪೂರ್ವ ಕಾಲೇಜು, ಬಿಜಿಎಸ್ ಹೈಸ್ಕೂಲ್, ಕೆಂಪೇಗೌಡ ಸ್ಕೂಲ್ ಮತ್ತು ಕೆಂಪೇಗೌಡ ವೃತ್ತ ಇವೆ. ಇಲ್ಲಿ ವಿಷಾನಿಲದ ತೀವ್ರತೆ ಕಡಿಮೆ ಇರುವುದರಿಂದ ಅಷ್ಟಾಗಿ ಯಾರೂ ಗಮನ ಹರಿಸದೆ ನಿರ್ಲಕ್ಷ್ಯಿಸಿದ್ದಾರೆ ಎಂಬ ಆರೋಪವಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಒಂದೆರಡು ಏರ್ ಮಾನಿಟರ್‌ಗಳನ್ನು ಇಟ್ಟರೆ ಈ ಪ್ರದೇಶ ಯಾವ ಮಟ್ಟಿಗೆ ವಾಯುಮಾಲಿನ್ಯ ಹೊಂದಿದೆ ಎಂಬುದು ಸ್ಪಷ್ಟವಾದೀತು. ಶಾಲಾ-ಕಾಲೇಜುಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರೂ ವಾಸನೆ ಕುಡಿಯುವಂತಾಗಿದೆ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ.
ಶಾಸಕರು, ತಹಸೀಲ್ದಾರ್, ತಾಲೂಕಿನ ಆರೋಗ್ಯಾಧಿಕಾರಿಗಳು, ಪುರಸಭೆ ಅಧಿಕಾರಿಗಳು ಈ ಘಟಕದ ಪರಿಸರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿದೆ. ಪುರಸಭೆ ಪಟ್ಟಣದಿಂದ ಹೊರಭಾಗದ ಜನವಸತಿಗಳಿಂದ ದೂರವಿರುವ ಸ್ಥಳವನ್ನು ಹುಡುಕಿ ಕೂಡಲೇ ಘಟಕ ಸ್ಥಳಾಂತರಿಸಿದರೆ ನಾಗರಿಕರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಪ್ರಾಣಕ್ಕೆ ಸಂಚಕಾರ ಗ್ಯಾರಂಟಿ.
ಎಚ್.ಎನ್.ಶಿವಲಿಂಗಯ್ಯ, ನಿಸರ್ಗ ಪರಿಚರಣ ಟ್ರಸ್ಟ್ ಅಧ್ಯಕ್ಷ
ಎಚ್.ಜೆ.ಪುರುಷೋತ್ತಮ್ ಪುರಸಭಾ ಸದಸ್ಯ