ಜಿಲ್ಲೆ

ನೆಮ್ಮದಿ ಕೆಡಿಸುವ ಮಣಿಪಾಲದ ಶಾಂತಿನಗರ

ಪ್ರಶಾಂತ ಜಿ. ಭಾಗ್ವತ

ರಸ್ತೆಯಲ್ಲಿ ಹರಿಯುವ ಮಲೀನ ನೀರು | ಅವ್ಯವಸ್ಥೆಗೆ ಸಾರ್ವಜನಿಕರ ಬೇಜಾರು

ವಿಜಯವಾಣಿ ಸುದ್ದಿಜಾಲ ಉಡುಪಿ
ಮಣಿಪಾಲ ಸಮೀಪದ ಈ ಊರಿನ ಹೆಸರು ಶಾಂತಿನಗರ ಎಂದಿದೆ. ಆದರೆ, ಇಲ್ಲಿನ ಪರಿಸರದ ಅವ್ಯವಸ್ಥೆಯಿಂದಾಗಿ ಸ್ಥಳೀಯರು ಹಾಗೂ ಈ ಭಾಗದಲ್ಲಿ ಸಂಚರಿಸುವವರ ನೆಮ್ಮದಿ ಕೆಡುತ್ತಲಿದೆ.

ಶಾಂತಿನಗರ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡ-ಗುಂಡಿಗಳಷ್ಟೇ ಗೋಚರಿಸುತ್ತಿದೆ. ಹೀಗಾಗಿ ಈ ಭಾಗದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿದೆ.

ಶಾಂತಿನಗರದ ರಸ್ತೆ ಹೊಂಡಮಯ.

ರಸ್ತೆಗೆ ಕೊಳಚೆ ನೀರು!

ಮಳೆ ಸುರಿದಾಗ ಇಲ್ಲಿನ ರಸ್ತೆಗಳಲ್ಲಿರುವ ಗುಂಡಿಗಳಲ್ಲಿ ನೀರು ಸಂಗ್ರಹಗೊಳ್ಳುತ್ತವೆ. ಆದರೆ, ಮಳೆ ಸುರಿಯದೇ ಇದ್ದರೂ ಈ ಮಾರ್ಗದಲ್ಲಿ ನಿತ್ಯವೂ ನೀರು ನಿಂತಿರುತ್ತದೆ. ಇದಕ್ಕೆ ರಸ್ತೆಯ ಅಕ್ಕಪಕ್ಕದ ಕೆಲ ಮನೆಯವರು ಕೊಳಚೆ ನೀರನ್ನು ರಸ್ತೆಗೆ ಬಿಡುವುದೇ ಕಾರಣವಾಗಿದೆ. ಬಟ್ಟೆ ತೊಳೆದ ನೀರು, ಸ್ನಾನಾದಿಗಳ ಕೊಳಚೆ ನೀರು ಈ ರಸ್ತೆಯಲ್ಲಿ ಹರಿಯುತ್ತಲೇ ಇರುತ್ತದೆ.

ಕಾಯಿಲೆ ಭೀತಿ

ಶಾಂತಿನಗರದ ರಸ್ತೆಯಲ್ಲಿ ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯ ಈ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರೂ ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ. ಡೆಂಘೆಯಂತಹ ಮಾರಕ ಸಾಂಕ್ರಾಮಿಕ ಕಾಯಿಲೆ ಉಡುಪಿಯಲ್ಲೂ ಇದ್ದು, ಈ ರೋಗದ ಹೆಚ್ಚಳಕ್ಕೆ ಇಲ್ಲಿನ ಮಾಲಿನ್ಯತೆ ಕಾರಣವಾಗುವ ಸಾಧ್ಯತೆಯೂ ಇದೆ. ಸೊಳ್ಳೆಗಳ ಸಂತಾನೋತ್ಪತ್ತಿಗೆ ಇಲ್ಲಿನ ವಾತಾವರಣ ಪೂರಕವಾಗಿದೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಹದಗೆಟ್ಟಿರುವ ಶಾಂತಿನಗರದ ರಸ್ತೆಯಲ್ಲಿ ಮನೆಗಳ ಕೊಳಚೆ ನೀರು ಹರಿಯುತ್ತಿರುವುದು.

ಪರಿಸರದಲ್ಲಿ ಹರಡಿದೆ ಗಬ್ಬು ವಾಸನೆ

ಶಾಂತಿನಗರದ ಕೆಲ ಮನೆಗಳವರು ಕೊಳಚೆ ನೀರನ್ನು ರಸ್ತೆಗೆ ಬಿಡುತ್ತಾರೆ. ಅವರ ಮನೆಯ ಗೇಟ್​ ಮುಂಭಾಗದಿಂದಲೇ ಕೊಳಚೆ ನೀರು ರಸ್ತೆಗೆ ಹರಿಯುತ್ತಿರುವುದು ಈ ಮಾರ್ಗದಲ್ಲಿ ಸಂಚರಿಸುವಾಗ ಗೋಚರಿಸುತ್ತದೆ. ಇದರಿಂದ ಇಲ್ಲಿನ ಪರಿಸರದಲ್ಲಿ ಗಬ್ಬುವಾಸನೆ ಹರಡಿರುತ್ತದೆ. ಪಾದಚಾರಿಗಳು ಮೂಗು ಮುಚ್ಚಿಕೊಂಡೇ ಸಾಗಬೇಕಿದೆ. ವಿದ್ಯಾರ್ಥಿಗಳು ಈ ರಸ್ತೆ ಮಾರ್ಗವಾಗಿ ಶಾಲೆಗೆ ಹೋಗಿ ಬರುವಾಗ ವಾಹನಗಳ ಟೈರ್​ಗಳಿಂದ ಹಾರುವ ಕೊಳಚೆ ನೀರು ಮೈಗೆ ಎರಚುತ್ತಿದೆ. ಇಲ್ಲಿಯ ಈ ಸಮಸ್ಯೆಯನ್ನು ಜನಪ್ರತಿನಿಧಿಗಳು, ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಜಿಲ್ಲಾಡಳಿತದ ಸಮೀಪದಲ್ಲೇ ಶಾಂತಿನಗರದ ಮುಖ್ಯರಸ್ತೆ ಮಾರ್ಗ ಇದೆ. ಇಲ್ಲಿನ ಅವ್ಯವಸ್ಥೆಯಿಂದಾಗಿ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾಧಿಕಾರಿಯೇ ಒಮ್ಮೆ ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. | ನಿತ್ಯಾನಂದ ಒಳಕಾಡು. ಸಮಾಜಸೇವಕ, ಉಡುಪಿ