ಪುತ್ತೂರು: ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಪುತ್ತೂರು ಪತ್ರಾವೋ ಜಂಕ್ಷನ್ ಈಗ ಅಪಾಯದ ಕೇಂದ್ರ ಬಿಂದು. ಪ್ರತಿದಿನವೂ ಇಲ್ಲಿ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿದ್ದು, ಹತ್ತಾರು ಜೀವಗಳು ಅಪಘಾತಗಳಿಗೆ ಬಲಿಯಾಗಿವೆ.
ಈ ಸ್ಥಳದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ವೃತ್ತದಿಂದಾಗಿ ಪುತ್ತೂರು ಪೇಟೆಯಿಂದ ಬರುವ ವಾಹನಗಳು ಹಾಗೂ ರಾಜ್ಯ ಹೆದ್ದಾರಿಯಲ್ಲಿ ಹಾದುಹೋಗುವ ವಾಹನಗಳಲ್ಲಿ ಉಂಟಾಗುತ್ತಿರುವ ಗೊಂದಲವೇ ಈ ಜಂಕ್ಷನ್ ಮೃತ್ಯುಕೂಪವಾಗಲು ಕಾರಣ. ಮಾಣಿ-ಮೈಸೂರು ರಾಜ್ಯ ಹೆದ್ದಾರಿ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ನಡೆದ ಬಳಿಕ ಪುತ್ತೂರು ನಗರದ ಮೂಲಕ ಮೈಸೂರು ಹಾದುಹೋಗುವ ವಾಹನಗಳು ಈಗ ಬೈಪಾಸ್ ರಸ್ತೆಯ ಮೂಲಕ ನೇರವಾಗಿ ತೆರಳುವ ವ್ಯವಸ್ಥೆ ಮಾಡಲಾಗಿದೆ. ಈ ಬೈಪಾಸ್ ರಸ್ತೆಯು ಪತ್ರಾವೋ ಸರ್ಕಲ್ ಬಳಿ ಪುತ್ತೂರು ನಗರದೊಳಗೆ ಬರುವ ರಸ್ತೆಯನ್ನು ಸೇರುತ್ತದೆ. ರಸ್ತೆ ವಿಸ್ತರಣೆಗೊಂಡರೂ, ಹಿಂದೆ ಇದ್ದ ವೃತ್ತವೇ ಈಗಲೂ ಇರುವ ಕಾರಣ ಅತ್ಯಂತ ಅಗಲವಾದ ರಸ್ತೆಗೆ ಅತೀ ಕಿರಿದಾಗಿರುವ ಈ ವೃತ್ತ ಯಾವುದೇ ರೀತಿಯ ಪರಿಣಾಮ ಬೀರದ ಕಾರಣ ಪ್ರತಿನಿತ್ಯವೂ ಇಲ್ಲಿ ಅವಘಡ ಸಂಭವಿಸುತ್ತಿದೆ.
ಮಾರ್ಗಸೂಚಿ ಇಲ್ಲದೆ ಗೊಂದಲ: ಪುತ್ತೂರು ಪೇಟೆ ಕಡೆಯಿಂದ ಬರುವ ವಾಹನಗಳು ಹಾಗೂ ರಾಜ್ಯ ಹೆದ್ದಾರಿಯಲ್ಲಿ ಹಾದುಹೋಗುವ ವಾಹನಗಳು ಸರಿಯಾದ ಮಾರ್ಗಸೂಚಿ ಇಲ್ಲದೆ ಗೊಂದಲಕ್ಕೆ ಸಿಲುಕುತ್ತಾರೆ. ಅಲ್ಲದೆ ಪಾದಚಾರಿಗಳಿಗೂ ಯಾವ ಕಡೆಯಿಂದ ವಾಹನಗಳು ಬರುತ್ತಿವೆ ಎನ್ನುವ ಲೆಕ್ಕಾಚಾರವೂ ಸಿಗದೆ ಹೆಚ್ಚಿನ ಸಂಖ್ಯೆಯ ಪಾದಚಾರಿಗಳು ಈ ಸರ್ಕಲ್ನಲ್ಲಿ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ.
ದಿನಂಪ್ರತಿ ಅವಘಡಕ್ಕೆ ಕಾರಣವಾಗುತ್ತಿರುವ ಪತ್ರಾವೋ ಜಂಕ್ಷನ್‌ನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ತಕ್ಷಣ ನಡೆಯಬೇಕಿದೆ. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಈ ಜಂಕ್ಷನ್ ಇನ್ನಷ್ಟು ಬಲಿ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ರಜನೀಶ್, ಲಾರಿ ಚಾಲಕ ಹಾಗೂ ಮಾಲೀಕ