ಜಿಲ್ಲೆ

ಕೈಕೊಟ್ಟ ಆನ್​ಲೈನ್ ನೋಂದಣಿ ಸೇವೆ

ರಮೇಶ್​ ಕುಮಾರ್​​ ಬಿ ಎಡಮೋಳೆ

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ಕ್ರಯ, ಮಾರಾಟ, ವರ್ಗಾವಣೆ ಪತ್ರ, ಅಡಮಾನ ಪತ್ರ ನೋಂದಣಿಗಾಗಿ ಜಾರಿಗೆ ತರಲಾದ ಬಹುನಿರೀಕ್ಷಿತ ಆನ್​ಲೈನ್ ಸೇವೆ ಆರಂಭದಲ್ಲೇ ಮುಗ್ಗರಿಸಿದೆ. ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಎರಡು ವರ್ಷಗಳ ಹಿಂದೆ ವಿಫಲಗೊಂಡಿದ್ದ ಯೋಜನೆಯಲ್ಲಿನ ಲೋಪ ಸರಿಪಡಿಸದೇ, ಮತ್ತೆ ಜಾರಿಗೆ ತಂದಿರುವುದು ಸಮಸ್ಯೆಗೆ ಕಾರಣವಾಗಿದೆ. ಇದರ ವಿರುದ್ಧ ಜನಾಕ್ರೋಶವೂ ವ್ಯಕ್ತವಾಗುತ್ತಿದೆ.

ಉಪ ನೋಂದಣಾಧಿಕಾರಿ ಕಚೇರಿಯಲ್ಲಿನ ಸೇವೆಗಳನ್ನು ಸರಳೀಕರಣ ಮಾಡುವ ಉದ್ದೇಶದಿಂದ ಕಾವೇರಿ ಪೋರ್ಟಲ್ ಮೂಲಕ ನೋಂದಣಿ ಸೇವೆಯನ್ನು ನ. 2ರಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ತುಮಕೂರು ಜಿಲ್ಲೆ ಬೈಲಹೊಂಗಲ, ಕಲಬುರ್ಗಿ ಜಿಲ್ಲೆ ಚಿಂಚೋಳಿ ಮತ್ತು ಬೆಂಗಳೂರು ಗ್ರಾಮಾಂತರ ಜಾಲ ಉಪನೋಂದಣಿ ಕಚೇರಿಯಲ್ಲಿ ಆನ್​ಲೈನ್ ಸೇವೆ ಕಲ್ಪಿಸಲಾಗಿತ್ತು. ಆದರೆ, 3 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲೂ ಒಂದು ನೋಂದಣಿ ಪ್ರಕ್ರಿಯೆಯೂ ನಡೆದಿಲ್ಲ. ಈ ಕಚೇರಿಗಳಲ್ಲಿ ಪ್ರತಿದಿನ 60 ರಿಂದ 70 ನೋಂದಣಿ ನಡೆಯುತ್ತಿದ್ದವು. ತುಮಕೂರು ಬೈಲಹೊಂಗಲ ಸಬ್ ರಿಜಿಸ್ಟ್ರಾರ್ ಕಚೇರಿ ಮುಂಭಾಗ ಮಂಗಳವಾರ ಸಾರ್ವಜನಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮೊದಲನೇ ಪುಟದಿಂದ...

ಎಚ್​ಡಿಕೆ ಸರ್ಕಾರ ಹಿಂಪಡೆದಿತ್ತು: 2018ರಲ್ಲಿ ಮುಖ್ಯಮಂತ್ರಿ ಆಗಿದ್ದ ಎಚ್.ಡಿ. ಕುಮಾರಸ್ವಾಮಿ, ಉಪ ನೋಂದಣಾಧಿಕಾರಿಗಳ ಕಚೇರಿ ಸೇವೆಗಳನ್ನು ಆನ್​ಲೈನ್​ಗೊಳಿಸುವ ಯೋಜನೆ ಜಾರಿಗೆ ತಂದಿದ್ದರು. ಆದರೆ, ಎಲ್ಲ ರೀತಿಯ ಜನರು ಆನ್​ಲೈನ್ ಸೇವೆ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕೆ ಅದನ್ನು ಹಿಂಪಡೆದು, ಆನ್​ಲೈನ್ ಆಯ್ಕೆಯನ್ನು ಅಗತ್ಯ ಇದ್ದವರು ಬಳಸಿಕೊಳ್ಳುವ ಆಯ್ಕೆ ನೀಡಿದ್ದರು. ‘ಮಾರಾಟಗಾರ, ಖರೀದಿದಾರರು ವಿದೇಶದಲ್ಲಿ ನೆಲೆಸಿದ್ದರೂ ಸಂಬಂಧಪಟ್ಟ ಕಚೇರಿಗೆ ಬಂದು ದಾಖಲೆ ಪರಿಶೀಲನೆ ನಡೆಸಿ ಮುಖಾಮುಖಿ ವ್ಯವಹಾರ ನಡೆಸಿ ನೋಂದಣಿ ಪ್ರಕ್ರಿಯೆ ನಡೆಸುತ್ತಾರೆ. ಇಲ್ಲಿಯವರೆಗೂ ರಾಜ್ಯದಲ್ಲಿ ನಿರೀಕ್ಷೆ ಮಟ್ಟದಲ್ಲಿ ಆನ್​ಲೈನ್​ನಲ್ಲಿ ನೋಂದಣಿ ನಡೆದಿಲ್ಲ’ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬ್ಯಾಂಕ್, ಬೆಸ್ಕಾಂ ಕಚೇರಿಗಳ ಯಂತ್ರ ದಲ್ಲಿ ಹಣ ಜಮೆ, ಬಿಲ್ ಪಾವತಿಯೇ ಸಾಧ್ಯವಾಗುತ್ತಿಲ್ಲ. ಇನ್ನು, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 10ಕ್ಕೂ ಅಧಿಕ ದಾಖಲೆಗಳನ್ನು ಅಪ್​ಲೋಡ್ ಮಾಡಿ, ಆಸ್ತಿ ನೋಂದಣಿ ಮಾಡಲು ಸಾಧ್ಯವೇ?

| ಶಿವಕುಮಾರ್ ತುಮಕೂರು

ಜನರಿಗೆ ಅನನುಕೂಲವೇ ಹೆಚ್ಚು

ಆನ್​ಲೈನ್ ಸೇವೆಯಿಂದ ಜನರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು. ಕ್ರಯ, ಮಾರಾಟ, ವರ್ಗಾವಣೆ ಪತ್ರ, ಅಡಮಾನ ಪತ್ರ ಬರೆಸಿಕೊಳ್ಳಲು ಸ್ಟಾಂಪ್​ವೆಂಡರ್​ಗಳ ಮೋರೆ ಹೋಗಬೇಕಾಗಿದೆ. ಪಿಡಿಇಎಸ್​ನಲ್ಲಿ ದಾಖಲೆ ಅಪ್​ಲೋಡ್ ಮಾಡಲು ಏಜೆಂಟ್​ಗಳಿಗೆ ಹಣ ನೀಡಬೇಕಾಗುತ್ತದೆ. ನೋಂದಣಿ ಪ್ರಕ್ರಿಯೆ ರದ್ದಾದರೆ ಆನ್​ಲೈನ್​ನಲ್ಲಿ ಪಾವತಿಸಿದ್ದ ಶುಲ್ಕವನ್ನು ಹಿಂಪಡೆಯಲು ಅವಕಾಶ ಇಲ್ಲ.

ವೈಫಲ್ಯಕ್ಕೆ ಕಾರಣವೇನು?

ಭೌತಿಕವಾಗಿ ನೋಂದಣಿ ಮಾಡುವುದನ್ನು ರದ್ದುಮಾಡಿರುವ ಕಾರಣಕ್ಕೆ ಕಚೇರಿ ಸಿಬ್ಬಂದಿ ನೇರವಾಗಿ ದತ್ತಾಂಶ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರೇ ಪಿಡಿಇಎಸ್(ಪ್ರೀ ಡಾಟಾ ಎಂಟ್ರಿ ಸಿಸ್ಟಂ)ನಲ್ಲಿ ದತ್ತಾಂಶ ಮತ್ತು ದಾಖಲೆಗಳ ಅಪ್​ಲೋಡ್ ಮಾಡಬೇಕು. ನೋಂದಣಿ, ಮುದ್ರಾಂಕ ಶುಲ್ಕವನ್ನು ಆನ್​ಲೈನ್​ನಲ್ಲಿಯೇ ಪಾವತಿ ಮಾಡಬೇಕು. ಹಲವರಿಗೆ ಆನ್​ಲೈನ್ ಜ್ಞಾನ ಇರುವುದಿಲ್ಲ. ಸಾಮಾನ್ಯ ರೈತರು ಹೇಗೆ ಅಪ್​ಲೋಡ್ ಮಾಡಲು ಸಾಧ್ಯ? ಕಂಪ್ಯೂಟರ್ ಸಾಮಾನ್ಯ ಜ್ಞಾನ ಇದ್ದವರೂ ಕೂಡ ಪಿಡಿಇಎಸ್ ವ್ಯವಸ್ಥೆಯಡಿ ದಾಖಲೆಗಳನ್ನು ಅಪ್​ಲೋಡ್ ಮಾಡಲು ಸಾಧ್ಯವಾಗಿಲ್ಲ. ಜನರಲ್ಲಿ ಜಾಗೃತಿ ಮೂಡಿಸಿದ ನಂತರ ಯೋಜನೆ ಜಾರಿಗೆ ತರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಡಿಡಿ ರೂಪದಲ್ಲಿ ಶುಲ್ಕ ಸ್ವೀಕಾರ ರದ್ದಾದ ಕಾರಣಕ್ಕೆ ಆನ್​ಲೈನ್​ನಲ್ಲಿ ಹಣ ಪಾವತಿಗೂ ಜನರು ಹಿಂದೇಟು ಹಾಕಿದ್ದಾರೆ. ಕೆಲವರು ಕಚೇರಿಗಳಿಗೆ ಬಂದು ಆನ್​ಲೈನ್ ಸೇವೆ ಬಗ್ಗೆ ತಿಳಿದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.