ಜಿಲ್ಲೆ

ಹುಬ್ಬಳ್ಳಿಗೆ ತೆರಳಲು ಪರದಾಟ

Gadag

ಮಲ್ಲು ಕಳಸಾಪುರ ಲಕ್ಷ್ಮೇಶ್ವರ

ಲಕ್ಷ್ಮೇಶ್ವರ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಶಿರೂರ ಹತ್ತಿರ ರೈಲು ಮಾರ್ಗಕ್ಕೆ ನಿರ್ವಿುಸಿದ ಮೇಲ್ಸೇತುವೆ ಕುಸಿದು 11 ದಿನಗಳು ಕಳೆದಿದೆ. ಸಂಬಂಧಪಟ್ಟ ಇಲಾಖೆ ಯಾವುದೇ ಪರ್ಯಾಯ ವ್ಯವಸ್ಥೆಗೆ ಮುಂದಾಗದ್ದರಿಂದ ಲಕ್ಷ್ಮೇಶ್ವರ ಮತ್ತು ಕುಂದಗೋಳ ತಾಲೂಕಿನ ಜನರು ನಿತ್ಯ ಪರದಾಡುವ ಸ್ಥಿತಿ ನಿರ್ವಣವಾಗಿದೆ.

ಏ. 27ರಂದು ರಾತ್ರಿ ಸುರಿದ ಮಳೆಗೆ ಸೇತುವೆ ಕೆಳಗಿನ ತಡೆಗೋಡೆ ಕುಸಿದಿದೆ. ಇದರಿಂದಾಗಿ ಲಕ್ಷ್ಮೇಶ್ವರ ಭಾಗದ ಜನರಿಗೆ ಹುಬ್ಬಳ್ಳಿ ಸಂಪರ್ಕವೇ ಕಡಿತಗೊಂಡಂತಾಗಿದೆ. ಇದರಿಂದಾಗಿ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಹೋಗಬೇಕಾದರೆ ಗುಡಗೇರಿ, ಹುಲಗೂರ ಇಲ್ಲವೇ ಸಂಶಿಯಿಂದ ಬಸಾಪುರ, ನೆರ್ತಿ, ಬೆನಕನಹಳ್ಳಿ ಕುಂದಗೋಳ ರಸ್ತೆ ಸಂರ್ಪಸಬೇಕು. ಇದರಿಂದ 10 ಕಿಮೀ ಅಂತರ ಹೆಚ್ಚಾಗುತ್ತದೆ. ಅಲ್ಲದೆ, ಈ ರಸ್ತೆ ಅತ್ಯಂತ ಕಿರಿದಾಗಿದ್ದು ದೊಡ್ಡ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಮಾರ್ಗದ ಹಳ್ಳಿಗಳ ಜನರು ಭಾರಿ ವಾಹನಗಳ ಸಂಚಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ಸವಣೂರ-ಶಿಗ್ಗಾಂವಿ ಮೂಲಕ ಹುಬ್ಬಳಳಿ ತಲುಪಬೇಕಾಗಿದೆ.

ವ್ಯಾಪಾರ- ವಹಿವಾಟಿಗೆ ತೊಂದರೆ: ಲಕ್ಷ್ಮೇಶ್ವರ ಸೇರಿ ತಾಲೂಕಿನ ಎಲ್ಲ ಭಾಗದ ಜನರಿಗೆ ಕಿರಾಣಿ, ಕಟ್ಟಡ ಸಾಮಗ್ರಿ, ಆಹಾರ ಪದಾರ್ಥ, ಔಷಧ, ಕೃಷಿ ಉತ್ಪನ್ನ ಸೇರಿ ಇತರ ಎಲ್ಲ ಜೀವನಾವಶ್ಯಕ ವಸ್ತುಗಳ ಸಾಗಾಟಕ್ಕೆ ಈ ಮಾರ್ಗವೇ ಆಧಾರ. ಆದರೆ, ಈ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿರುವುದರಿಂದ ಮತ್ತು ಕರೊನಾ ಸಂಕಷ್ಟದ ಸಮಯವಾಗಿದ್ದರಿಂದ ಅಗತ್ಯ ವಸ್ತುಗಳ ಕೊರತೆ ಜತೆಗೆ ಬೆಲೆ ಹೆಚ್ಚಳಕ್ಕೂ ಕಾರಣವಾಗಿದೆ. ಇದರಿಂದ ಎಲ್ಲ ಬಗೆಯ ವ್ಯಾಪಾರಸ್ಥರಿಗೆ ಪೆಟ್ಟು ಬಿದ್ದಿದೆ.

ರೋಗಿಗಳ ಪರದಾಟ: ಲಕ್ಷ್ಮೇಶ್ವರ ಮತ್ತು ಕುಂದಗೋಳ ತಾಲೂಕಿನ ಕೆಲ ಭಾಗದ ರೋಗಿಗಳಿಗೆ ಹುಬ್ಬಳ್ಳಿಯ ಆಸ್ಪತ್ರೆಗಳು ಸಂಜೀವಿನಿಯಾಗಿವೆ. ಸದ್ಯ ಹೆಚ್ಚುತ್ತಿರುವ ಕರೊನಾ ಸೋಂಕಿತರು, ಅಪಘಾತಕ್ಕೀಡಾದವರು, ತೀವ್ರ ಆರೋಗ್ಯ ತೊಂದರೆಗೀಡಾದವರು ಹುಬ್ಬಳ್ಳಿ ತಲುಪಲು ಹೆಚ್ಚು ಸಮಯ ಬೇಕಾಗುವುದರಿಂದ ಪ್ರಾಣಕ್ಕೂ ಕುತ್ತು ಬರುವಂತಾಗಿದೆ. ಅಲ್ಲದೆ ರಸ್ತೆ ಸಮಸ್ಯೆಯಿಂದಾಗಿ ಬಾಡಿಗೆ ವಾಹನದವರೂ ಹುಬ್ಬಳ್ಳಿಗೆ ಹೋಗಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಮತ್ತಷ್ಟು ಸಮಸ್ಯೆ ಹೆಚ್ಚಲು ಕಾರಣವಾಗಿದೆ.

ಸೇತುವೆ ದುರಸ್ತಿಗೆ ಆಗ್ರಹ: ಲಕ್ಷ್ಮೇಶ್ವರ ತಾಲೂಕಿನ ಜನರು, ವ್ಯಾಪಾರಸ್ಥರಿಗೆ ಹುಬ್ಬಳ್ಳಿಯೇ ಸಂಪನ್ಮೂಲ ಕೇಂದ್ರವಾಗಿದೆ. ಕಿರಾಣಿ ಸೇರಿ ಇತರ ಜೀವನಾವಶ್ಯಕ ವಸ್ತುಗಳ ಸರಕು ಸಾಗಣೆ ವಾಹನ ಸಂಚಾರ ಬಂದ್ ಆಗಿವೆ. ಸದ್ಯ ಮುಂಗಾರು ಮಳೆ ಪ್ರಾರಂಭವಾಗಿದ್ದರಿಂದ ರೈತರಿಗೆ ಗೊಬ್ಬರ, ಬೀಜ ದಾಸ್ತಾನು ಮಾಡಲು ಆಗುತ್ತಿಲ್ಲ. ಮುಖ್ಯವಾಗಿ ಕರೊನಾ ಸಂಕಷ್ಟ ಸಮಯದಲ್ಲಿ ಅಗತ್ಯ ವಸ್ತುಗಳ ಕೊರತೆ ಉಂಟಾಗುವ ಸಾಧ್ಯತೆ ಕಂಡು ಬರುತ್ತಿದೆ. ಆದ್ದರಿಂದ ಗದಗ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿ ಧಾರವಾಡ ಜಿಲ್ಲೆಯ ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಪಟ್ಟಣದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ್ ಒತ್ತಾಯಿಸಿದ್ದಾರೆ.

ಲಕ್ಷ್ಮೇಶ್ವರದಿಂದ ಕುಂದಗೋಳ ಮಾರ್ಗವಾಗಿ ಹುಬ್ಬಳ್ಳಿ ಸಂರ್ಪಸುವ ರಸ್ತೆ ಸೇತುವೆ ಕುಸಿತದಿಂದ ಸಂಪರ್ಕ ಕಡಿತಗೊಂಡು ಲಕ್ಷ್ಮೇಶ್ವರ ತಾಲೂಕಿನ ಜನತೆಗೆ, ವ್ಯಾಪಾರ-ವಹಿವಾಟಿ ಸಾಕಷ್ಟು ತೊಂದರೆಯಾಗಿದೆ. ಆದ್ದರಿಂದ ಸೇತುವೆ ದುರಸ್ತಿ ಕಾರ್ಯ ಆದಷ್ಟು ಬೇಗ ಪೂರ್ಣಗೊಳಿಸಬೇಕು ಮತ್ತು ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿವರಾದ ಜಗದೀಶ ಶೆಟ್ಟ್ಟ್, ಪ್ರಹ್ಲಾದ ಜೋಶಿ ಅವರೊಂದಿಗೆ ಮಾತನಾಡಿದ್ದೇನೆ.| ರಾಮಣ್ಣ ಲಮಾಣಿ, ಶಾಸಕ