ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಾಪು ತಾಲೂಕು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿಯಿಂದ ಮಳೆಗಾಲದಲ್ಲಾಗುವ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿದ ತಹಸೀಲ್ದಾರ್ ಪ್ರತಿಭಾ.ಆರ್. ಜಿಲ್ಲಾಧಿಕಾರಿಗೆ ವಿಸ್ಕೃತ ವರದಿ ಸಲ್ಲಿಸಿದ್ದಾರೆ.
ಕಾಪು ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿಯಿಂದ ಹೆಜಮಾಡಿಯವರೆಗೆ ಶುಕ್ರವಾರ ಸಂಚರಿಸಿದ ತಹಸೀಲ್ದಾರ್, ಮಳೆಗಾಲದ ಪೂರ್ವಸಿದ್ಧತೆ ಪರಿಶೀಲನೆ ನಡೆಸಿದರು. ಕಟಪಾಡಿ, ಪೊಸಾರು, ಪಡುಬಿದ್ರಿ, ಹೆಜಮಾಡಿ, ಬಂಟರ ಭವನದ ಎದುರು, ಮಸೀದಿ ನರ್ಸರಿ ಹತ್ತಿರ ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿ ನೀರು ಸರಾಗವಾಗಿ ಹರಿದು ಹೋಗದಿರಲು ಕಾರಣಗಳನ್ನು ಪಟ್ಟಿ ಮಾಡಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.
ಕಟಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹೆದ್ದಾರಿ ಸಮಸ್ಯೆ ಬಗ್ಗೆ ಗ್ರಾಪಂ ಅಧ್ಯಕ್ಷೆ ಪ್ರಭಾ ಶೆಟ್ಟಿ ವಿವರಿಸಿದರು. ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತಿರುವುದರ ಬಗ್ಗೆ ಸ್ಥಳೀಯರು ಅಳಲು ತೋಡಿಕೊಂಡರು. ಕಳೆದ ಬಾರಿಯಂತೆ ಸಮಸ್ಯೆ ಮರುಕಳಿಸಬಾರದು. ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಗ್ರಾಮಾಡಳಿತಾಧಿಕಾರಿ ಡೇನಿಯಲ್ ಗಮನಕ್ಕೆ ತಂದರು.
ಒಳಚರಂಡಿ ಕಾಮಗಾರಿ ವಿಸ್ತರಣೆ: ಕಟಪಾಡಿ ಜಂಕ್ಷನ್‌ನಿಂದ ಸುಮಾರು 2 ಕಿ.ಮೀ. ಒಳಚರಂಡಿ ನಿರ್ಮಿಸಿದ್ದು ಸರ್ವಿಸ್ ರಸ್ತೆ ಮುಕ್ತಾಯವಾಗುವಲ್ಲಿ ಒಳಚರಂಡಿ ಕಾಮಗಾರಿ ಸ್ಥಳಿಗತಗೊಳಿಸಲಾಗಿದೆ. ಇದರಿಂದ ಅಲ್ಲಿರುವ ವಾಸ್ತವ್ಯದ ಮನೆಗಳಿಗೆ ನೆರೆಹಾನಿಯಿಂದ ತಪ್ಪಿಸಲು ಒಳಚರಂಡಿ ಕಾಮಗಾರಿ ಕಲ್ಲಾಪು ಸೇತುವೆವರೆಗೆ ವಿಸ್ತರಣೆ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ತಹಸೀಲ್ದಾರ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಅಸಮರ್ಪಕ ಚರಂಡಿಗಳು: ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಒಳಚರಂಡಿಯಲ್ಲಿ ಸರಾಗವಾಗಿ ನೀರು ಹರಿದು ಹೋಗದೆ ಕೃತಕ ನೆರೆಯಿಂದ ನಾಲ್ಕಾರು ಮನೆಗಳು ಪ್ರತಿ ವರ್ಷ ಸಂಕಷ್ಟಕ್ಕೊಳಗಾಗುತ್ತಿವೆ. ಅನೇಕರಿಗೆ ನಡೆದಾಡಲು ಹಾಗೂ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ಪಡುಬಿದ್ರಿ ಸರ್ವಿಸ್ ರಸ್ತೆ ಕೊನೆಯಲ್ಲಿ ಚರಂಡಿ ಅಪೂರ್ಣವಾಗಿದೆ. ಪಡುಬಿದ್ರಿ ಬಂಟರ ಭವನ ಎದುರು ಚರಂಡಿ ನಿರ್ಮಾಣವಾಗಿಲ್ಲ. ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಹೆದ್ದಾರಿ ಚರಂಡಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕನ್ನಂಗಾರು ಗರಡಿಯಿಂದ ಅರಫಾ ಹೋಟೆಲ್‌ವರೆಗೆ ಸರ್ವಿಸ್ ರಸ್ತೆ, ಮಹಾಗಣಪತಿ ದೇವಸ್ಥಾನದಿಂದ ಬಂಟರ ಭವನ ಕಡೆ ಹೆದ್ದಾರಿ ಅಡ್ಡಲಾಗಿ ನೀರು ಹರಿಯಲು ರಚಿಸಿರುವ ಅಂಡರ್ ಪಾಸ್ ಕಾಲುವೆಯ ನಿರ್ಮಾಣ ಅವೈಜ್ಞಾನಿಕವಾಗಿದ್ದು ಪಕ್ಕದಲ್ಲಿರುವ ಕಿರಿದಾದ ಚರಂಡಿ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ವರದಿಯಲ್ಲಿ ತಹಸೀಲ್ದಾರ್ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಗಳನ್ನು ಅಗಲಗೊಳಿಸಿ ಮತ್ತು ವೈಜ್ಞಾನಿಕವಾಗಿ ನಿರ್ಮಾಣ ಮಾಡಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು. ಹೆಜಮಾಡಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಹಾಗೂ ಶಿವನಗರ ದೇವಸ್ಥಾನದ ಕಮಾನಿನ ಪಕ್ಕದಲ್ಲಿ ಸೂಕ್ತ ಚರಂಡಿ ನಿರ್ಮಿಸಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ವರದಿಯಲ್ಲಿ ತಹಸೀಲ್ದಾರ್ ಉಲ್ಲೇಖಿಸಿದ್ದಾರೆ.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವಾ, ಕಂದಾಯ ನಿರೀಕ್ಷಕ ಇಜ್ಜಾರ್ ಸಾಬಿರ್, ಗ್ರಾಮ ಆಡಳಿತಾಧಿಕಾರಿಗಳಾದ ಜಗದೀಶ್, ಶ್ರೀಕಾಂತ್, ಪಿಡಿಒಗಳಾದ ಚಂದ್ರಕಲಾ, ಸತೀಶ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಪ್ರತಿ ವರ್ಷ ಕಾಪುವಿನಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಕಂದಾಯ ಇಲಾಖೆ ನೆರೆ ರಕ್ಷಣಾ ಕಾರ್ಯದಲ್ಲಿ ತೊಡಗಬೇಕಾಗುತ್ತದೆ. ಸಾರ್ವಜನಿಕ ರಕ್ಷಣೆ ನಮ್ಮ ಮೊದಲ ಆದ್ಯತೆ. ಅವೈಜ್ಞಾನಿಕ ಕಾಮಗಾರಿ ಕುರಿತು ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೂ ತರಲಾಗಿದೆ. ಪ್ರತಿಭಾ ಆರ್. ಕಾಪು ತಹಸೀಲ್ದಾರ್ https://www.vijayavani.net/youth-circle-social-service-work-model https://www.vijayavani.net/unique-service-to-the-boar-and-the-peddler-in-the-yakshagana-field