ಸಂದೀಪ್ ಸಾಲ್ಯಾನ್ ಬಂಟ್ವಾಳ
ಬಂಟ್ವಾಳ ಪುರಸಭೆಯ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಸಂಗ್ರಹವಾಗಿದ್ದ ಹಸಿಕಸದಿಂದ 200 ಟನ್ ಗೊಬ್ಬರ ಸಿದ್ಧಗೊಂಡಿದ್ದರೂ, ಗಾಳಿಸುವ ಯಂತ್ರದ ಅನುಷ್ಠಾನ ದೋಷದಿಂದ ಒಂದು ವರ್ಷ ಕಳೆದರೂ ಗೊಬ್ಬರ ಘಟಕದಲ್ಲೇ ಉಳಿಯುವಂತಾಗಿದೆ. ಇದೀಗ ಈ ಗೊಬ್ಬರ ಮಾರಾಟಕ್ಕೆ ಪುರಸಭೆ ಮುಂದಾಗಿದ್ದು, ಖರೀದಿಸಲು ಇಚ್ಛಿಸುವವರಿಂದ ದರಪಟ್ಟಿ ಆಹ್ವಾನಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಪ್ರತಿ ದಿನವೂ ನಾಲು ಟನ್‌ಗಿಂತಲೂ ಅಧಿಕ ಹಸಿ ಕಸ ಸಂಗ್ರಹವಾಗುತ್ತದೆ. ಒಣ ಕಸ ನಿರ್ವಹಣೆ ಸುಲಭವಿದ್ದರೂ ಹಸಿ ಕಸದ ನಿರ್ವಹಣೆಯೇ ಬಂಟ್ವಾಳ ಪುರಸಭೆಗೆ ಸವಾಲಾಗಿತ್ತು. ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ಪುರಸಭೆಯ ತ್ಯಾಜ್ಯ ಸಂಸ್ಕರಣ ಘಟಕ ಇದ್ದರೂ ಹಸಿಕಸ ವೈಜ್ಞಾನಿಕವಾಗಿ ವಿಲೇವಾರಿಯಾಗುತ್ತಿಲ್ಲ ಎಂಬ ಸ್ಥಳೀಯರ ದೂರಿನಿಂದಾಗಿ ಘಟಕದಲ್ಲಿ ಹಸಿಕಸ ವಿಲೇವಾರಿ ಮಾಡುವುದು ಬಂಟ್ವಾಳ ಪುರಸಭೆಗೆ ದಿನನಿತ್ಯದ ತಲೆನೋವಾಗಿತ್ತು.
ಹಿಂದಿನ ಮುಖ್ಯಾಧಿಕಾರಿ ಮುತುವರ್ಜಿಯಲ್ಲಿ ಪುರಸಭೆಯ ಕಚೇರಿ ಹಿಂಭಾಗ ಹಸಿ ಕಸವನ್ನು ಗೊಬ್ಬರವನ್ನಾಗಿ ಮಾಡುವ ಕಾರ್ಯಕ್ಕೆ ಚಾಲನೆ ದೊರಕಿತ್ತು. ಬಳಿಕ ಅವರು ವರ್ಗಾವಣೆಗೊಂಡಿದ್ದು, ಹಸಿ ಕಸ ವಿಲೇವಾರಿ ಸಮಸ್ಯೆ ಮತ್ತೊಮ್ಮೆ ಉದ್ಭವಿಸಿತು. ಈ ನಡುವೆ ಬಂಟ್ವಾಳ ಪುರಸಭೆ ವ್ಯಾಪ್ತಿಯ ಹಸಿತ್ಯಾಜ್ಯ ವಿಂಗಡಣೆಯಾಗಿ ಒಡ್ಡೂರು ಫಾರ್ಮ್‌ನಲ್ಲಿರುವ ಸಿಎನ್‌ಜಿ ಘಟಕಕ್ಕೆ ಹೋಗುತ್ತಿದೆ. ಕೆಲವೊಮ್ಮೆ ಉಳಿಕೆಯಾದ ಹೆಚ್ಚುವರಿ ತ್ಯಾಜ್ಯವನ್ನು ಕಂಚಿನಡ್ಕ ಪದವಿನಲ್ಲಿರುವ ಸಂಸ್ಕರಣ ಘಟಕಕ್ಕೆ ಕೊಂಡೊಯ್ದು ಗೊಬ್ಬರವಾಗಿ ಪರಿವರ್ತಿಸಲಾಗಿದೆ.
ಹಸಿ ತ್ಯಾಜ್ಯದಿಂದ ತಯಾರಾದ ಗೊಬ್ಬರವನ್ನು ಅಂತಿಮ ಹಂತದಲ್ಲಿ ಗಾಳಿಸಿ, ಶುದ್ಧೀಕರಿಸುವ ಬೃಹತ್ ಯಂತ್ರವನ್ನು ಸಂಸ್ಕರಣ ಘಟಕದಲ್ಲಿ ಕಳೆದ ವರ್ಷವೇ ಅನುಷ್ಠಾನಗೊಳಿಸಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಾಗಿದ್ದರಿಂದ ಗೊಬ್ಬರವನ್ನು ಗಾಳಿಸಿ, ವಿಂಗಡಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಗೊಬ್ಬರ ಘಟಕದಲ್ಲೇ ಉಳಿಯಿತು. ಯಂತ್ರ ಅನುಷ್ಠಾನಗೊಳಿಸಿದ ಕಂಪನಿಗೆ ಮನವಿ ಮಾಡಲಾಗಿದೆ. ಆದರೂ ಇತ್ತ ಗಮನ ಹರಿಸದ ಕಾರಣ ಪುರಸಭೆಯ ಮಹತ್ವಾಕಾಂಕ್ಷಿ ಯೋಜನೆಯೊಂದು ಕಾರ್ಯಗತಗೊಳ್ಳಲು ಅಡ್ಡಿಯಾಗುತ್ತಿದೆ. ಈಗಾಗಲೇ ಈ ಗೊಬ್ಬರಕ್ಕೆ ಬಹಳ ಬೇಡಿಕೆ ಇದ್ದರೂ, ಮಾರಾಟ ಸಾಧ್ಯವಾಗುತ್ತಿಲ್ಲ.
ಬಯೋಗ್ಯಾಸ್ ಘಟಕ ಕಾರ್ಯಾಚರಣೆ
ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಬಂಟ್ವಾಳ ಪುರಸಭೆಯ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ 100 ಕೆ.ಜಿ. ಸಾಮರ್ಥ್ಯದ ಬಯೋಗ್ಯಾಸ್ ಘಟಕ ಅನುಷ್ಠಾನ ಮಾಡಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ವಿಲೇ ಆಗದ ಹಸಿ ಕಸವನ್ನು ಬಯೋಗ್ಯಾಸ್ ಆಗಿ ಪರಿವರ್ತಿಸುವ ಉದ್ದೇಶದಿಂದ ಘಟಕ ಆರಂಭಿಸಿ ಪ್ರಾಯೋಗಿಕ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ ಕಾರಣಾಂತರಗಳಿಂದ ಈ ಘಟಕ ಪೂರ್ಣಪ್ರಮಾಣದಲ್ಲಿ ಇನ್ನೂ ಕಾರ್ಯರಂಭಿಸಿಲ್ಲ.
ಕಂಚಿನಡ್ಕ ಪದವಿನಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಹಸಿಕಸದಿಂದ ತಯಾರಾದ ಗೊಬ್ಬರ ಮಾರಾಟಕ್ಕೆ ಟೆಂಡರ್ ಕರೆಯಲಾಗಿದೆ. ಯಂತ್ರದ ಸಮಸ್ಯೆಯಿಂದ ಸ್ವಲ್ಪ ತಡವಾಗಿದೆ. ಸುಮಾರು 200 ಟನ್ ಗೊಬ್ಬರ ದಾಸ್ತಾನಿದ್ದು, ಜತೆಗೆ ಬೇಡಿಕೆಯೂ ದೊಡ್ಡ ಮಟ್ಟದಲ್ಲಿದೆ. ವಾಸು ಪೂಜಾರಿ ಲೊರೆಟ್ಟೋ, ಬಂಟ್ವಾಳ ಪುರಸಭೆ ಅಧ್ಯಕ್ಷ