ಜಿಲ್ಲೆ

ಸ್ಟೀಲ್ ಪಾತ್ರೆ ಬಳಕೆಗೆ ಕಾಸು ಬೇಡವೇ?

ಶಿವರಾಜ.ಎಂ

 ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳ ಆರೋಗ್ಯದ ಕಾಳಜಿಯಿಂದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಬಳಸಲಾಗುತ್ತಿರುವ ಅಲ್ಯುಮಿನಿಯಂ ಪಾತ್ರೆಗಳನ್ನು ನಿಷೇಧಿಸಿ ಸರ್ಕಾರ ಕಳೆದ ಮೂರು ವರ್ಷದ ಹಿಂದೆಯೇ ಆದೇಶ ಜಾರಿ ಮಾಡಿದೆ, ಆದರೆ ಅದಕ್ಕೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡದೆ ಮೀನಮೇಷ ಎಣಿಸುತ್ತಿರುವುದರಿಂದ ಸ್ಟೀಲ್ ಪಾತ್ರೆ ಬಳಸಲು ಕಾಸು ಬೇಡವೇ ಎಂಬ ಪ್ರಶ್ನೆ ಉದ್ಭವಿಸಿದೆ.

ಗ್ರಾಮಾಂತರ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಸೇರಿ ಸುಮಾರು 1500 ಶಾಲೆಗಳಿದ್ದು, 60 ಸಾವಿರಕ್ಕೂ ಹೆಚ್ಚು ಮಕ್ಕಳಿದ್ದಾರೆ. ಆದರೆ ಸರ್ಕಾರ ಬಿಡುಗಡೆ ಮಾಡುತ್ತಿರುವ ಹಣ ಯಾವುದಕ್ಕೂ ಸಾಲದಾಗಿದೆ. ಕೇವಲ 50ರಷ್ಟು ಮಕ್ಕಳಿರುವ ಶಾಲೆಗಳಲ್ಲಿ 15ರಿಂದ 20 ಲೀಟರ್ ಸಾಮರ್ಥ್ಯದ ಕುಕ್ಕರ್‌ಗಳನ್ನು ಖರೀದಿಸಲು ಸಾಧ್ಯವಾಗಿದೆ. ಆದರೆ 200ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಇರುವ ದೊಡ್ಡ ಶಾಲೆಗಳಲ್ಲಿ ಸರ್ಕಾರ ನೀಡುತ್ತಿರುವ ಹಣದಲ್ಲಿ ಸ್ಟೀಲ್ ಪರಿಕರಗಳನ್ನು ಖರೀದಿಸಲು ಸಾಧ್ಯವಾಗದೆ ಅನಿವಾರ್ಯವಾಗಿ ಇಂದಿಗೂ ಹಳೇಯ ಅಲ್ಯುಮಿನಿಯಂ ಪಾತ್ರೆಗಳನ್ನೇ ಬಳಸಲಾಗುತ್ತಿದೆ.

ಅಷ್ಟು ದೊಡ್ಡ ಪರಿಕರ ಸಿಗುವುದಿಲ್ಲ: ಸಾಮಾನ್ಯವಾಗಿ 200ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ದೊಡ್ಡಮಟ್ಟದಲ್ಲಿ ಹಾಲು ಕಾಯಿಸಲು, ಅನ್ನ ಮತ್ತಿತರ ಉಪಹಾರ ತಯಾರಿಸಲು ದೊಡ್ಡ ಪಾತ್ರೆಗಳ ಅವಶ್ಯಕತೆ ಇದೆ. ದೊಡ್ಡ ಗಾತ್ರದ ಅಲ್ಯೂಮಿನಿಯಂ ಪಾತ್ರೆಗಳು ಸುಲಭವಾಗಿ ಸಿಗುತ್ತವೆ. ಆದರೆ ಅಷ್ಟು ದೊಡ್ಡ ಗಾತ್ರದ ಸ್ಟೀಲ್ ಪರಿಕರಗಳು ಸಿಗುವುದು ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಪಾಲನೆ ಅಸಾಧ್ಯ ಎಂಬುದು ಜಿಲ್ಲೆಯಲ್ಲಿ ಕೇಳಿಬರುತ್ತಿರುವ ಮಾತಾಗಿದೆ.

ಶಾಲೆಗಳ ಪಟ್ಟಿ ಕೊಟ್ಟಿದೆ: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಬಿಸಿಯೂಟ ತಯಾರಿಕೆ ವೇಳೆ ಅಲ್ಯಮಿನಿಯಂ ಪಾತ್ರೆಗಳನ್ನು ಬಳಸದಂತೆ ಸರ್ಕಾರ ಆದೇಶ ಹೊರಡಿಸಿದ ಬಳಿಕ ಜಿಲ್ಲೆಯಲ್ಲಿನ ಶಾಲೆಗಳ ಸಂಖ್ಯೆ ಹಾಗೂ ವಿದ್ಯಾರ್ಥಿಗಳ ದಾಖಲಾತಿ ಬಗ್ಗೆ ಜಿಲ್ಲೆಯಿಂದ ಸರ್ಕಾರಕ್ಕೆ ಪಟ್ಟಿ ಕಳುಹಿಸಲಾಗಿದೆ. ಎಷ್ಟು ಮಕ್ಕಳಿದ್ದಾರೆ ಎಷ್ಟು ಪರಿಕರಗಳು ಬೇಕು ಎಂಬ ಮಾಹಿತಿ ಅದರಲ್ಲಿ ಅಡಕವಾಗಿದೆ. ಅಲ್ಲದೆ ಸರ್ಕಾರದ ಮಟ್ಟದಲ್ಲೂ ಶಾಲೆಗಳ ಸಂಪೂರ್ಣ ಮಾಹಿತಿ ಇರಲಿದ್ದು, ಪರಿಕರಗಳಿಗೆ ಎಷ್ಟು ಅನುದಾನ ಬೇಕಾಗುತ್ತದೆ ಎಂಬ ಮಾಹಿತಿ ಅವರ ಬಳಿಯೇ ಇರುತ್ತದೆ. ಅದರೂ ಅವಶ್ಯವಿರುವಷ್ಟು ಅನುದಾನ ಬಿಡುಗಡೆ ಮಾಡದೆ ಆದೇಶ ಪಾಲಿಸುವಂತೆ ಹೇಳುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದು ಅಡುಗೆ ಮನೆ ನಿರ್ವಾಹಕರ ಬೇಸರವಾಗಿದೆ.

ದಾನಿಗಳ ಮೊರೆ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕೈಗಾರಿಕೆ ವಲಯಗಳು ಮುಂಚೂಣಿಯಲ್ಲಿದ್ದು, ಹಲವು ಕಂಪನಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಾಯ ಹಸ್ತ ಚಾಚುತ್ತಿವೆ, ಶಾಲಾ ಕಟ್ಟಡಗಳಿಗೆ ಸುಣ್ಣಬಣ್ಣ ಮಾಡಿಸುವುದು, ನೀರಿನ ವ್ಯವಸ್ಥೆ, ಶೌಚಗೃಹಗಳ ನಿರ್ಮಾಣದಂತ ನೆರವು ನೀಡುತ್ತಿವೆ, ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರು, ಶಿಕ್ಷಣ ಇಲಾಖೆ ಸ್ಟೀಲ್ ಪರಿಕರಗಳ ಕೊಡುಗೆಗೆ ಸಿಎಸ್‌ಆರ್ ಮೊರೆ ಹೋಗುತ್ತಿವೆ. ಈಗಾಗಲೇ ದೇವನಹಳ್ಳಿಯು ಕೊರಚರಪಾಳ್ಯ ಶಾಲೆ, ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸರ್ಕಾರಿ ಶಾಲೆ ಸೇರಿ ಹಲವು ಶಾಲೆಗಳಲ್ಲಿ ಸಿಎಸ್‌ಆರ್ ಅನುದಾನದಡಿ ಅಡುಗೆಗೆ ಸ್ಟೀಲ್ ಪರಿಕಗಳನ್ನು ಪಡೆಯಲಾಗಿದೆ.

ಅಲ್ಯುಮಿನಿಯಂ ಅಪಾಯಕಾರಿ:

ಅಲ್ಯಮಿನಿಯಂ ಪಾತ್ರೆಗಳ ಬಳಕೆ ಅಪಾಯಕಾರಿಯಲ್ಲದಿದ್ದರೂ ದೀರ್ಘಕಾಲ ಬಳಕೆ ಮಾಡುವುದರಿಂದ ಅದರಲ್ಲಿನ ರಾಸಾಯನಿಕ ಮನುಷ್ಯರ ದೇಹ ಸೇರುವುದರಿಂದ ಅಪಾಯಕಾರಿಯಾಗಲಿದೆ ಎಂಬ ವರದಿಗಳಿವೆ. ಪ್ರಮುಖವಾಗಿ ಅಮ್ಲೀಯ ಆಹಾರವನ್ನು ಬೇಯಿಸುವುದರಿಂದ ಇದು ಆಹಾರದ ಮೂಲಕ ದೇಹ ಸೇರುತ್ತದೆ. ವಿಶೇಷವಾಗಿ ನರ, ಮೂಲೆ, ಮೂತ್ರಪಿಂಡ ಸಮಸ್ಯೆಗಳಿಂದ ಬಳಸುತ್ತಿರುವವರಿಗೆ ಅಪಾಯಕಾರಿಯಾಗಲಿದೆ ಎಂಬ ದೃಷ್ಟಿಯಿಂದ ಅಲ್ಯುಮಿನಿಯಂ ಪರಿಕರಗಳನ್ನು ನಿಷೇಧಿಸಲಾಗಿದೆ.

ಅಲ್ಯುಮಿನಿಯಂ ಪಾತ್ರೆಗಳ ದೀರ್ಘ ಬಳಕೆ ಆರೋಗ್ಯಕ್ಕೆ ಹಾನಿಕರ ಎಂಬ ದೃಷ್ಟಿಯಿಂದ ಇವುಗಳನ್ನು ನಿಷೇಧಿಸಿರುವುದು ಸರಿಯಾದರೂ ಸ್ಟೀಲ್ ಪರಿಕಗಳನ್ನು ಖರೀದಿಸಲು ಅಗತ್ಯ ಹಣ ನೀಡದಿರುವುದು ದುರಾದೃಷ್ಟಕರವಾಗಿದೆ. ನೀಡುವ ಅತ್ಯಲ್ಪ ಅನುದಾನದಲ್ಲಿ ಸಾಧ್ಯವಾದ ಪರಿಕರಗಳ ಖರೀದಿಸಲಾಗಿದೆ. ಉಳಿದ ಪರಿಕರಗಳಿಗೆ ಸಿಎಸ್‌ಆರ್, ದಾನಿಗಳ ಮೊರೆ ಹೋಗಲಾಗಿದೆ. ಭಾಗಶಃ ಶಾಲೆಗಳಲ್ಲಿ ಅಲ್ಯಮಿನಿಯಂ ಪಾತ್ರೆಗಳ ಬಳಕೆ ಅನಿವಾರ್ಯವಾಗಿದೆ.

ಹೆಸರೇಳಲಿಚ್ಛಿಸದ ಅಧಿಕಾರಿ ಬೆಂ.ಗ್ರಾಮಾಂತರ