ಜಿಲ್ಲೆ

ಕುಸಿಯುವ ಹಂತದಲ್ಲಿ ಕೆಂಕೆರೆ ಗೊಲ್ಲರಹಟ್ಟಿ ಸರ್ಕಾರಿ ಶಾಲೆ ;ಸ್ವಲ್ಪ ಮಳೆ ಬಂದರೂ ಸೋರುವ ಛಾವಣಿ

Tumakuru

ಹುಳಿಯಾರು ; ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ಕೆಂಕೆರೆ ಗೊಲ್ಲರಹಟ್ಟಿ ಸರ್ಕಾರಿ ಶಾಲೆ ಶಿಥಿಲಗೊಂಡಿದ್ದು, ಮಕ್ಕಳು ಆತಂಕದಲ್ಲಿಯೇ ಪಾಠ ಕೇಳುವಂತಾಗಿದೆ.

ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 32 ವಿದ್ಯಾರ್ಥಿಗಳಿದ್ದು, ಗೊಲ್ಲಹಟ್ಟಿ ಸೇರಿ ಅಕ್ಕಪಕ್ಕದ ತೋಟದ ಮನೆಗಳ ಮಕ್ಕಳೂ ಇಲ್ಲಿಗೆ ಬರುತ್ತಾರೆ. ಇರುವ ಎರಡು ಕೊಠಡಿಗಳೂ ಶಿಥಿಲಾವಸ್ಥೆಗೆ ತಲುಪಿವೆ. ಗ್ರಂಥಾಲಯ ಕಟ್ಟಡದಲ್ಲಿ ಶಾಲೆ ನಡೆಸುತ್ತಿದ್ದರಾದರೂ ಅದೂ ಶಿಥಿಲಗೊಂಡಿದೆ. ಅಷ್ಟೇ ಅಲ್ಲ ಬಿಸಿಯೂಟದ ಕೋಣೆ ಸ್ಥಿತಿಯೂ ಭಿನ್ನವಾಗೇನಿಲ್ಲ. ಸಣ್ಣ ಮಳೆಯಾದರೂ ಸೋರುತ್ತವೆ. ಛಾವಣಿ ಪದರ ಉದುರಿ ಬೀಳುತ್ತಿದೆ. ಕೊಠಡಿಗಳ ಕಿಟಕಿಗಳು ಮುರಿದು ಹೋಗಿವೆ. ಹೆಂಚುಗಳು ಹೊಡೆದಿವೆ. ಗೋಡೆಗಳು ಬಿರುಕು ಬಿಟ್ಟಿವೆ. ವಿದ್ಯಾರ್ಥಿಗಳು, ಅಡುಗೆಯವರು, ಶಿಕ್ಷಕರು ಕಟ್ಟಡ ಕುಸಿಯುವ ಭೀತಿ ಎದುರಿಸುತ್ತಿದ್ದಾರೆ. ಶೌಚಗೃಹರ ಸ್ಥಿತಿಯೂ ಇದೇ ಆಗಿದೆ.

ಗೋಡೆಗಳ ಮತ್ತು ಛಾವಣಿಯ ಸಿಮೆಂಟ್ ಪದರು ಶಾಲಾವಧಿಯಲ್ಲಿಯೇ ಅಡುಗೆ ಸಿಬ್ಬಂದಿ ಮೇಲೆ ಬಿದ್ದ ನಿದರ್ಶನಗಳೂ ಇದೆ. ಸ್ವಲ್ಪ ಮಳೆ ಬಂದರೆ ಸಾಕು ತರಗತಿಯಲ್ಲಿ ನೀರು ಸೋರುತ್ತದೆ. ಆಗ ಕೋಣೆಯ ಯಾವುದಾದರೊಂದು ಮೂಲೆಯಲ್ಲಿ ಮಕ್ಕಳು ಪುಸ್ತಕ, ಚೀಲಗಳನ್ನು ಹಿಡಿದು ನಿಲ್ಲಬೇಕಾಗಿದೆ. ಸಮಸ್ಯೆ ಬಗೆಹರಿಸುವಂತೆ ಪ್ರತಿ ವರ್ಷ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶಿಕ್ಷಣ ಸಚಿವರ ಜಿಲ್ಲೆಯಲ್ಲೇ ಸರ್ಕಾರಿ ಶಾಲೆ ದುಸ್ಥಿತಿ ತಲುಪಿರುವುದು ವಿಪರ್ಯಾಸ.

ಶಿಥಿಲಗೊಂಡ ಶಾಲೆಯ ಕಟ್ಟಡ, ಜೋರು ಮಳೆ ಬಂದಾಗ ನೀರು ಜಿನುಗುತ್ತದೆ. ಮೇಲ್ಛಾವಣಿಯಿಂದ ಉದುರಿ ಸಿಮೆಂಟ್ ಬೀಳುತ್ತದೆ. ಜೀವ ಭಯದಿಂದ ಅಡುಗೆ ಮಾಡುತ್ತಿದ್ದೇವೆ. ಆತಂಕದಲ್ಲಿ ನಮ್ಮ ಮಕ್ಕಳನ್ನು ಶಾಲೆಗೆ ಪಾಠ ಕೇಳಲು ಕಳುಹಿಸುತ್ತಿದ್ದೇವೆ. ಚನ್ನಮ್ಮ, ಅಡುಗೆ ಸಿಬ್ಬಂದಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಎಂದು ಸರ್ಕಾರ ಬೊಬ್ಬೆ ಹಾಕುತ್ತದೆ. ಆದರೆ ಶಾಲೆಗೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸಿಲ್ಲ. ಖಾಸಗಿ ಶಾಲೆಗೆ ಕಳುಹಿಸುವ ಸಾಮರ್ಥ್ಯವಿದ್ದರೂ ಸರ್ಕಾರಿ ಶಾಲೆಯ ಅಭಿಮಾನದಿಂದ ನನ್ನ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿದ್ದೇನೆ. ಆದರೆ ಇಲ್ಲಿನ ಪರಿಸ್ಥಿತಿ ನೋಡಿದರೆ ಯಾಕಾದ್ರೂ ಕಳುಹಿಸುತ್ತಿದ್ದೇನೋ ಎನ್ನುವಂತ್ತಾಗುತ್ತಿದೆ. ಎಂ.ಜಿ.ದೇವರಾಜು, ಎಸ್‌ಡಿಎಂಸಿ ಅಧ್ಯಕ್ಷ ಶಿಥಿಲ ಶಾಲೆಗಳ ಪಟ್ಟಿ ಹಾಗೂ ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟುವ ಕಟ್ಟಡಗಳ ಪಟ್ಟಿಯನ್ನು ಸರ್ಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಕಳುಹಿಸಲಾಗಿದೆ. ಕೆಂಕೆರೆ ಗೊಲ್ಲರಹಟ್ಟಿ ಶಾಲೆಯೂ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣದ ಪಟ್ಟಿಯಲ್ಲಿದೆ. ಆದರೆ ಇದೂವರೆವಿಗೂ ಅನುದಾನ ಬಂದಿಲ್ಲ. ಈಗ ಪುನಃ ಮಳೆಯ ಅನಾಹುತದ ಪಟ್ಟಿಯಲ್ಲೂ ಈ ಶಾಲೆ ಸೇರಿಸಲಾಗಿದೆ. ಅನುದಾನ ಬಂದ ತಕ್ಷಣ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತೇವೆ. ಸಂಗಮೇಶ್, ಪ್ರಭಾರ ಬಿಇಒ ಚಿಕ್ಕನಾಯಕನಹಳ್ಳಿ