ಹಿರೀಸಾವೆ ಪಟ್ಟಣದಲ್ಲಿ ಭಾನುವಾರ ರಾತ್ರಿ ಶಾಸಕ ಸಿ.ಎನ್.ಬಾಲಕೃಷ್ಣ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದರು. ಬೋರಣ್ಣ, ಮಹೇಶ್, ವೆಂಕಟೇಶ್, ರಾಮಕೃಷ್ಣ ಇದ್ದರು. 
ಜಿಲ್ಲೆ

ಪ್ರಜ್ವಲ್ ಪರ ಶಾಸಕ ಸಿ.ಎನ್.ಬಾಲಕೃಷ್ಣ ಮತಯಾಚನೆ

ವಸಂತಕುಮಾರ್ ಬಿ

ಹಿರೀಸಾವೆ: ಪಟ್ಟಣದಲ್ಲಿ ಭಾನುವಾರ ರಾತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಶಾಸಕ ಸಿ.ಎನ್.ಬಾಲಕೃಷ್ಣ ಪ್ರಚಾರ ನಡೆಸಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮತ್ತು ಅದರ ಅಭ್ಯರ್ಥಿಯ ಕೊಡುಗೆ ಏನು ಎಂಬುದನ್ನು ಜಿಲ್ಲೆಯ ಜನತೆಗೆ ತಿಳಿಸಬೇಕು. ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆ ಇದ್ದರೂ ಉಸ್ತುವಾರಿ ಸಚಿವರು ತುಮಕೂರು ಜಿಲ್ಲೆಗೆ ಪೊಲೀಸ್ ಸರ್ಪಗಾವಲಿನಲ್ಲಿ ನೀರನ್ನು ತೆಗೆದು ಕೊಂಡುಹೋದರು ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಇದುವರೆಗೆ ಶಾಸಕರಿಗೆ ಯಾವುದೇ ಅನುದಾನ ನೀಡಿಲ್ಲ. ಆದರೂ ಆ ಪಕ್ಷದ ನಾಯಕರು ಜನರ ಬಳಿ ಮತ ಕೇಳುತ್ತಿದ್ದಾರೆ. ಕೇಂದ್ರ ಸರ್ಕಾರದ ಹಲವು ಯೋಜನೆಗಳು ಗ್ರಾಮೀಣ ಜನರಿಗೆ ಅನುಕೂಲವಾಗಿದೆ. ಮೆಡಿಕಲ್ ಕಾಲೇಜು, ಪಶುವೈದ್ಯಕೀಯ ಕಾಲೇಜು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಹಲವು ಕೇಂದ್ರ ಸರ್ಕಾರದ ಯೋಜನೆಗಳನ್ನು ಜಿಲ್ಲೆಗೆ ತರಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಲು ಬಿಜೆಪಿ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ದೇವೇಗೌಡ ಮತ್ತು ರೇವಣ್ಣ, ಕುಮಾರಸ್ವಾಮಿ ವರಿಗೆ ಜಿಲ್ಲೆಯ ಜನರು ಹೆಚ್ಚಿನ ಬೆಂಬಲ ನೀಡಬೇಕು ಎಂದರು. ಬಿಜೆಪಿ ಮುಖಂಡರಾದ ಆಣತಿ ಆನಂದ್, ಶ್ರೀಕಂಠಪ್ಪ, ಜೆಡಿಎಸ್ ಮುಖಂಡರಾದ ರಾಮಕೃಷ್ಣ, ರವಿಕುಮಾರ್ ಮಾತನಾಡಿದರು.

ಹಿರೀಸಾವೆ ಒಂಟಿಕೊಪ್ಪಲು, ಉಯ್ಯಲೆ ಕಂಬದ ಆವರಣ, ಶ್ರೀಕಂಠಯ್ಯ ವೃತ್ತ, ಶ್ರವಣಬೆಳಗೊಳ ರಸ್ತೆಯಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಣ್ಣ, ಪಾನಿಪುರಿ ವೆಂಕಟೇಶ್, ಎಚ್.ಜಿ. ಮಂಜುನಾಥ್, ಮಹೇಶ್, ರೋಡ್ ಮಂಜುನಾಥ್, ದಿನೇಶ್, ಬೋರೇಗೌಡ, ಬಸವರಾಜು, ಜಯಂತ್, ಮಂಜಪ್ಪ, ಸೋಮಶೇಖರ್, ಬೀಡಾ ಮಂಜಣ್ಣ ಮತ್ತಿತರರಿದ್ದರು.