ಪ್ರಮುಖ ಮುಖ್ಯಾಂಶಗಳು
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಯುವಜನತೆ, ಶಿಕ್ಷಣ, ಮೂಲಸೌಕರ್ಯ ಮತ್ತು ಸಾಮಾಜಿಕ ಭದ್ರತೆಗೆ ನೀಡಿರುವ ಕೊಡುಗೆಗಳು ಹಾಗೂ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ನೀಡಿರುವ ಆದ್ಯತೆಗಳು ಹಾಗೂ ಆರ್ಥಿಕ ಬೆಳವಣಿಗೆಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸಂಸದ ಹಾಗೂ ಕೇಂದ್ರ ಗೃಹ ಸಚಿವಾಲಯದ ಸ್ಥಾಯೀ ಸಮಿತಿ ಅಧ್ಯಕ್ಷ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಅವರು ಬಣ್ಣಿಸಿದ್ದಾರೆ.
ಅವರು ಮಂಗಳೂರಿನ ಪಾಲೇಮಾರ್ ಗಾರ್ಡನ್‌ನಲ್ಲಿ ಶನಿವಾರ ನಡೆದ ವಿಕಸಿತ ಭಾರತ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದೇಶದ 1.60 ಕೋಟಿ ಯುವ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ 'ಸ್ಕಿಲ್ ಟ್ರೈನಿಂಗ್' (ಕೌಶಲ್ಯ ತರಬೇತಿ) ನೀಡಲಾಗಿದೆ. ದೇಶದಲ್ಲಿದ್ದ ಒಟ್ಟು ಎಂಬಿಬಿಎಸ್ ಸೀಟುಗಳ ಸಂಖ್ಯೆ 51,348 ರಿಂದ 1,28,973ಕ್ಕೆ ಏರಿಕೆಯಾಗಿದೆ. ಎಂಡಿ ಸೀಟುಗಳು 31,185 ರಿಂದ 85,822 ಕ್ಕೆ ಹೆಚ್ಚಳವಾಗಿವೆ. ದೇಶಾದ್ಯಂತ ಇದ್ದ ವೈದ್ಯಕೀಯ ಕಾಲೇಜುಗಳ संख्या 387ರಿಂದ 790 ಕ್ಕೆ ವಿಸ್ತರಿಸಲ್ಪಟ್ಟಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು 6ರಿಂದ 23 ಆಗಿವೆ. ತಂತ್ರಜ್ಞಾನ ಸಂಸ್ಥೆಗಳು 16ರಿಂದ 23ಕ್ಕೆ ಏರಿಕೆಯಾಗಿದೆ. ದೇಶದ ಒಟ್ಟು ಯೂನಿವರ್ಸಿಟಿಗಳ ಸಂಖ್ಯೆ 760ರಿಂದ 1,338ಕ್ಕೆ ತಲುಪಿದೆ ಎಂದರು.
ಕರ್ನಾಟಕದ ಅಭಿವೃದ್ಧಿಗೂ ವಿಶೇಷ ಕೊಡುಗೆ ರಾಜ್ಯದ ಧಾರವಾಡ, ಯಾದಗಿರಿ, ಚಿತ್ರದುರ್ಗ ಮತ್ತು ರಾಯಚೂರಿನಲ್ಲಿ ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ಹಾಗೂ ಬಳ್ಳಾರಿಯಲ್ಲಿ ಹೊಸ ನವೋದಯ ವಿದ್ಯಾಲಯವನ್ನು ತೆರೆಯಲಾಗಿದೆ. 2004 ರಿಂದ 2014 ರ ನಡುವೆ ಕರ್ನಾಟಕಕ್ಕೆ ದೊರೆತ ತೆರಿಗೆಯ ಪಾಲು ಕೇವಲ ರೂ. 81,794 ಕೋಟಿ ಹಾಗೂ ರಾಜ್ಯ ಸರ್ಕಾರ ಮತ್ತು ರಸ್ತೆ ಅಭಿವೃದ್ಧಿಗೆ ಸಿಕ್ಕ ಅನುದಾನ ಕೇವಲ ರೂ. 66,779 ಕೋಟಿ ಮಾತ್ರ ಆಗಿತ್ತು. 2014ರ ನಂತರದ ಮೋದಿ ಸರ್ಕಾರದ ಅವಧಿಯಲ್ಲಿ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಮೋದಿ ಸರ್ಕಾರವು ರಾಜ್ಯ ಸರ್ಕಾರಕ್ಕೆ 4,01,717 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿದೆ. ಇದರೊಂದಿಗೆ ರಸ್ತೆ ಅಭಿವೃದ್ಧಿಗಾಗಿ ರೂ. 2,71,913 ಕೋಟಿ ಹಾಗೂ ಯೋಜನೆಗಳ ಬಂಡವಾಳ ಹೂಡಿಕೆಗಾಗಿ ವಿಶೇಷವಾಗಿ 1,80,728 ಕೋಟಿ ರೂಪಾಯಿಗಳನ್ನು ನೀಡಲಾಗಿದೆ.
ಬೆಂಗಳೂರು-ಚೆನ್ನೈ, ಬೆಂಗಳೂರು ರಿಂಗ್ ರಸ್ತೆ ಮತ್ತು ಶೋಲಾಪುರ-ಕರ್ನೂಲ್-ಚೆನ್ನೈ ಹೆದ್ದಾರಿಗಳು ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 8,191 ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅತ್ಯಾಧುನಿಕ ಹೆದ್ದಾರಿಯಾಗಿ ಈಗಾಗಲೇ ಉದ್ಘಾಟನೆಗೊಂಡಿದೆ. ದಕ್ಷಿಣ ಭಾರತದ ಹೆಮ್ಮೆಯ ಮೊದಲ ಕೈಗಾರಿಕಾ ಕಾರಿಡಾರ್‌ಗೆ ತುಮಕೂರಿನಲ್ಲಿ ಪ್ರಧಾನಿಯವರಿಂದ ಅಡಿಪಾಯ ಹಾಕಲಾಗಿದೆ. ರಾಜ್ಯದಲ್ಲಿ 7 ಹೊಸ ಬಂದರುಗಳ ನಿರ್ಮಾಣಕ್ಕೆ ಕಾರ್ಯಯೋಜನೆ ತರಲಾಗುತ್ತಿದೆ. ಕಲಬುರಗಿಯಲ್ಲಿ ಹೊಸ ರಾಷ್ಟ್ರೀಯ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಯಾಗುತ್ತಿದೆ. ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣದಲ್ಲಿ ನಿರ್ಮಿಸಲಾಗಿದೆ. ಆಧುನಿಕ ಮತ್ತು ವೇಗದ ಪ್ರಯಾಣಕ್ಕಾಗಿ ತಡೆರಹಿತ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಆರಂಭಿಸಲಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬೆಂಗಳೂರು ಮೆಟ್ರೋ ಲೈನ್ ಅನ್ನು ಉದ್ಘಾಟಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ, ರೂ. 15,610 ಕೋಟಿ ವೆಚ್ಚದ ಬೆಂಗಳೂರು ಮೆಟ್ರೋ ಲೈನ್ ಫೇಸ್- 3 ಇದಕ್ಕೆ ಅಡಿಗಲ್ಲು ಹಾಕಲಾಗಿದೆ ಎಂದವರು ತಿಳಿಸಿದರು.
ಜನ್-ಧನ್ ಹಾಗೂ ವಿಮೆಯಲ್ಲಿ ಕರ್ನಾಟಕದ ಲಕ್ಷಾಂತರ ಜನರಿಗೆ ನೇರ ಪ್ರಯೋಜನವಾಗಿದೆ. ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ಜನ್-ಧನ್ ಯೋಜನೆಯಲ್ಲಿ 21.2 ಮಿಲಿಯನ್ (2.12 ಕೋಟಿ) ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ 1.6 ಕೋಟಿ ಜನರಿಗೆ ವಿಮಾ ರಕ್ಷಣೆ ಸಿಕ್ಕಿದೆ. ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ 2.6 ಕೋಟಿ ಜನರಿಗೆ ಅಪಘಾತ ವಿಮೆಯ ಲಾಭ ದೊರೆತಿದೆ. ಅಟಲ್ ಪಿಂಚಣಿ ಯೋಜನೆಯಲ್ಲಿ ದೇಶಾದ್ಯಂತ 48.9 ಲಕ್ಷ ಜನರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಲಾಗಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಉದ್ಯಮಿಗಳಿಗಾಗಿ ದೇಶಾದ್ಯಂತ ಒಟ್ಟು ರೂ. 40 ಲಕ್ಷ ಕೋಟಿ ಸಾಲ ವಿತರಿಸಲಾಗಿದ್ದು, ಇದರಿಂದ 57 ಕೋಟಿ ಜನರು ಫಲಾನುಭವಿಗಳಾಗಿದ್ದಾರೆ ಎಂದವರು ವಿವರಿಸಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಶಾಸಕರುಗಳಾದ ವೇದವ್ಯಾಸ್ ಕಾಮತ್, ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರುಗಳಾದ ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಮುಖಂಡ ಕರುಣಾಮಯ ಕಾಸಲೆ ಮತ್ತಿತರರು ಉಪಸ್ಥಿತರಿದ್ದರು.
ಆರ್ಥಿಕತೆಯಲ್ಲಿ ಭಾರತದ ಗಣನೀಯ ಸಾಧನೆ
ಪ್ರಧಾನಿ ನರೇಂದ್ರ ಮೋದಿ ಅಧಿಕಾರಾವಧಿಯಲ್ಲಿ ರಷ್ಯಾ-ಉಕ್ರೇನ್ ಮತ್ತು ಅಮೆರಿಕ-ಇರಾನ್-ಇಸ್ರೇಲ್ ಸಂಘರ್ಷಗಳಿಂದ ಉಂಟಾದ ಇಂಧನ ಬಿಕ್ಕಟ್ಟು ಮತ್ತು ವಿಶ್ವ ಆರ್ಥಿಕ ಹಿಂಜರಿತ ಸೇರಿದಂತೆ ಜಾಗತಿಕ ಸವಾಲುಗಳ ನಡುವೆಯೂ, ಭಾರತ ವಿಶ್ವದ ಆರ್ಥಿಕತೆಯಲ್ಲಿ ಶೇ.7.7ರಷ್ಟು ಸಾಧನೆ ಮಾಡಿದೆ. 2031ರ ವೇಳೆಗೆ ಭಾರತ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸಂಸದ ಹಾಗೂ ಕೇಂದ್ರ ಗೃಹ ಸಚಿವಾಲಯದ ಸ್ಥಾಯೀ ಸಮಿತಿ ಅಧ್ಯಕ್ಷ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013-14ರಲ್ಲಿ ಭಾರತ ವಿಶ್ವದ 5 ದುರ್ಬಲ ದೇಶಗಳಲ್ಲಿ ಒಂದಾಗಿದ್ದು, ಕೇವಲ 1.9 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿತ್ತು. ಅದು ಈಗ 4.1 ಟ್ರಿಲಿಯನ್ ಡಾಲರ್‌ಗೆ ಏರಿಕೆ ಕಂಡಿದೆ. ಭಾರತದ ಶೇ.7.7 ಬೆಳವಣಿಗೆ ದರಕ್ಕೆ ಹೋಲಿಸಿದರೆ, ಅಮೆರಿಕ ಶೇ. 2.6, ಚೀನಾ ಶೇ. 4.4, ಜಪಾನ್ ಶೇ.0.7, ಈಕ್ವಟೋರಿಯಲ್ ಗಿನಿ ಶೇ. 0.72, ಜರ್ಮನಿ ಶೇ. 0.79 ಬೆಳವಣಿಗೆ ಕಾಣುತ್ತಿವೆ ಎಂದರು.
ಕಳೆದ 12 ವರ್ಷಗಳಲ್ಲಿ 25 ಕೋಟಿ ಜನ ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ದೇಶದಲ್ಲಿ ಬಡವರಿಗೆ 4 ಕೋಟಿ ಮನೆಗಳು, 12 ಕೋಟಿ ಶೌಚಾಲಯ, 80 ಕೋಟಿ ಜನರಿಗೆ ರೇಷನ್, ಎಲ್ಲಾ ಹಳ್ಳಿಗಳು ಮತ್ತು ಮನೆಗಳಿಗೆ ವಿದ್ಯುತ್ ಸಂಪರ್ಕ, ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಆಯುಷ್ಮಾನ್ ಭಾರತ್ ಅಡಿಯಲ್ಲಿ 50 ಕೋಟಿ ಜನರು 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. 10.50 ಕೋಟಿ ಜನರು ಉಚಿತ ಅನಿಲ ಸಂಪರ್ಕ ಮತ್ತು ಸಿಲಿಂಡರ್‌ಗೆ 302 ರೂ. ಸಬ್ಸಿಡಿ ಪಡೆಯುತ್ತಿದ್ದಾರೆ ಎಂದರು.
ಗ್ಯಾರಂಟಿ ಯೋಜನೆ ನೀಡಿ ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದುರ್ಬಲಗೊಳಿಸಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಬಿಜೆಪಿ ಜನರ ಮುಂದಿಡುತ್ತಿದೆ. ಜನರಿಗೂ ಸರ್ಕಾರದ ವಿರುದ್ಧ ಅಸಮಾಧಾನವಿದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಈ ಜನಾಕ್ರೋಶ ಐತಿಹಾಸಿಕವಾಗಿ ರೂಪಾಂತರಗೊಳ್ಳಲಿದೆ. ಕಾದು ನೋಡಿ ಎಂದರು.
ರಾಜ್ಯಾಧ್ಯಕ್ಷರ ತೀರ್ಮಾನ ಅಂತಿಮವಾಗಲಿದೆ
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಧಾಮೋಹನ್‌ದಾಸ್, ಈ ಬಗ್ಗೆ ಅಂತಿಮ ತೀರ್ಮಾನವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕೈಗೊಳ್ಳಲಿದ್ದಾರೆ, ಅದು ಅವರ ವ್ಯಾಪ್ತಿಯ ವಿಷಯ. ಹಾಲಿ ಅಧ್ಯಕ್ಷರ ಕಾರ್ಯಚಟುವಟಿಕೆ, ವಿವಿಧ ಅಂಶಗಳನ್ನು ರಾಷ್ಟ್ರೀಯ ನಾಯಕತ್ವ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.
ಪಕ್ಷದಿಂದ ಯಾರನ್ನೂ ಹೊರಹಾಕುವುದು ಬಿಜೆಪಿಗೆ ಸಂತೋಷದ ವಿಷಯವಲ್ಲ. ಸಾಮಾನ್ಯವಾಗಿ ಆರು ವರ್ಷದ ಅವಧಿಗೆ ಉಚ್ಚಾಟನೆ ಮಾಡಲಾಗುತ್ತದೆ. ಬಳಿಕ ಅವರ ನಡವಳಿಕೆ, ಪರಿಸ್ಥಿತಿ, ಪಕ್ಷದ ನಿರ್ಧಾರಗಳ ಆಧಾರದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಪ್ರಭಾವ ವಿಸ್ತಾರವಾಗಿದೆ
ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡಿರುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ದಕ್ಷಿಣ ಭಾರತದ ವ್ಯಾಪ್ತಿಯ ಕೇರಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಪಕ್ಷದ ನೆಲೆ ಬಲಗೊಂಡಿದೆ. ಈ ಹಿಂದೆ ಅಸ್ತಿತ್ವ ಇಲ್ಲದ ಪ್ರದೇಶಗಳಲ್ಲೂ ಬಿಜೆಪಿ ಪ್ರಭಾವ ವಿಸ್ತರಿಸಿದೆ. ಕರ್ನಾಟಕದಲ್ಲೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.