ಹಳೇಬೀಡು: ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿಯನ್ನು ಪೂರ್ವನಿರ್ಧರಿತ ಯೋಜನೆಯ ಪ್ರಕಾರ ಮುಂದುವರಿಸುವಂತೆ ಸಾರ್ವಜನಿಕರು ಮಂಗಳವಾರ ಆಗ್ರಹಿಸಿದರು.
ಇಲ್ಲಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಅಭಿಪ್ರಾಯ ವ್ಯಕ್ತಪಡಿಸಿದರು.
ರಸ್ತೆಯ ಒಂದು ಬದಿ ಕಾಮಗಾರಿ ಯೋಜನೆಯಂತೆ ಶೇ.70ರಷ್ಟು ಮುಗಿದಿದೆ. ರಸ್ತೆ ವಿಸ್ತರಣೆಗೆ 12.5 ಮೀ. ಜಾಗ ವಶಪಡಿಸಿಕೊಳ್ಳಲಾಗಿದೆ. ಆದರೆ, ಮುಂದುವರಿದ ಕಾಮಗಾರಿಗೆ 9.5 ಮೀಟರ್ ಜಾಗ ವಶಪಡಿಸಿಕೊಳ್ಳಲಾಗುತ್ತದೆ ಎಂಬ ಚರ್ಚೆ ಜನಸಾಮಾನ್ಯರಲ್ಲಿ ಹಬ್ಬಿದ ಪರಿಣಾಮ ಸಭೆ ಏರ್ಪಡಿಸಲಾಗಿತ್ತು.
ತಾರತಮ್ಯ ಎಸಗದೆ ರಸ್ತೆಯ ಎರಡು ಬದಿಯಲ್ಲೂ ಸಮಾನವಾಗಿ ವಿಸ್ತರಣೆ ಮಾಡಬೇಕು ಎಂದು ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮದೇವತೆ ಕರಿಯಮ್ಮ ಮತ್ತು ಉಡುಸಲಮ್ಮ ದೇಗುಲ ಸಮಿತಿಯ ಪದಾಧಿಕಾರಿಗಳು ಮಾತನಾಡಿ, ರಸ್ತೆ ವಿಸ್ತರಣೆಗಾಗಿ ದೇಗುಲದ ಮುಂಭಾಗದಲ್ಲಿದ್ದ ಶತಮಾನಗಳ ಅರಳಿಮರವನ್ನು ಶಾಸ್ತ್ರೋಕ್ತವಾಗಿ ವಿಸರ್ಜಿಸಲಾಗಿದೆ. ಭಕ್ತರ ಅನುಕೂಲಕ್ಕೆ ನಿರ್ಮಿಸಿದ್ದ ಮೆಟ್ಟಿಲು ಹಾಗೂ ವಿಶ್ರಾಂತಿ ಆಸನಗಳನ್ನು ಕೂಡ ತೆರವುಗೊಳಿಸಲಾಗಿದೆ. ಈಗ ಕೆಲವು ವ್ಯಕ್ತಿಗಳ ಆಸ್ತಿ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಯೋಜನೆಯನ್ನು ಬದಲಾಯಿಸುವುದು ಸರಿಯಲ್ಲ. ರಸ್ತೆ ವಿಸ್ತರಣೆಯ ಅಳತೆಯಲ್ಲಿ ವ್ಯತ್ಯಾಸವಾದಲ್ಲಿ ಹೋರಾಟ ರೂಪಿಸುವುದಾಗಿ ಹೇಳಿದರು.
ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುವ ಯಾವುದೇ ನಿರ್ಧಾರವನ್ನು ಬೆಂಬಲಿಸದೆ ಸರ್ಕಾರ ಹೊರಡಿಸಿರುವ ನಿಯಮದಂತೆ ರಸ್ತೆ ವಿಸ್ತರಣೆ ಮಾಡಬೇಕು. ಸಾರ್ವಜನಿಕರು, ಕಟ್ಟಡ ಮಾಲೀಕರು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಪಟ್ಟಣದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ರಸ್ತೆಯ ಒಂದು ಬದಿ ಸರ್ಕಾರಿ ಜಾಗ ಇದ್ದು, 12.5 ಮೀ. ಅಳತೆಯಲ್ಲಿ ರಸ್ತೆ ವಿಸ್ತರಿಸಲಾಗಿದೆ. ಇನ್ನೊಂದು ಬದಿಯಲ್ಲಿ ಪಂಚಾಯಿತಿಯಿಂದ ನೀಡಿರುವ ಅಳತೆಯ ಆಧಾರದಲ್ಲಿಯೇ ನಾವು ಮನೆ, ವಾಣಿಜ್ಯ ಕಟ್ಟಡ ನಿರ್ಮಿಸಿಕೊಂಡಿದ್ದೇವೆ. ಇನ್ನೊಂದು ಬದಿಯಲ್ಲಿ 9.5 ಮೀ. ವಿಸ್ತರಿಸಬೇಕು ಎಂದು ಕೆಲ ಕಟ್ಟಡ ಮಾಲೀಕರು ಒತ್ತಾಯಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸತೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ, ಪಿಡಿಒ ವಿರೂಪಾಕ್ಷ ಇತರರು ಇದ್ದರು.