ಮೈಸೂರು: ಗಡ್ಡೆ- ಗೆಣಸುಗಳ ನಿರಂತರ ಬಳಕೆಯಿಂದ ಶರೀರಕ್ಕೆ ರೋಗನಿರೋಧಕ ಶಕ್ತಿ ಬರುತ್ತದೆ. ಆರೋಗ್ಯದ ಜೀವನಕ್ಕೆ ಗಡ್ಡೆ-ಗೆಣಸುಗಳ ಬಳಕೆ ಪೂರಕ, ಆದರೆ ನಮ್ಮ ಆಹಾರದಿಂದ ಇಂದು ಇವು ಕಾಣೆಯಾಗಿವೆ ಎಂದು ಆಹಾರ ತಜ್ಞೆ ಮತ್ತು ಬರಹಗಾರ್ತಿ ರತ್ನಾ ರಾಜಯ್ಯ ಬೇಸರ ವ್ಯಕ್ತಪಡಿಸಿದರು.
ಸಹಜ ಸಮೃದ್ಧ, ರೋಟರಿ ಕ್ಲಬ್ ಮೈಸೂರು ಪಶ್ಚಿಮ ಹಾಗೂ ಸಹಜ ಸೀಡ್ಸ್ ಆಶ್ರಯದಲ್ಲಿ ನಗರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಗಡ್ಡೆ-ಗೆಣಸು ಅಡುಗೆ ಸ್ಪರ್ಧೆಯಲ್ಲಿ ವಿಜೇತರಿಗೆ ಭಾನುವಾರ ಬಹುಮಾನ ವಿತರಿಸಿ ಮಾತನಾಡಿದರು.
ಬರಗಾಲದ ಬೆಳೆಗಳು ಎಂದು ಪರಿಗಣಿಸಿದ ಗಡ್ಡೆ -ಗೆಣಸುಗಳು ಪೋಷಕಾಂಶದ ಖಜಾನೆ. ಇಷ್ಟೊಂದು ಬಗೆಯ ಗಡ್ಡೆ-ಗೆಣಸು ಇರುವುದು ಹೆಚ್ಚಿನವರಿಗೆ ಗೊತ್ತೇ ಇಲ್ಲ. ಇಂಥ ಮೇಳಗಳನ್ನು ಆಯೋಜಿಸುವ ಮೂಲಕ, ಗ್ರಾಹಕರಲ್ಲಿ ಮರೆತು ಹೋದ ಆಹಾರಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಗಡ್ಡೆ- ಗೆಣಸು ಅಡುಗೆ ಸ್ಪರ್ಧೆ ತೀರ್ಪುಗಾರರಾಗಿದ್ದ ಸಾವಯವ ಕೃಷಿಕ ಹುಣಸೂರಿನ ಪಾಸಿಟಿವ್ ತಮ್ಮಯ್ಯ ಮಾತನಾಡಿ, ಗ್ರಾಹಕರು ಕಂದ ಮೂಲಗಳನ್ನು ತಮ್ಮ ದಿನನಿತ್ಯದ ಅಡುಗೆಗಳಲ್ಲಿ ಬಳಸಬೇಕಾದರೆ ಅವುಗಳ ಪಾಕ ವಿಧಾನ ಪರಿಚಯ ಮಾಡಬೇಕು. ಇವತ್ತಿನ ಅಡುಗೆ ಸ್ಪರ್ಧೆಯಲ್ಲಿ ವಿವಿಧ ಬಗೆಯ ಹೊಸ ತರಹದ ಅಡುಗೆಗಳನ್ನು ಪರಿಚಯಿಸಿದ್ದು ಸಂತಸದ ಸಂಗತಿ ಎಂದು ಪ್ರಶಂಸಿಸಿದರು.
ಗಡ್ಡೆ-ಗೆಣಸು ಅಡುಗೆ ಸ್ಪರ್ಧೆಯ ಮತ್ತೊಬ್ಬ ತೀರ್ಪುಗಾರರಾಗಿದ್ದ ಶ್ವೇತಾ ಮಾತನಾಡಿ, ಗಡ್ಡೆ ಗೆಣಸುಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ. ಸುಲಭನಾಗಿ ಬೆಳೆಯಬಹುದಾದ ಗಡ್ಡೆ-ಗೆಣಸುಗಳನ್ನು ದಿನ ನಿತ್ಯದ ಅಡುಗೆಗಳಲ್ಲಿ ಬಳಸುವ ಮೂಲಕ ಅಪೌಷ್ಟಿಕತೆಯನ್ನು ದೂರ ಮಾಡಬಹುದು ಎಂದು ಹೇಳಿದರು.
ತೀರ್ಪುಗಾರರಾದ ಸೈಯದಾ ಫಿರ್ದೋಜ್, ಸೋಫಿಯಾ, ಆಯೋಜಕರಾದ ಸೀಮಾ ಪ್ರಸಾದ್, ಕೇಶವಮೂರ್ತಿ ಇತರರು ಇದ್ದರು.
ವೈವಿಧ್ಯಮ ತಿಂಡಿ, ತಿನಿಸು
ಗಡ್ಡೆ-ಗೆಣಸು ಆಹಾರ ತಯಾರಿಕೆ ಸ್ಪರ್ಧೆಯಲ್ಲಿ ವೈವಿಧ್ಯಮಯ ತಿಂಡಿ, ತಿನಿಸುಗಳು ಗಮನ ಸೆಳೆದವು. ಸಿಹಿ ಗೆಣಸಿನ ಪಾಯಸ, ಸಿಹಿ ಉಂಡೆ, ಮೋದಕ ಮತ್ತು ಹೋಳಿಗೆ , ಪರ್ಪಲ್ ಯಾಮ್ ಮೋಮೋಸ್, ಪಾಯಸ, ಕೆಸುವಿನ ಹಲ್ವಾ, ಯೋಕೋನ್ ಬೀನ್ಸ್ ಬ್ರೆಡ್ ಸ್ಯಾಂಡ್‌ವಿಚ್, ಹುತ್ತರಿ ಗೆಣಸಿನ ಪರೋಟ, ಮರಗೆಣಸಿನ ಚಕ್ಕುಲಿ, ಸುವರ್ಣ ಗಡ್ಡೆಯ ನಿಪ್ಪಟ್ಟು, ಬೀಟ್ರೂಟ್ ಜಾಮ್, ಕ್ಯಾರೆಟ್ ಐಸ್‌ಕ್ರೀಂ ಮತ್ತು ಅರಿಶಿಣ ಚಟ್ನಿ ಸೇರಿದಂತೆ ಹಲವಾರು ಬಗೆಯ ವೈವಿಧ್ಯಮಯ ರುಚಿಕರ ತಿಂಡಿ ತಿನಿಸುಗಳನ್ನು ಸ್ಪರ್ಧೆಗೆ ತರಲಾಗಿತ್ತು.
ಬಹುಮಾನ ವಿಜೇತರು
ಪ್ರತಿಮಾ ಪಾಟೀಲ್(ಪ್ರಥಮ), ತಿರುಮಲೇಶ್ವರಿ ವಿಠ್ಠಲ್(ದ್ವಿತೀಯ) ಹಾಗೂ ಹರ್ಷಿತಾ ಎಂ.ಸಂತೋಷಿ(ತೃತೀಯ) ಬಹುಮಾನ ಪಡೆದರು. ಗೀತಾ ರಾವ್, ಬೀಬಿ ಜಾನ್, ಮತ್ತು ಗುಲಾಬಿ ಸಮಾಧಾನಕರ ಬಹುಮಾನ ಪಡೆದರು. ಪ್ರಥಮ ಬಹುಮಾನ ಪಡೆದ ಪ್ರತಿಮಾ ಪಾಟೀಲ್ ದೂರದ ಹೊಸಪೇಟೆಯಿಂದ ಗಡ್ಡೆ-ಗೆಣಸುಗಳ ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಬಂದಿದ್ದು ವಿಶೇಷವಾಗಿತ್ತು.