ಜಿಲ್ಲೆ

ಶ್ರೀವಿವೇಕ ಬಾಲೋದ್ಯಾನ ಪಬ್ಲಿಕ್ ಶಾಲೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಮೈಸೂರು: ಜಯನಗರದಲ್ಲಿರುವ ಶ್ರೀವಿವೇಕ ಬಾಲೋದ್ಯಾನ ಪಬ್ಲಿಕ್ ಶಾಲೆಯಲ್ಲಿ ಗಣರಾಜ್ಯೋತ್ಸವ ಹಾಗೂ ವಿವಿಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಿ.ಎನ್. ಪ್ರಭಾಕರ್ ಧ್ವಜಾರೋಹಣ ನೆರವೇರಿಸಿ, ಈ ದಿನ ನಮ್ಮ ಭಾರತದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನಗಳಲ್ಲಿ ಒಂದಾಗಿದೆ. ನಮ್ಮ ದೇಶದ ಪ್ರಜೆಗಳು ಮೂಲ ಹಕ್ಕುಗಳನ್ನು ಪಡೆದ ದಿನ ಇದಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲ ದೇಶಗಳ ಸಂವಿಧಾನ ಅಧ್ಯಯನ ಮಾಡಿ, ಭಾರತಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ್ದು, ಅದು ಅಂಗೀಕೃತಗೊಂಡ ದಿನ ಇದಾಗಿದೆ ಎಂದರು.

ಭಾರತದ ಪ್ರಜೆಗಳಾದ ನಾವು ಸಂವಿಧಾನಕ್ಕೆ, ಹಿರಿಯರಿಗೆ ಗೌರವವನ್ನು ಸೂಚಿಸುವುದರ ಮೂಲಕ ಉತ್ತಮ ಪ್ರಜೆಗಳಾಗಬೇಕು. ಸಂವಿಧಾನದ ಅಂಶಗಳನ್ನು ಪಾಲಿಸಬೇಕು ಎಂದು ಹೇಳಿದರು.

ಆಡಳಿತ ಮಂಡಳಿ ಕಾರ್ಯದರ್ಶಿ ಎಂ.ಎಸ್.ನಾಗೇಶ್ ಮಾತನಾಡಿ, ಭಾರತೀಯರಿಗೂ ಸಮಾನತೆ, ಭಾತೃತ್ವ, ಮೂಲ ಹಕ್ಕುಗಳನ್ನು ನೀಡಿದಂತಹ ಪವಿತ್ರ ದಿನವಾಗಿದೆ. ಇಂತಹ ಒಂದು ಕಾರ್ಯಕ್ರಮವನ್ನು ಇಷ್ಟು ಅಚ್ಚುಕಟ್ಟಾಗಿ ಆಯೋಜಿಸಿದ ನಮ್ಮೆಲ್ಲ ಶಿಕ್ಷಕ ಬಂಧುಗಳಿಗೂ, ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲ ಪಾಲಕರಿಗೂ ಅಭಿನಂದನೆಗಳು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ವಾಸುದೇವರಾವ್ ಆರೂರ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ಪ್ರತಿಭೆ ಇದ್ದೇ ಇರುತ್ತದೆ. ಕೆಲವರು ಮಾತ್ರ ಅವಕಾಶಗಳು ಸಿಕ್ಕಾಗ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ ಎಂದರು.

ಶಾಲೆಯ ಮುಖ್ಯ ಆಡಳಿತಾಧಿಕಾರಿ ಭವಾನಿ ನಾಗೇಶ್, ಪ್ರಾಂಶುಪಾಲ ಡಾ.ಎನ್.ಭಾರತೀಶಂಕರ್ ಇದ್ದರು. ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಮತ್ತು ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ಎಲ್ಲ ವಿದ್ಯಾರ್ಥಿಗಳಿಗೂ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಯಿತು.