ಧಾರವಾಡ: ಕ್ರೀಡೆಗಳಲ್ಲಿ ಭಾಗವಹಿಸುವಿಕೆ ವಿದ್ಯಾರ್ಥಿಗಳಲ್ಲಿ ನವ ಚೈತನ್ಯವನ್ನು ತುಂಬುತ್ತದೆ. ಆಟಗಳು ಕೇವಲ ಸೋಲು ಗೆಲುವಿಗಾಗಿ ಮಾಡಿದ್ದಲ್ಲ. ಆರೋಗ್ಯ ಬೆಳೆಸಿಕೊಳ್ಳಲು, ಮಾನಸಿಕ ನೆಮ್ಮದಿಗಾಗಿ ಶಕ್ತಿ- ಯುಕ್ತಿಗಾಗಿ ಆಡಬೇಕು. ಆರೋಗ್ಯದ ಜೊತೆಗೆ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಕ್ರೀಡೆ ಸಹಕಾರಿ ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
ನಗರದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ಪುರುಷ ಮತ್ತು ಮಹಿಳೆಯರ ಏಕವಲಯ ಶಟ್ಲ್ ಬ್ಯಾಟ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ದೈನಂದಿನ ಚಟುವಟಿಕೆಗಳಲ್ಲಿ ಒಳಾಂಗಣ ಅಥವಾ ಹೊರಾಂಗಣ ಯಾವುದಾರೊಂದು ಕ್ರೀಡೆಗೆ ಸ್ವಲ್ಪ ಸಮಯ ಮೀಸಲಿಡಬೇಕು. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಓದಿದ ವಿಷಯ ನೆನಪಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಡಾ. ಸೂರಜ್ ಜೈನ್, ಮಹಾವೀರ ಉಪಾಧ್ಯೆ, ಜಿನ್ನಪ್ಪ ಕುಂದಗೋಳ, ಶ್ರವಣಯೋಗಿ, ಪವನ ಗೊರವರ, ಬಾಹುಬಲಿ ಚೌಗಲಾ, ನಾಗರಾಜ ತೋಟಗೇರ, ಅರುಣ ಸವಣೂರ, ಇತರರಿದ್ದರು.