ಮೈಸೂರು: ಲಿಂಗಾಯತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಾದಾಗ ಎಲ್ಲಿ ಹೋಗಿತ್ತು ನಿಮ್ಮ ಅನುಕಂಪ ಎಂದು ಪ್ರಶ್ನಿಸಿದರು.
ಲಿಂಗಾಯತ ಸಮುದಾಯದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ನಿಮ್ಮ ಅನುಕಂಪ ಎಲ್ಲಿ ಹೋಗಿತ್ತು? ಸಂತೋಷ್‌ಗೆ ನ್ಯಾಯ ನೀಡಲು ಏತಕ್ಕೆ ನೀವು ಪ್ರಯತ್ನ ಮಾಡಲಿಲ್ಲ. ಇದೀಗ ನಾವು ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ. ಅದನ್ನು ತಪ್ಪಿಸಲು ಬಿಜೆಪಿಯವರು ಜಾತಿ, ಧರ್ಮವನ್ನು ಮುಂದೆ ತರುತ್ತಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬಹಿರಂಗವಾಗಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. ಅಲ್ಲದೆ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಆ ಸಂದರ್ಭ ಲಿಂಗಾಯತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಅಂತ ನಿಮಗೆ ಅನ್ನಿಸಲಿಲ್ಲವೇ ಎಂದು ಪ್ರಶ್ನಿಸಿದರು.
ಧಮ್ಮಿದ್ದರೆ, ತಾಕತ್ತು ಇದ್ದರೆ ಎಂದೆಲ್ಲ ಮುಖ್ಯಮಂತ್ರಿ ಮಾತನಾಡುತ್ತಿದ್ದಾರೆ. ಈ ರೀತಿ ಮಾತನಾಡುವ ಸಿಎಂಗೆ ಬಸವ ತತ್ವ ಎಂದರೆ ಎನು ಎಂಬುದು ಗೊತ್ತಾ? ಮೊದಲು ಅವರು ಬಸವಣ್ಣನವರ ವಚನಗಳನ್ನು ಓದಿಕೊಳ್ಳಲಿ. ಸರ್ಕಾರ ಬಸವಣ್ಣ ಅವರ ತತ್ವಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಡರ್ಟಿ ಪೊಲಿಟಿಕ್ಸ್ ಮಾಡುತ್ತಿರುವುದು ನಾವಲ್ಲ, ಬಿಜೆಪಿಯವರು. ಶಾಲೆಗೆ ವಿದ್ಯೆ ಕಲಿಯಲು ಹೋಗುವ ಮಕ್ಕಳಿಗೆ ಕೇಸರಿ ಶಾಲು ಹಾಕಿ ಕಳುಹಿಸುವ ಕೀಳುಮಟ್ಟಕ್ಕೆ ಬಿಜೆಪಿ ಇಳಿಯಿತು. ಹೀಗಾಗಿ ಬಿಜೆಪಿಯಿಂದ ನಾವು ನೈತಿಕತೆಯ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದರು.