ಜಿಲ್ಲೆ

8ರಂದು ಮೂಡುಬಿದಿರೆಯಲ್ಲಿ ಪ್ರಿಯದರ್ಶಿನಿ ಸೊಸೈಟಿ ನೂತನ ಶಾಖೆ ಉದ್ಘಾಟನೆ : ಅಧ್ಯಕ್ಷ ವಸಂತ್ ಬೆರ್ನಾರ್ಡ್ ಮಾಹಿತಿ : ಸ್ವ-ಸಹಾಯ ಗುಂಪಿಗೆ ಚಾಲನೆ

ಮೂಡುಬಿದಿರೆ: ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ 4ನೇ ಶಾಖೆ ಇಲ್ಲಿನ ಜ್ಯೋತಿನಗರ, ಮೆಸ್ಕಾಂ ಕಚೇರಿ ಎದುರುಗಡೆಯ ಮಹಾಲಸ ಕಟ್ಟಡದಲ್ಲಿ ಸೆ.8ರಂದು ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾರ್ಡ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 10.30ಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೂತನ ಶಾಖೆ ಉದ್ಘಾಟಿಸಲಿದ್ದಾರೆ. ಮೂಲ್ಕಿ ಅರಮನೆಯ ಎಂ.ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸಮಾರಂಭ ಉದ್ಘಾಟಿಸಲಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಕಂಪ್ಯೂಟರ್ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಭದ್ರತಾ ಕೊಠಡಿ ಉದ್ಘಾಟಿಸುವರು.

ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್.ರಮೇಶ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ದೇವಾಡಿಗ ಸುಧಾರಕ ಸಂಘ ಅಧ್ಯಕ್ಷ ಪುರಂದರ ದೇವಾಡಿಗ, ಶಿರ್ತಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಆಧ್ಯಕ್ಷ ಕುಮಾರ್ ಪೂಜಾರಿ, ಲಯನ್ಸ್ ಕ್ಲಬ್ ವಲಯ ಆಧ್ಯಕ್ಷ ಜೊಸ್ಸಿ ಮೆನೇಜಸ್, ಪುರಸಭೆ ಸದಸ್ಯರಾದ ಇಕ್ಬಾಲ್ ಕರೀಂ, ಕಟ್ಟಡ ಮಾಲೀಕ ದೇವದಾಸ್ ಭಟ್ ಭಾಗವಹಿಸಲಿದ್ದಾರೆ. ಹಳೆಯಂಗಡಿಯಲ್ಲಿ ಪ್ರಧಾನ ಶಾಖೆ ಹೊಂದಿದ್ದು, ಪಡುಬಿದ್ರಿ ಮತ್ತು ಕಿನ್ನಿಗೋಳಿಯಲ್ಲಿ ಶಾಖೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಶಾಖಾ ಪ್ರಬಂಧಕ ಅಭಿಷ್ಠಾ ಜೈನ್, ಗಣೇಶ್ ಕುಮಾರ್, ಗೌತಮ್ ಜೈನ್, ತನುಜಾ ಶೆಟ್ಟಿ, ಲೋಲಾಕ್ಷಿ ಸುದ್ದಿಗೋಷ್ಠಿಯಲ್ಲಿದ್ದರು.

351.69 ಕೋಟಿ ರೂ. ವಹಿವಾಟು ಸಾಧನೆ

ಸೊಸೈಟಿಯು 2021ರಲ್ಲಿ ಪ್ರಾರಂಭಗೊಂಡು ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಹಕಾರಿ ಸಂಘವಾಗಿದೆ. ಪಡುಬಿದ್ರಿ ಮತ್ತು ಕಿನ್ನಿಗೋಳಿಯಲ್ಲಿ ಶಾಖೆ ಹೊಂದಿದ್ದು ಪ್ರಸ್ತುತ 32 ಕೋಟಿ ರೂ. ನಿರಖು ಠೇವಣಿ ಹೊಂದಿದೆ. 204-25ನೇ ಸಾಲಿನಲ್ಲಿ 351.69 ಕೋಟಿ ರೂ. ವಹಿವಾಟು ನಡೆಸಿ ಉತ್ತಮ ವ್ಯವಹಾರ ಮಾಡಿ 41.88 ಲಕ್ಷ ರೂ. ಲಾಭ ಗಳಿಸಿದೆ. ಶೇ.98.5 ಸಾಲ ವಸೂಲಾತಿ ನಡೆಸಿ ಲೆಕ್ಕಪರಿಶೋಧನಾ ವರದಿ ಕೂಡಾ ಎ ಶ್ರೇಣಿಯಲ್ಲಿದ್ದು ಹೆಮ್ಮೆ ಪಡುವಂತಾಗಿದೆ. ಸೊಸೈಟಿಯ 3 ಶಾಖೆಗಳಲ್ಲೂ ಇ ಮುದ್ರಾಂಕ ವ್ಯವಸ್ಥೆ, ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ, ಹವಾನಿಯಂತ್ರಿತ ಬ್ಯಾಂಕಿಂಗ್ ವಿಭಾಗ ಹೊಂದಿದೆ. ಒಟ್ಟು 3843 ಸದಸ್ಯರನ್ನು ಹೊಂದಿದ್ದು ಸಂಘದಲ್ಲಿ 21 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 17 ನಿರ್ದೇಶಕರ ತಂಡವಿದ್ದು ಇವರೆಲ್ಲರ ಶ್ರಮದಿಂದಲೇ 2023-24 ಮತ್ತು 2024-25ನೇ ಸಾಲಿನಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ವಿಶಿಷ್ಟ ಸಾಧನ ಪ್ರಶಸ್ತಿ ದೊರಕಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಅಮೃತ ನಗದು ಪತ್ರ ಠೇವಣಿ ಬಿಡುಗಡೆ

ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಅಮೃತ ನಗದು ಪತ್ರ ಠೇವಣಿ ಹಾಗೂ ಮೂಡುಬಿದಿರೆ ಚೌಟರ ಅರಮನೆ ಕುಲದೀಪ ಎಂ. ನಿರಖು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಮೂಡುಬಿದಿರೆ ವಲಯ ಚರ್ಚ್‌ನ ಪ್ರಧಾನ ಧರ್ಮಗುರು ಓನಿಲ್ ಡಿಸೋಜ ಉಳಿತಾಯ ಖಾತೆಯ ಪಾಸ್ ಪುಸ್ತಕ ವಿತರಣೆ, ಸಿಎಸ್‌ಐ ಕ್ರಿಸ್ತ ಶಾಂತಿ ಚರ್ಚ್ ಮೂಡುಬಿದಿರೆ ಸಭಾಪಾಲಕ ಸಂತೋಷ್ ಕುಮಾರ್ ಮಾಸಿಕ ಠೇವಣಿ ಪತ್ರ, ಪಾವಂಜೆ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೂರ್ಯ ಕುಮಾರ್ ಪ್ರಥಮ ವಾಹನ ಸಾಲ ಪತ್ರ ವಿತರಣೆ, ಪಡೀಲಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ನಿತ್ಯನಿಧಿ ಪಾಸ್ ಬುಕ್ ವಿತರಣೆ ಮಾಡಲಿದ್ದಾರೆ. ವಕೀಲ ಶರತ್ ಡಿ.ಶೆಟ್ಟಿ ಪ್ರಿಯದರ್ಶಿನಿ ಸ್ವ-ಸಹಾಯ ಗುಂಪಿಗೆ ಚಾಲನೆ ನೀಡಲಿದ್ದಾರೆ ಎಂದರು.