ಮೈಸೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಮಿತ್ರ ಪಕ್ಷಗಳನ್ನು ಓಲೈಕೆ ಮಾಡಿ ಅಧಿಕಾರ ಉಳಿಸಿಕೊಳ್ಳಲು ಆದ್ಯತೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಟೀಕಿಸಿದರು.
ಬಜೆಟ್‌ನಲ್ಲಿ ರೈತರ ಆತ್ಮಹತ್ಯೆ ತಡೆಗಟ್ಟಲು ಯಾವುದೇ ಕಾರ್ಯಕ್ರಮಗಳು ಇಲ್ಲ. ಅಲ್ಲದೆ, 2021ರ ಡಿಸೆಂಬರ್‌ನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರೊಂದಿಗೆ ಮಾಡಿಕೊಂಡ ಒಡಂಬಡಿಕೆಯ ಪ್ರಸ್ತಾವವನ್ನೇ ಮಾಡದೆ ಮತ್ತೆ ಮೋದಿ ಸರ್ಕಾರ ಕೊಟ್ಟ ಮಾತಿಗೆ ತಪ್ಪಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕೃಷಿಕರೇ ಹೆಚ್ಚಿರುವ ದೇಶದಲ್ಲಿ ಕೃಷಿಗೆ ಮೊದಲ ಆದ್ಯತೆ ನೀಡಬೇಕು. ಆದರೆ ಕೃಷಿಯನ್ನು ಎರಡನೇ ದರ್ಜೆ ಕ್ಷೇತ್ರವಾಗಿ ಪರಿಗಣಿಸುವುದು ಎದ್ದು ಕಾಣುತ್ತದೆ. ನೀತಿ ಆಯೋಗ ಕೃಷಿ ಕ್ಷೇತ್ರದ ಸಂಕಷ್ಟಗಳ ಬಗ್ಗೆ ಆತಂಕವ್ಯಕ್ತಪಡಿಸಿದ್ದು, ಈ ಅಂಶಗಳ ಬಗ್ಗೆ ನರೇಂದ್ರ ಮೋದಿ ಸರ್ಕಾರ ತಲೆಕೆಡಿಸಿಕೊಳ್ಳದೆ ಇರುವುದು ರೈತವರ್ಗದಲ್ಲಿ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ ಎಂದು ಕಿಡಿಕಾರಿದರು.
ಕೆಆರ್‌ಎಸ್ ಸುತ್ತ 198 ಎಕರೆಯಲ್ಲಿ ವಿಶ್ವದರ್ಜೆ ಉದ್ಯಾನವನ ಸ್ಥಾಪಿಸುವುದಕ್ಕೆ ರೈತ ಸಂಘದ ವಿರೋಧವಿದೆ. ಈ ಹಿಂದೆ ಡಿಸ್ನಿಲ್ಯಾಂಡ್ ಸ್ಥಾಪಿಸುವುದಾಗಿ ಸರ್ಕಾರ ಹೇಳಿತ್ತು. ಸಾರ್ವಜನಿಕ ವಿರೋಧದ ಕಾರಣ ಕೈಬಿಡಲಾಗಿದ್ದ ಯೋಜನೆಯನ್ನು ಬೇರೆ ಹೆಸರಿನಲ್ಲಿ ಮತ್ತೆ ಚಾಲನೆಗೆ ತರಲು ಮುಂದಾಗಿರುವುದು ಸರಿಯಲ್ಲ ಎಂದರು.
ಕೆಆರ್‌ಎಸ್ ಸುತ್ತಮುತ್ತ ಇರುವ ಫಲವತ್ತಾದ ಕೃಷಿ ಭೂಮಿಯನ್ನು ಉದ್ಯಾನದ ಉದ್ದೇಶಕ್ಕೆ ಬಳಸುವುದನ್ನು ರೈತ ಸಂಘ ಎಂದಿಗೂ ಒಪ್ಪುವುದಿಲ್ಲ. ಈ ಯೋಜನೆಯ ಸಂಬಂಧ ಸಾರ್ವಜನಿಕ ಅಭಿಪ್ರಾಯ ಪಡೆಯಬೇಕು ಎಂದು ಸಂಘ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಲು ಬಂದಾಗ ಈ ಒತ್ತಾಯ ಪತ್ರವನ್ನು ಸಂಘ ಸಲ್ಲಿಸಲಿದೆ ಎಂದು ತಿಳಿಸಿದರು.
ಎಲ್ಲ ಪಕ್ಷ, ಸರ್ಕಾರಗಳು ರೈತ ಕುಲವನ್ನೇ ನಿರ್ಲಕ್ಷ್ಯ ಮಾಡಿ ನೀತಿಗಳನ್ನು ರೂಪಿಸುತ್ತಿವೆ. ರೈತ ಪರ ನೀತಿಗಾಗಿ ಚಳವಳಿಯನ್ನು ಮತ್ತಷ್ಟು ಬಲಗೊಳಿಸಿ ಪ್ರಭುತ್ವವನ್ನು ಮಣಿಸಲು ಮತ್ತು ಪರ್ಯಾಯ ಜನಾಂದೋಲನ ಕಟ್ಟಲು ರಾಜ್ಯದ ಮೂಲೆ ಮೂಲೆಗೂ ಚಳವಳಿಯನ್ನು ವಿಸ್ತರಿಸುವ ದೃಷ್ಟಿಯಿಂದ ಕುಟುಂಬಕ್ಕೊಬ್ಬ ಸದಸ್ಯ-ಊರಿಗೊಬ್ಬ ಕಾರ್ಯಕರ್ತ ಎಂಬ ಗುರಿಯೊಡನೆ ಪ್ರತಿ ಗ್ರಾಮದಲ್ಲೂ ಚಳವಳಿ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದರು.
ಈ ಸಂಬಂಧ ಜು.21ರಂದು ಬೆಳಗಾವಿಯ ಯರಗಟ್ಟಿಯಲ್ಲಿ ಆಯೋಜಿಸಿದ್ದ 45ನೇ ರೈತ ಹುತಾತ್ಮರ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಪ್ರತಿನಿಧಿಗಳ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ವ್ಯಾಪಕವಾಗಿ ಹೋರಾಟ ರೂಪಿಸಲು ಸಮಾವೇಶ ಕಾರ್ಯಾಗಾರ, ರಾಜಕೀಯ ಗಟ್ಟಿಗೊಳಿಸುವುದು ಸೇರಿದಂತೆ ಯೋಜನೆ ರೂಪಿಸಲು ತೀರ್ಮಾನಿಸಲಾಯಿತು ಎಂದರು.
ಮುಖಂಡರಾದ ರವಿಕಿರಣ್ ಪೂಣಚ್ಚ, ನೇತ್ರಾವತಿ, ಹೊಸೂರು ಕುಮಾರ್ ಮಂಡಕಳ್ಳಿ ಮಹೇಶ್, ಪಿ.ಮರಂಕಯ್ಯ ಇದ್ದರು.