ಚಿಕ್ಕಬಳ್ಳಾಪುರ: ಪ್ರಸಕ್ತ 2025-26 ನೇ ಶೈಕ್ಷಣಿಕ ಸಾಲಿನಲ್ಲಿ ಬೇಸಿಗೆ ರಜೆಯ ಒಂದು ವಾರದ ಮೊದಲೇ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ತರಗತಿಗಳ ನಿರ್ವಹಣೆಯನ್ನು ಪ್ರಾರಂಭಿಸಿವೆ.
ಹೌದು! ಪಠ್ಯಪುಸ್ತಕ ಹಾಗೂ ನೋಟ್ ಪುಸ್ತಕಗಳು, ಸಮವಸ್ತ್ರ ವಿತರಣೆ, ಶಾಲೆಗಳಲ್ಲಿ ಮೊದಲ ಹಂತದ ಬೋಧನೆ, ಪಠ್ಯೇತರ ಚಟುವಟಿಕೆಯು ಖಾಸಗಿ ಶಾಲೆಗಳಲ್ಲಿ ಬಿರುಸಿನಿಂದ ನಡೆಯುತ್ತಿವೆ. ಇನ್ನೂ ಮೇ.29 ರಿಂದ ಸರ್ಕಾರಿ ಶಾಲೆಗಳಲ್ಲಿ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಸ್ತುತ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ, ಸಿಆರ್ ಪಿ, ಬಿಆರ್ ಸಿ ಸೇರಿ ಇತರ ಅಧಿಕಾರಿಗಳಿಗೆ 2025-26 ನೇ ಸಾಲಿನಲ್ಲಿ ತರಗತಿಗಳ ಪ್ರಾರಂಭ, ದಾಖಲಾತಿ ಆಂದೋಲನ ಹಾಗೂ ಶಾಲೆಯಿಂದ ಹೊರ ಗುಳಿದ ಮಕ್ಕಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಸಿದ್ಧತೆ ಕೈಗೊಳ್ಳಲು ಸೂಚಿಸಲಾಗಿದೆ. ನಿಯಮಾನುಸಾರ ಕಾರ್ಯಾರಂಭಕ್ಕೆ ಇಲಾಖೆಯ ಆಯುಕ್ತರು ಕ್ರಿಯಾಯೋಜನೆ ಪಟ್ಟಿ ಕಳುಹಿಸಿದ್ದಾರೆ.
ಈಗ ಬಹುತೇಕ ಶಾಲಾ ಶಿಕ್ಷಕರು ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಜಾತಿಗಣತಿಯ ಮನೆ ಮನೆ ಭೇಟಿ, ಮಾಹಿತಿ ಸಂಗ್ರಹದಲ್ಲಿ ತೊಡಗಿದ್ದಾರೆ. ಇದರಲ್ಲಿ ಶೇ.90 ರಷ್ಟು ಸಾಧನೆಯಾಗಿದ್ದು ಈ ವಾರದಲ್ಲಿ ಪೂರ್ಣ ಗುರಿಯನ್ನು ಮುಟ್ಟಲಾಗುತ್ತದೆ. ಇದರ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಿದ್ದು ಮೊದಲ ದಿನದಿಂದಲೇ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಈಗಾಗಲೇ ಶಾಲಾ ವ್ಯಾಪ್ತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಪಾಠ ಪ್ರವಚನಗಳ ಪ್ರಾರಂಭೋತ್ಸವವು ಸಿಂಗರಿಸಿದ ಶಾಲೆಗಳು ಮತ್ತು ಸಿಹಿ ಊಟದ ಸಂಭ್ರಮದೊಂದಿಗೆ ನಡೆಯಲಿದೆ.