ಜಿಲ್ಲೆ

ಕನ್ನಡಿಗರಿಗೆ ಖಾಸಗಿ ಮೀಸಲು ಕಡ್ಡಾಯ: ಕಾನೂನಿನಲ್ಲೇ ಬದಲಾವಣೆಗೆ ಕಾರ್ವಿುಕ ಇಲಾಖೆಯಿಂದ ತೀರ್ಮಾನ

ರಮೇಶ್​ ಕುಮಾರ್​​ ಬಿ ಎಡಮೋಳೆ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಕನ್ನಡಿಯೊಳಗಿನ ಗಂಟಿನಂತಾಗಿದ್ದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಹಾಗೂ ಸರ್ಕಾರಿ ಹುದ್ದೆಗಳಲ್ಲಿ ಅಂಗವಿಕಲರಿಗೆ ಉದ್ಯೋಗ ಕಡ್ಡಾಯಗೊಳಿಸುವ ವಿಚಾರಕ್ಕೆ ರ್ತಾಕ ಅಂತ್ಯ ಕಾಣಿಸಲು ಸರ್ಕಾರ ಮುಂದಾಗಿದೆ.

ಪರಿಷ್ಕೃತ ಸರೋಜಿನಿ ಮಹಿಷಿ ವರದಿಗೆ ಜಾರಿಗೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಯಮಗಳನ್ನು ರೂಪಿಸುವ ಕಾರ್ಯದಲ್ಲಿ ತೊಡಗಿದ್ದರೆ, ಇತ್ತ ಕಾರ್ವಿುಕ ಇಲಾಖೆ ಮೂಲದಲ್ಲಿಯೇ ಬದಲಾವಣೆ ಮೂಲಕ ಕನ್ನಡಿಗರ ಕನಸು ನನಸು ಮಾಡುವ ಕಾರ್ಯ ಆರಂಭಿಸಿದೆ.

ರಾಜ್ಯದಲ್ಲಿ ಉದ್ಯಮ ಸ್ಥಾಪನೆ ಮಾಡುವ ಯಾವುದೇ ಉದ್ಯಮಿ ಜತೆ ಮಾಡಿಕೊಳ್ಳುವ ಮೂಲ ಒಪ್ಪಂದದಲ್ಲಿಯೇ ಕನ್ನಡಿಗರು ಹಾಗೂ ಅಂಗವಿಕಲರಿಗೆ ಕಡ್ಡಾಯವಾಗಿ ಉದ್ಯೋಗ ನೀಡುವುದಕ್ಕೆ ಸಂಬಂಧಿಸಿದಂತೆ ಸ್ಟಾ್ಯಂಡಿಂಗ್ ಆರ್ಡರ್​ನಲ್ಲಿಯೇ (ಜಾರಿಯಲ್ಲಿರುವ ಆದೇಶ) ಬದಲಾವಣೆ ತರಲು ಕಾರ್ವಿುಕ ಇಲಾಖೆ ತೀರ್ವನಿಸಿದೆ. ಸ್ಟಾ್ಯಂಡಿಂಗ್ ಆರ್ಡರ್​ನಲ್ಲಿ ಬದಲಾವಣೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಇಲಾಖೆಯ ಅಧಿಕಾರಿಗಳಿಗೆ ಕಾರ್ವಿುಕ ಸಚಿವ ಸಂತೋಷ್ ಲಾಡ್ ಸೂಚನೆ ನೀಡಿದ್ದಾರೆ. ಆದೇಶದಲ್ಲಿ ಬದಲಾವಣೆಯಾದರೆ ಉದ್ಯಮಗಳು ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿಯೇ ಸರ್ಕಾರದ ಆಶಯ ಈಡೇರಲಿದೆ. ವಿವಿಧ ಸಂದರ್ಭದಲ್ಲಿ ನಡೆದಿರುವ ಹೂಡಿಕೆ ಸಮಾವೇಶಗಳು ಅಲ್ಲದೇ ಸರ್ಕಾರ ಮಾಡಿಕೊಂಡಿರುವ ಒಪ್ಪಂದಗಳಿಂದ 15 ಲಕ್ಷ ಉದ್ಯೋಗಳು ಸೃಷ್ಟಿಯಾಗುವ ನಿರೀಕ್ಷೆಗಳಿವೆ. ಆದ್ದರಿಂದಲೇ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಗಳು ಲಭ್ಯವಾಗುವಂತೆ ನೋಡಿಕೊಳ್ಳಲು ಸರ್ಕಾರ ಪ್ರಯತ್ನ ಆರಂಭಿಸಿದೆ ಎಂದು ಮೂಲಗಳು ಹೇಳಿವೆ.

ಮಹಿಷಿ ವರದಿಯೇ ಪರಿಹಾರ: ಕನ್ನಡಿಗರಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಸರೋಜಿನಿ ಮಹಿಷಿ ವರದಿಯೇ ಪರಿಹಾರವಾಗಿದೆ. ಆದ್ದರಿಂದಲೇ ವರದಿಯನ್ನು ಇಂದಿನ ಆಶಯಗಳಿಗೆ ತಕ್ಕಂತೆ ಬದಲಾವಣೆ ಮಾಡಲಾಗಿದೆ. ಅದರಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಭಾಷಾ ಕಾಯ್ದೆ ಹಾಗೂ ಉದ್ಯೋಗ ನೀತಿ ರೂಪಿಸುವುದಕ್ಕೆ ಸಂಬಂಧಿಸಿದಂತೆ ಕೆಲ ಶಿಫಾರಸು ಮಾಡಿದೆ. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಕ್ಕೆ ಕ್ಯಾಂಪಸ್ ಸೆಲೆಕ್ಷನ್ ಮಾಡುವುದು ಕಡ್ಡಾಯ. ರಾಜ್ಯದ ಬ್ಯಾಂಕ್​ಗಳಲ್ಲಿ ಗುಮಾಸ್ತರ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಕನ್ನಡ ಭಾಷಾ ಜ್ಞಾನ ಕಡ್ಡಾಯ. ರಾಜ್ಯದಲ್ಲಿರುವ ಸರ್ಕಾರಿ ಉದ್ದಿಮೆಗಳಲ್ಲಿ ಹೊರ ರಾಜ್ಯದವರ ನೇಮಕಕ್ಕೆ ಸರ್ಕಾರದ ಅನುಮತಿ ಕಡ್ಡಾಯ. ಅಪ್ರೆಂಟಿಸ್​ಗಳ ಆಯ್ಕೆಯಲ್ಲಿ ಹೊರ ರಾಜ್ಯದವರ ನೇಮಕ ತಪ್ಪಿಸಲು ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ವ್ಯಾಸಂಗ ಕಡ್ಡಾಯ. ಗುತ್ತಿಗೆ ನೇಮಕದಲ್ಲೂ ಕನ್ನಡಿಗರ ನೇಮಕ. ಯಾವುದೇ ಉದ್ದಿಮೆಯಲ್ಲಿ 100 ಹುದ್ದೆಗೆ ನೇಮಕ ನಡೆದರೆ ಆಯ್ಕೆ ಸಮಿತಿಯಲ್ಲಿ ಕನ್ನಡದ ಪ್ರತಿನಿಧಿ ಇರಬೇಕು. ಕೇಂದ್ರ ಸರ್ಕಾರದ ಎಂಪ್ಲಾಯ್ಮೆಂಟ್ ನ್ಯೂಸ್ ಮಾದರಿಯಲ್ಲಿ ರಾಜ್ಯ ಸರ್ಕಾರದಿಂದಲೂ ವೆಬ್ ಪೋರ್ಟಲ್ ಆರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲಾಗಿದೆ. ಅದೇ ರೀತಿಯಲ್ಲಿ ಕೇಂದ್ರ ಸರ್ಕಾರಕ್ಕೂ ಕೆಲ ಸಲಹೆಗಳನ್ನು ಪರಿಷ್ಕೃತ ವರದಿ ನೀಡಿದೆ. ಸ್ಪಷ್ಟ ಉದ್ಯೋಗ ನೀತಿ ರೂಪಿಸುವುದು, ಬ್ಯಾಂಕ್ ಪರೀಕ್ಷೆಗಳು ಪ್ರಾದೇಶಿಕ ಭಾಷೆಯಲ್ಲಿ ನಡೆಯುವುದಂತೆ ನೋಡಿಕೊಳ್ಳುವುದು, ಸಿ ಮತ್ತು ಡಿ ಹುದ್ದೆಗಳು ಸ್ಥಳೀಯರಿಗೆ ಮೀಸಲು ಹಾಗೂ ಬೆಂಗಳೂರಿನಲ್ಲಿರುವ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್​ಎಸ್​ಸಿ) ಪ್ರಾದೇಶಿಕ ಕಚೇರಿಯಲ್ಲಿ ಕನ್ನಡ ಕಡ್ಡಾಯ ಮಾಡುವುದು ಜಾರಿ ಮಾಡಲು ಹೇಳಿದೆ.

ವಿರೋಧ ಸಾಧ್ಯತೆ

ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ನೀಡಲು ಜಾರಿಯಲ್ಲಿರುವ ಆದೇಶದಲ್ಲಿ ಬದಲಾವಣೆಯಾದರೆ ವಿರೋಧ ಬರುವುದು ಸಹಜ ಎಂಬುದನ್ನು ಸರ್ಕಾರ ಗುರುತಿಸಿದೆ. ಆ ರೀತಿಯ ವಿರೋಧ ಬಂದರೆ ಸಚಿವ ಸಂಪುಟದಲ್ಲಿಯೇ ಬದಲಾವಣೆ ಮಾಡುವ ನಿರ್ಧಾರ ಮಾಡಲು ತೀರ್ವನಿಸಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

* ಮೂಲ ಒಪ್ಪಂದದ ಸಂದರ್ಭದಲ್ಲಿಯೇ ಕನ್ನಡಿಗರು, ಅಂಗವಿಕಲರಿಗೆ ಮೀಸಲು ಕಡ್ಡಾಯ

* ಹಿಂದೆ ಇದ್ದ ‘ಆದ್ಯತೆ’ ತೆಗೆದು ಕಡ್ಡಾಯ ಪದ ಸೇರ್ಪಡೆ

* ಕನ್ನಡ ಸಂಸ್ಕೃತಿ ಇಲಾಖೆ ನಿಯಮ ರೂಪಿಸುವ ಮುನ್ನವೇ ಕಾರ್ವಿುಕ ಇಲಾಖೆಯಿಂದ ಕ್ರಮ

ಅಂಗವಿಕಲರಿಗೆ ಮೀಸಲು

ಸರ್ಕಾರಿ ಹುದ್ದೆಗಳಲ್ಲಿ ಅಂಗವಿಕಲರಿಗೆ ಶೇ.5 ಮೀಸಲಾತಿ ನೀಡಲಾಗುತ್ತದೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಈ ಮೀಸಲು ಜಾರಿಗೆ ಬಂದಿದೆ. ಆದರೆ, 2019ರ ಆದೇಶದಲ್ಲಿ ಶೇ.5 ಕ್ಕಿಂತ ಕಡಿಮೆ ಇಲ್ಲದಂತೆ ಎಂಬ ಪದ ಸೇರ್ಪಡೆಯಾಗಿದೆ. ಇದರಿಂದ ಅಂಗವಿಕಲರಿಗೆ ಮೀಸಲಾತಿ ಪೂರ್ಣಪ್ರಮಾಣದಲ್ಲಿ ಸಿಗುತ್ತಿಲ್ಲ. ಆದ್ದರಿಂದ ಶೇ.5 ರಷ್ಟು ಹುದ್ದೆಗಳನ್ನು ‘ಕಡ್ಡಾಯವಾಗಿ ಮೀಸಲು’ ಎಂದು ಬದಲಾವಣೆ ಮಾಡಲಾಗುತ್ತದೆ.

ಉದ್ಯೋಗ ಕಲ್ಪಿಸುವುದು ಹೇಗೆ?

ಡಾ.ಸರೋಜಿನಿ ಮಹಿಷಿ ವರದಿಯ ಪ್ರಕಾರ 50ಕ್ಕಿಂತ ಹೆಚ್ಚು ಕಾರ್ವಿುಕರಿರುವ ಉದ್ಯಮಗಳಲ್ಲಿ ಶೇ.65 ಎ ದರ್ಜೆಯ, ಶೇ.80 ಬಿ ದರ್ಜೆಯ ಹಾಗೂ ಶೇ.100 ರಷ್ಟು ಸಿ ಮತ್ತು ಡಿ ದರ್ಜೆಯ ಹುದ್ದೆಗಳು ಕನ್ನಡಿಗರಿಗೆ ಮೀಸಲಾಗಬೇಕು. ಆದರೆ, ಉದ್ಯಮಿಗಳು ಹಾಗೂ ಉದ್ಯಮ ಸಂಘಟನೆಗಳ ಲಾಬಿಯಿಂದಾಗಿ ವರದಿ ಜಾರಿಗೆ ಬಂದು 40 ವರ್ಷವಾದರೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ರಾಜ್ಯ ಸರ್ಕಾರ 2016ರಲ್ಲಿ ನಿರ್ಧಾರ ಮಾಡಿ 2019ರ ಡಿ.12 ರಂದು ಹೊರಡಿಸಿದ್ದ ಆದೇಶದಲ್ಲಿ ಆದ್ಯತೆಯ ಮೇರೆಗೆ ಎಂಬ ಪದ ಸೇರ್ಪಡೆಯಾಗಿದೆ. ಇದೀಗ ‘ಆದ್ಯತೆಯ ಮೇರೆಗೆ’ ಎಂಬ ಪದ ತೆಗೆದು ಕನ್ನಡಿಗರನ್ನು ‘ಕಡ್ಡಾಯವಾಗಿ’ ಎಂಬ ಪದ ಸೇರಿಸುವ ಮೂಲಕ ಮಹಿಷಿ ವರದಿ ಜಾರಿಗೆ ಮುಂದಾಗಿದೆ.

ಕನ್ನಡಿಗರು ಯಾರು?

ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ಎನ್ನುತ್ತಿದ್ದಂತೆ ಕನ್ನಡಿಗರೆಂದರೆ ಯಾರು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಅದನ್ನೂ ಸ್ಟಾ್ಯಂಡಿಂಗ್ ಆರ್ಡರ್​ನಲ್ಲಿ ಸ್ಪಷ್ಟವಾಗಿ ತಿಳಿಸುವಂತೆ ಸೂಚನೆ ನೀಡಲಾಗಿದೆ. ಕನ್ನಡ ಮಾತೃ ಭಾಷೆಯಾಗಿರಬೇಕು, 1 ರಿಂದ 10 ನೇ ತರಗತಿಯ ತನಕ 100 ಅಂಕಗಳಿಗೆ ಬರೆದು ಉತ್ತೀರ್ಣವಾಗಿರಬೇಕು ಅಥವಾ 1 ರಿಂದ 10ನೇ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿರಬೇಕು ಎಂಬ ಷರತ್ತು ವಿಧಿಸಲಾಗುತ್ತದೆ.