ಬೆಂಗಳೂರು: ಖಾಸಗಿ ಆಸ್ಪತ್ರೆಗಳು ತಮ್ಮ ಆಸ್ಪತ್ರೆಗಳಲ್ಲಿ ಬಡರೋಗಿಗಗಳಿಗೆ ಶೇ.10 ಹಾಸಿಗೆಗಳನ್ನು ಮೀಸಲಿಡುವಂತೆ ಸಂಸದ ಡಾ. ಸಿ.ಎನ್.ಮಂಜುನಾಥ್ ಕರೆ ನೀಡಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ‘ಏಷಿಯಾ ಟುಡೆ ಮೀಡಿಯಾ’ ಆಯೋಜಿಸಿದ್ದ ‘ಪ್ರೈಡ್ ಆಫ್ ನೇಷನ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾವು ಗಳಿಸಿದ್ದರಲ್ಲಿ ಸಮಾಜಕ್ಕೆ ಎಷ್ಟು ಹಿಂದಿರುಗಿಸುತ್ತೇವೆ ಎಂಬುದು ಮುಖ್ಯ. ಸಮಾಜ ಯಾವುದೇ ಕ್ಷೇತ್ರದಲ್ಲಿ ಕೊಡುಗೆ ನೀಡಿದವರನ್ನು ಎಂದಿಗೂ ಮರೆಯುವುದಿಲ್ಲ. ಓನರ್‌ಗಳು ಎಷ್ಟೇ ದೊಡ್ಡವರಾದರೂ ಅವರನ್ನು ಸ್ಮರಿಸುವುದಿಲ್ಲ. ಬದಲಿಗೆ ಡೋನರ್‌ಗಳನ್ನು ಈ ಸಮಾಜ ಸದಾ ಸ್ಮರಿಸುತ್ತದೆ. ಆದ್ದರಿಂದ ಅಂತಹ ಸಮಾಜದ ಸ್ಮರಣೆಗೆ ಖಾಸಗಿ ಆಸ್ಪತ್ರೆಗಳು ಮುಂದಾಗಬೇಕು. ದೇಶದಲ್ಲಿ 30:70ರ ಅನುಪಾತದಲ್ಲಿ ಸರ್ಕಾರ ಮತ್ತು ಖಾಸಗಿಯವರು ವೈದ್ಯಕೀಯ ಸೇವೆ ಒದಗಿಸುತ್ತಿದ್ದು, ಆ 70ರಲ್ಲಿ ಶೇ.10 ಬಡವರಿಗೆ ಚಿಕಿತ್ಸೆ ದೊರೆಯುವಂತಾದರೆ ಬಹಳ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಜಗತ್ತಿನಲ್ಲೇ ಭಾರತ ಅದ್ಭುತ ಜ್ಞಾನ ಮತ್ತು ಪ್ರತಿಭೆ ಹೊಂದಿರುವ ರಾಷ್ಟ್ರ. ಆದರೆ ಅದರ ಸದ್ಭಳಕೆಯಾಗುತ್ತಿಲ್ಲ. ಜನರ ಬದಲಾದ ಅಭಿರುಚಿ ಮತ್ತು ಮುನ್ನೆಚ್ಚರಿಕೆ ವಹಿಸದ ಪರಿಣಾಮ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತ ಮತ್ತಿತರ ಜೀವನಶೈಲಿ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ದೇಶದ ಮಾನವ ಸಂಪನ್ಮೂಲ ನಷ್ಟವಾಗುತ್ತಿದೆ. ಜಗತ್ತಿನ ಆರ್ಥಿಕತೆಯಲ್ಲಿ ಭಾರತ 11 ರಿಂದ 5ನೇ ಸ್ಥಾನಕ್ಕೆ ಬಂದಿದೆ. ಇನ್ನು ಕೆಲವೇ ವರ್ಷಗಳಲ್ಲಿ 3ನೇ ಸ್ಥಾನ ತಲುಪುವ ಗುರಿ ಹೊಂದಿದೆ. ಈ ಗುರಿ ತಲುಪಲು ದೇಶದ ಜನರ ಆರೋಗ್ಯ ಬಹಳ ಮುಖ್ಯ ಎಂದು ಡಾ. ಮಂಜುನಾಥ ವಿವರಿಸಿದರು.
ಸಮಾಂಭದಲ್ಲಿ ಪದ್ಮಶ್ರೀ ಡಾ.ಸಿ.ಆರ್.ಚಂದ್ರಶೇಖರ್, ಪದ್ಮಶ್ರೀ ಪ್ರೇಮ ಧನಂಜಯ್, ಹುಬ್ಬಳ್ಳಿ ಕ್ಯಾನ್ಸರ್ ಆಸ್ಪತ್ರೆಯ ಡಾ. ಬಿ.ಆರ್.ಪಾಟೀಲ್ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಕ್ಷೇತ್ರದ ಸಾಧಕರಿಗೆ ‘ಪ್ರೈಡ್ ಆಫ್ ನೇಷನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಾಲಿವುಡ್ ನಟ ಗುಲ್ಷಾನ್ ಗ್ರೋವರ್, ಏಷಿಯ ಟುಡೆ ಸಂಸ್ಥೆಯ ಮುಖ್ಯಸ್ಥ ಪ್ರದೀಪ್ ಚೌದರಿ, ನಿರ್ದೇಶಕಿ ಸೃಷ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಳೆದ 10 ವರ್ಷಗಳಿಂದ ಹಲವಾರು ತೆರೆಮರೆಯ ಸಾಧಕರಿಗೆ ಪದ್ಮ ಪ್ರಶಸ್ತಿ ದೊರೆಯುತ್ತಿದೆ. ಈ ಹಿಂದೆ ಪದ್ಮ ಪ್ರಶಸ್ತಿಗೆ ಶಿಾರಸ್ಸು ಮಾಡುವಂತೆ ಒತ್ತಡ ಬರುತ್ತಿತ್ತು. ಆದರೆ ಮೋದಿಯವರು ಪ್ರಧಾನಿಯಾದ ನಂತರ ಯಾವುದೇ ಒತ್ತಡಗಳಿಗೆ ಮಣಿಯದೆ ನೈಜ ಸಾಧಕರನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಅಂತಹವರಲ್ಲಿ ಡಾ.ಸಿ.ಆರ್.ಚಂದ್ರಶೇಖರ್, ಡಾ.ಪ್ರೇಮ ಧನಂಜಯ, ಡಾ.ಸಿ.ಎನ್.ಮಂಜುನಾಥ್ ಸೇರಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ ಹೇಳಿದ್ದಾರೆ.
ಯೋಗದಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಮೋದಿಯವರ ಪ್ರಯತ್ನದಿಂದ ಯೋಗಕ್ಕೆ ವಿಶ್ವ ಮಾನ್ಯತೆ ದೊರೆತಿದೆ. ನಾನು ರಾಜಕೀಯದ ಒತ್ತಡದಿಂದ ಮುಕ್ತನಾಗಿರುವುದಕ್ಕೆ ಯೋಗವೇ ಕಾರಣ ಎಂದು ಅವರು ತಿಳಿಸಿದರು.