ಜಿಲ್ಲೆ

ದೇವರಕಟ್ಟೆಯಲ್ಲಿ ಖಾಸಗಿ ಬಸ್‌ಗಳ ನಿಲುಗಡೆ : ಟ್ರಾಫಿಕ್ ಜಾಮ್ ಸಮಸ್ಯೆ ತಪ್ಪಿಸಲು ಕ್ರಮ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಬಂಟ್ವಾಳ ನಗರದ ಕೊಟ್ರಮಣಗಂಡಿ ಸಮೀಪದ ದೇವರಕಟ್ಟೆಯಲ್ಲಿ ಪುರಸಭೆಯಿಂದ ನಿರ್ಮಾಣಗೊಂಡ ಬಸ್ ತಂಗುದಾಣದಲ್ಲಿ ದಶಕದ ಬಳಿಕ ಸೋಮವಾರದಿಂದ ಖಾಸಗಿ ಬಸ್‌ಗಳ ನಿಲುಗಡೆ ಕಾರ್ಯಾರಂಭಗೊಂಡಿದೆ.

ಬೆಳಗ್ಗಿನಿಂದಲೇ ಬಿ.ಸಿ.ರೋಡಿನಿಂದ ಮೂಡುಬಿದಿರೆ, ವಾಮದಪದವು, ಸಿದ್ದಕಟ್ಟೆ ಮೊದಲಾದೆಡೆ ಸಂಚರಿಸುವ ಎಲ್ಲ ಖಾಸಗಿ ಬಸ್‌ಗಳು ನೇರವಾಗಿ ದೇವರಕಟ್ಟೆ ಬಸ್ ತಂಗುದಾಣ ಪ್ರವೇಶಿಸಿ ಪ್ರಯಾಣಿಕರನ್ನು ಇಳಿಸಿ ಹತ್ತಿಸುವ ಪ್ರಕ್ರಿಯೆ ನಡೆದಿದೆ.

ಕೊಟ್ರಮಣಗಂಡಿಯ ತರಕಾರಿ ಅಂಗಡಿ ಮುಂಭಾಗ ಸಂಚಾರಿ ಠಾಣೆಯ ಪೊಲೀಸ್ ಸಿಬ್ಬಂದಿ ಹಾಜರಿದ್ದು, ಬಸ್ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಬಸ್ ತಂಗುದಾಣಕ್ಕೆ ತೆರಳಲು ಸೂಚನೆ ನೀಡಿದರು. ಅಗಲ ಕಿರಿದಾದ ಬಂಟ್ವಾಳ ನಗರದ ಕೊಟ್ರಮಣಗಂಡಿ ರಸ್ತೆಯಲ್ಲಿರುವ ತರಕಾರಿ ಅಂಗಡಿಯೊಂದರ ಮುಂಭಾಗ ಖಾಸಗಿ ಬಸ್ ನಿಲುಗಡೆಯಾಗಿ ಪ್ರತಿನಿತ್ಯ ಉಂಟಾಗುವ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ತಪ್ಪಿಸುವ ನಿಟ್ಟಿನಲ್ಲಿ ದೇವರಕಟ್ಟೆ ಸಮೀಪ ಪುರಸಭೆ ವತಿಯಿಂದ ಬಸ್ ತಂಗುದಾಣ ನಿರ್ಮಿಸಿ ದಶಕಗಳು ಕಳೆದರೂ ಯಾವುದೇ ಬಸ್ ನಿಲುಗಡೆಯಾಗದೆ ನಿರುಪಯುಕ್ತವಾದಂತಿತ್ತು. ಬಸ್ ತಂಗುದಾಣದ ಪಕ್ಕ ಎಂಎಆರ್‌ಪಿಎಲ್ ಸಂಸ್ಥೆ ಸಿಎಸ್‌ಆರ್ ನಿಧಿಯಿಂದ ಶೌಚಗೃಹ ನಿರ್ಮಿಸಿದೆ.

ಸಾಮಾನ್ಯ ಸಭೆಯಲ್ಲಿ ನಡೆದಿತ್ತು ಚರ್ಚೆ!

ಕಳೆದ ತಿಂಗಳು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾದ ಬಳಿಕ ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ ತಕ್ಷಣ ಸಂಚಾರ ಪೊಲೀಸ್ ಅಧಿಕಾರಿಗಳ ಜತೆ ಸಮಾಲೋಚಿಸಿ ಬಸ್ ನಿಲುಗಡೆಯಾಗುವಂತೆ ಕ್ರಮ ಕೈಗೊಂಡಿರುವುದು ಸಾರ್ವಜನಿಕರು ಮತ್ತು ವಾಹನ ಚಾಲಕ ಸಮುದಾಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ. ಪುರಸಭಾಧ್ಯಕ್ಷ ಖುದ್ದು ಬಸ್ ತಂಗುದಾಣಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಬಸ್ ತಂಗುದಾಣದ ಸದುಪಯೋಗ ಪಡೆಯುವಂತೆ ಚಾಲಕ, ನಿರ್ವಾಹಕರು ಹಾಗೂ ಪ್ರಯಾಣಿಕರನ್ನು ಕೋರಿದರು.