ಬ್ಯಾಕೋಡು: ಸಿಗಂದೂರಿನಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಭಾನುವಾರ ಅಂಬಾರಗೊಡ್ಲು ತಟದಲ್ಲಿ ತಾಂತ್ರಿಕ ದೋಷದಿಂದ ಪಲ್ಟಿ ಆಗುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಸಿಗಂದೂರು ದೇವಸ್ಥಾನದಿಂದ ಹೊಳೆಬಾಗಿಲು ಲಾಂಚ್ ಮೂಲಕ ಸಾಗರ ತೆರಳುವ ಗಜಾನನ ವಾಹನ ಸಾರಿಗೆ ಸಂಸ್ಥೆ ಬಸ್ ಲಾಂಚ್‌ನಿಂದ ಇಳಿದು ಪ್ರಯಾಣಿಕರನ್ನು ಹತ್ತಿಸಿಕೊಂಡು ಸ್ವಲ್ಪ ದೂರ ಮುಂದೆ ಸಾಗಿದೆ. ಆಗ ಏಕಾಏಕಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಸರ‌್ರನೆ ಏರಿನಿಂದ ಹಿನ್ನೀರಿನ ಕಡೆಗೆ ಹಿಂದಕ್ಕೆ ಬಂದು ಪಲ್ಟಿ ಹೊಡೆಯುವಂತಾಗಿ ನಿಂತಿದೆ. ಈ ವೇಳೆ ಬಸ್‌ನಲ್ಲಿ 60ಕ್ಕೂ ಅಧಿಕ ಪ್ರಯಾಣಿಕರಿದ್ದು ಎಲ್ಲರೂ ದಡಬಡನೆ ಇಳಿದು ಓಡಿ ದೂರ ಹೋಗಿ ನಿಂತರು. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.