ಶ್ರೀಘ್ರದಲ್ಲೇ ಶೇ.15 ರೂ. ದರ ಏರಿಕೆಗೆ ನಿರ್ಧಾರ
ಸರ್ಕಾರಕ್ಕೆ ಬಸ್ ಮಾಲೀಕರ ಸಂಘ ಕೋರಿಕೆ
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕನವರಿಕೆಯಲ್ಲಿರುವ ಜನರಿಗೆ ಇದೀಗ ಖಾಸಗಿ ಬಸ್ನವರೂ ಸಹ ಶಾಕ್ ನೀಡಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಸಾರಿಗೆ ಪ್ರಯಾಣ ದರ ಶೇ.15 ಏರಿಕೆ ಮಾಡಿದ್ದು, ಅದರ ಬೆನ್ನಲ್ಲೇ ಖಾಸಗಿ ಬಸ್ನವರೂ ಟಿಕೆಟ್ ದರ ಏರಿಕೆಗೆ ಮುಂದಾಗಿದ್ದಾರೆ.
ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘಗಳ ಒಕ್ಕೂಟವು ಖಾಸಗಿ ಬಸ್ಗಳಲ್ಲೂ ಶೇ.15 ದರ ಏರಿಕೆಗೆ ನಿರ್ಧರಿಸಿದ್ದು, ಅನುಮತಿ ಕೋರಿ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಉಡುಪಿಯಲ್ಲಿರುವ ಖಾಸಗಿ ಬಸ್ ನಿಲ್ದಾಣ.
ದರ ಏರಿಕೆಗೆ ಕಾರಣವೇನು?
2020ರಿಂದ ಪ್ರಯಾಣ ದರ ಏರಿಸಿಲ್ಲ ಎನ್ನುವುದು ಖಾಸಗಿ ಬಸ್ ಮಾಲೀಕರ ಸಂಘದ ಮೊದಲ ಸ್ಪಷ್ಟನೆ. ನಾಲ್ಕು ವರ್ಷದಿಂದ ಡೀಸೆಲ್ ದರ ಏರಿಕೆ ಆಗುತ್ತಲೇ ಇದ್ದು, ಇತ್ತೀಚೆಗೆ ರಾಜ್ಯ ಸರ್ಕಾರ ಲೀಟರ್ಗೆ ಮತ್ತೆ 3 ರೂ. ಏರಿಕೆ ಮಾಡಿದೆ. ಟೈರ್ ದರ, ನಿರ್ವಹಣಾ ವೆಚ್ಚ, ಚಾಲಕ-ನಿರ್ವಾಹಕ ಹಾಗೂ ಸಿಬ್ಬಂದಿ ವೇತನವೂ ಹೆಚ್ಚಳವಾಗಿದೆ. ಸಮಯಕ್ಕೆ ಸರಿಯಾಗಿ ಸರ್ಕಾರಕ್ಕೆ ತೆರಿಗೆ ಭರಿಸಬೇಕು. ಇನ್ಶೂರೆನ್ಸ್ ಪ್ರೀಮಿಯಂ ದರವೂ ಭಾರಿ ಏರಿಕೆ ಆಗಿದೆ. ಹೀಗಾಗಿ ದರ ಏರಿಕೆ ಅನಿವಾರ್ಯ ಎನ್ನುತ್ತಿದ್ದಾರೆ.
ಖಾಸಗಿಗೆ ಫ್ಲೆಕ್ಸಿ ಫೇರ್ ತೊಡಕು
ರಾಜ್ಯದಲ್ಲಿ ಎಲ್ಲೆಲ್ಲಿ ಖಾಸಗಿ ಬಸ್ ಸೇವೆ ಇದೆಯೋ ಆ ಕಡೆಗಳಲ್ಲಿ ಸರ್ಕಾರಿ ಬಸ್ನವರು ಅನುಕೂಲಕರ ದರ (ಫ್ಲೆಕ್ಸಿ ಫೇರ್) ಅಳವಡಿಸುತ್ತಿದ್ದಾರೆ. ಇದು ಪ್ರೈವೇಟ್ ಬಸ್ ಸೇವೆಗೆ ತೊಂದರೆ ಮಾಡುವ ಹುನ್ನಾರವಾಗಿದೆ. ಉಡುಪಿ-ಪಡುಕೆರೆ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಮಾತ್ರ ಇದ್ದು, ಮಲ್ಪೆ ವರೆಗೆ ಖಾಸಗಿ ಬಸ್ ಸೇವೆ ಇದೆ. ಇಲ್ಲಿ ಖಾಸಗಿ ದರ 15 ರೂ. ಇದ್ದು, ಸರ್ಕಾರಿ ದರ 12 ರೂ.ಗೆ ಇಳಿಸಿದ್ದಾರೆ. ಜಾತ್ರೆ ಇನ್ನಿತರ ವಿಶೇಷ ಸಂದರ್ಭದಲ್ಲಿ ಮಾತ್ರ ಇರುತ್ತಿದ್ದ ಫ್ಲೆಕ್ಸಿ ಫೇರ್ ಬಸ್ಗಳನ್ನು ಎಲ್ಲೆಡೆ ಅಳವಡಿಸಿದ್ದರಿಂದ ನಷ್ಟವಾಗುತ್ತಿದೆ ಎನ್ನುತ್ತಾರೆ ಖಾಸಗಿ ಬಸ್ ಮಾಲೀಕರು.
ಖಾಸಗಿ ಸೇವೆ ಮುಗಿಸುವ ಹುನ್ನಾರ
ರಾಜ್ಯದಲ್ಲಿ ಸುಮಾರು 22 ಸಾವಿರ ಸರ್ಕಾರಿ ಬಸ್, 6 ಸಾವಿರದಷ್ಟು ಖಾಸಗಿ ಬಸ್ ಇವೆ. 17 ಜಿಲ್ಲೆಗಳಲ್ಲಿ ಖಾಸಗಿ ಬಸ್ ಸೇವೆ ಇದ್ದು, ಸರ್ಕಾರಿ ಸಾರಿಗೆಗಿಂತ ಉತ್ತಮ ಸರ್ವೀಸ್ ನೀಡುತ್ತಿದ್ದೇವೆ. ಸರ್ಕಾರಿ ಬಸ್ಗಳು ಕೆಟ್ಟು ನಿಂತು, ಪ್ರಯಾಣಿಕರು ಪರದಾಡುತ್ತಿರುತ್ತಾರೆ. ಆದರೆ, ಖಾಸಗಿಯ ಸೇವೆಯಲ್ಲಿ ಕೂಡಲೇ ಬದಲಿ ಬಸ್ ಒದಗಿಸಿ ಪ್ರಯಾಣಿಕರ ಹಿತ ಕಾಯುತ್ತೇವೆ. ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳಕ್ಕೂ ಮುಟ್ಟಿಸುತ್ತೇವೆ. ಆದರೂ ಖಾಸಗಿ ಬಸ್ ಸೇವೆ ಮುಗಿಸಲು ಸರ್ಕಾರ ಹುನ್ನಾರ ನಡೆಸಿದೆ. ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕೊಟ್ಟು ಖಾಸಗಿಯವರು ನಷ್ಟ ಅನುಭವಿಸುತ್ತಿದ್ದೇವೆ. ಈ ಹಿಂದೆ ಸರ್ಕಾರ ಪ್ರಯಾಣ ದರ ಏರಿಕೆ ಮಾಡುವಾಗ ಸುತ್ತೋಲೆ ಹೊರಡಿಸುತ್ತಿತ್ತು. ಆಗ ಖಾಸಗಿಯವರಿಗೂ ದರ ಏರಿಸಲು ಅವಕಾಶವಿತ್ತು. ಆದರೆ, ಈ ಬಾರಿ ಯಾವುದೇ ಸುತ್ತೋಲೆ ಇಲ್ಲದೆ ಸರ್ಕಾರ ತಮ್ಮ ಬಸ್ಗಳಿಗೆ ಮಾತ್ರ ಶೇ.15 ದರ ಏರಿಕೆ ಮಾಡಿಕೊಂಡು ನಮಗೆ ವಂಚಿಸಿದೆ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘಗಳ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.
ಖಾಸಗಿ ಮಜಲು ವಾಹನ ಬಸ್ಗಳ ಸಮಸ್ಯೆ ನೀಗಿಸುವಂತೆ, ಎಲ್ಲೆಡೆ ಫ್ಲೆಕ್ಸಿ ಫೇರ್ ಬಸ್ ನೀಡದಂತೆ, ಖಾಸಗಿಯವರಿಗೂ ಟಿಕೆಟ್ ದರ ಶೇ.15 ಏರಿಕೆಗೆ ಅವಕಾಶ ಕೊಡುವಂತೆ ಸಾರಿಗೆ ಸಚಿವರಿಗೆ ಮನವಿ ನೀಡಿದ್ದೇವೆ. ಅನ್ಯ ರಾಜ್ಯಗಳಲ್ಲಿರುವಂತೆ ಸರ್ಕಾರಿ-ಖಾಸಗಿ ಬಸ್ಗಳ ಸಮಾನಾಂತರ ಸಂಚಾರ ಅವಕಾಶಕ್ಕೂ ಕೇಳಿದ್ದೇವೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ರಾಜ್ಯ ಸಾರಿಗೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಶ್ರೀಘ್ರದಲ್ಲೇ ಸರ್ಕಾರದ ನೋಟಿಫಿಕೇಷನ್ ಬರಲಿದೆ.
| ಸುರೇಶ್ ನಾಯಕ್ ಕುಯಿಲಾಡಿ. ಅಧ್ಯಕ್ಷ, ಕ.ರಾ. ಖಾಸಗಿ ವಾಹನ ಮಾಲೀಕರ ಸಂಘಗಳ ಒಕ್ಕೂಟ