ತಾಳಿಕೋಟೆ: 69 ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಯಬಾಗ ತಾಲೂಕಿನ ಬ್ಯಾಕೋಡದ ಲಕ್ಕಮ್ಮದೇವಿ ಕಲಾ ಪೋಷಕ ಸಂಘದ ವತಿಯಿಂದ ಧಾರವಾಡದ ರಂಗಾಯಣದಲ್ಲಿ ನಡೆದ ಕನ್ನಡ ನುಡಿ ಸಂಭ್ರಮ ಕಾರ್ಯಕ್ರಮದಲ್ಲಿ ತಾಳಿಕೋಟೆಯ ನಾಟ್ಯಮಯೂರಿ ಕು.ಪೃಥ್ವಿ ಎಂ.ಹೆಗಡೆ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ಭರತ ನಾಟ್ಯ ಹಾಗೂ ಜಾನಪದ ನೃತ್ಯದಲ್ಲಿಯ ಸಾಧನೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಧಾರವಾಡದ ರಂಗಾಯಣದ ನಿರ್ದೇಶಕ- ಚಿತ್ರನಟ ರಾಜು ತಾಳಿಕೋಟೆ, ಸಂಘದ ಅಧ್ಯಕ್ಷ ಸಿದ್ರಾಮ ಎಂ. ನಿಲಜಗಿ ಪ್ರಶಸ್ತಿ ಪ್ರದಾನ ಮಾಡಿದರು.
ಪೃಥ್ವಿ ಹೆಗಡೆ ಅವರು ತಾಳಿಕೋಟೆಯ ನೃತ್ಯ ಶಿಕ್ಷಕ ವಿನೋದಕುಮಾರ ಚಿಕ್ಕಮಠ ಅವರಿಂದ ಕಳೆದ 8 ವರ್ಷಗಳಿಂದ ಭರತ ನಾಟ್ಯ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.
ಈಗಾಗಲೇ ಕರ್ನಾಟಕ, ಕೇರಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ಚಂದನ ವಾಹಿನಿ, ಬಸವ ವಾಹಿನಿಯಲ್ಲಿ ಭರತನಾಟ್ಯ ಹಾಗೂ ಜಾನಪದ ನೃತ್ಯ ಪ್ರದರ್ಶನ ನೀಡಿ ರಾಜ್ಯ, ಅಂತಾರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇಲ್ಲಿಯವರೆಗೆ 968 ನೃತ್ಯ ಪ್ರದರ್ಶನ ನೀಡಿದ ಪೃಥ್ವಿ ಹೆಗಡೆ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದಕ್ಕೆ ವೀರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ ಶಿಕ್ಷಕ ವಿನೋದ ಚಿಕ್ಕಮಠ, ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.