ಪಟ್ಟಣದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಮುಂಭಾಗ ಭಾನುವಾರ ಮುಸ್ಸಂಜೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಯುವಕರ ಸಂಘ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿಯ ಪ್ರೀತಂ ಜೆ.ಗೌಡ ಅವರು ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ಜತೆಗೆ ವೇದಿಕೆ ಹಂಚಿಕೊಂಡರು. 
ಜಿಲ್ಲೆ

ಒಂದೇ ವೇದಿಕೆಯಲ್ಲಿ ಪ್ರೀತಂ- ಶ್ರೇಯಸ್

ಲೋಕೇಶ್ ಮನು. ಡಿ

ಹೊಳೆನರಸೀಪುರ: ಹೊಳೆನರಸೀಪುರ ತಾಲೂಕಿನ ಈ ವರ್ಷದಿಂದ ವಾಸ್ತು, ದಿಕ್ಕು ದೆಸೆ ಎಲ್ಲವೂ ಬದಲಾಗಿದೆ. ಒಂದು ಅರ್ಥದಲ್ಲಿ ಸ್ವಾತಂತ್ರೃ ಸಿಕ್ಕಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಹೇಳಿದರು.

ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಮುಂಭಾಗ ಭಾನುವಾರ ಸಂಜೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಯುವಕರ ಸಂಘ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಟ್ಟಣದಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾಗಿದೆ. ಯಾವುದೇ ಹಬ್ಬ, ಸಂಭ್ರಮಗಳಲ್ಲಿ ಈವರೆಗೂ ಹೊಳೆನರಸೀಪುರ ಪಟ್ಟಣದ ಯಾವುದೋ ಮನೆ ಅಥವಾ ತೋಟದ ಮೂಲೆಯಲ್ಲಿ ಮಾತ್ರ ವಿದ್ಯುತ್ ದೀಪಗಳು ಉರಿಯುತ್ತಿದ್ದವು. ಆದರೆ ಇಂದು ಪಟ್ಟಣವೆಲ್ಲ ಬೆಳಕಾಗಿದೆ. ದೀಪಾಲಂಕಾರ ಪಟ್ಟಣಕ್ಕೆ ಹೊಸ ಮೆರುಗನ್ನು ತಂದಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಎಚ್.ಡಿ.ರೇವಣ್ಣ ಕುಟುಂಬಕ್ಕೆ ಟಾಂಗ್ ನೀಡಿದರು.

ಇಂದು ಹೊಳೆನರಸೀಪುರದಲ್ಲಿ ದಿವಂಗತ ಜಿ.ಪುಟ್ಟಸ್ವಾಮಿಗೌಡರ ಅವಧಿ ಮರುಕಳಿಸುತ್ತಿದೆ. ಸಹೋದರ ಶ್ರೇಯಸ್ ಪಟೇಲ್ ಅವರಿಂದ ತಾಲೂಕಿನ ಶ್ರೇಯಸ್ಸು ಅಡಗಿದೆ. ನಾನು ಬಿಜೆಪಿ ಪಕ್ಷದವನಾದರೂ ಕಾಂಗ್ರೆಸ್‌ನ ಸಂಸದ, ಸಹೋದರ ಶ್ರೇಯಸ್ ಪಟೇಲ್ ಜತೆಗೆ ವೇದಿಕೆ ಹಂಚಿಕೊಂಡಿದ್ದೇನೆ ಅಂದರೆ ಅದು ಮಾನವೀಯತೆ. ನಾನು ಯಾವ ಪಕ್ಷದಲ್ಲಿ ಇರಲಿ ಶ್ರೇಯಸ್ ಪಟೇಲ್ ಅವರ ಬೆಳವಣಿಗೆಯನ್ನು ಬೆಂಬಲಿಸುತ್ತೇನೆ ಎಂದು ನುಡಿದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಸುತ್ತಿರುವುದರ ಮೆರುಗನ್ನು ನೋಡಿದರೆ ಪಟ್ಟಣದ ಜನತೆಗೆ ಸ್ವಾತಂತ್ರೃ ಸಿಕ್ಕಿದೆ ಎಂದೆನಿಸುತ್ತಿದೆ. ಎಲ್ಲಿ ತನಕ ಶ್ರೇಯಸ್ ಪಟೇಲ್ ಅವರಿಗೆ ಅಧಿಕಾರ ತಾಲೂಕಿನ ಜನತೆ ನೀಡುತ್ತೀರಿ ಅಲ್ಲಿಯವರೆಗೂ ಇದೇ ರೀತಿ ಭಾಗವಹಿಸುತ್ತೇನೆ ಎಂದು ತಿಳಿಸಿದರು.

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ನಮ್ಮ ಪಟ್ಟಣದ ಕಾರ್ಯಕ್ರಮಕ್ಕೆ ಪ್ರೀತಂ ಅಣ್ಣ ಅವರು ಆಗಮಿಸಿರುವುದು ಹೆಮ್ಮೆ ಹಾಗೂ ಸಂತಸ ತಂದಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.

ಇದೇ ಮೊದಲ ಬಾರಿಗೆ ಪಟ್ಟಣದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಶ್ರೇಯಸ್ ಎಂ.ಪಟೇಲ್ ಹಾಗೂ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಅವರು ಜೆಡಿಎಸ್ ಪ್ರಭಾವಿ ಶಾಸಕ ಎಚ್.ಡಿ.ರೇವಣ್ಣ ಅವರ ಭದ್ರಕೋಟೆಯಲ್ಲಿ ಒಟ್ಟಾಗಿ ಕಾರ್ಯಕ್ರಮದಲ್ಲಿ ಮುಖಾಮುಖಿಯಾಗಿರುವುದು ಸಾರ್ವಜನಿಕರಲ್ಲಿ ಅಚ್ಚರಿಗೆ ಕಾರಣವಾಯಿತು.

ಸಂಸದರು ಹಾಗೂ ಪ್ರೀತಂಗೌಡ ಅವರು ಕನ್ನಡಾಂಬೆಯ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನ.21ರ ದಿನದಿಂದ 24 ರವರೆಗೆ ನಾಲ್ಕು ದಿನಗಳು ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಪಟ್ಟಣಕ್ಕೆ ಮೆರುಗು ತಂದಿತು.

ಪಟ್ಟಣದ ಮುಖ್ಯಬೀದಿಗಳಲ್ಲಿ ದೀಪಾಲಂಕಾರ, ಗೀತ ಗಾಯನ, ಕುಸ್ತಿ, ಕಾಮಿಡಿ ಕಾರ್ಯಕ್ರಮ, ವಿವಿಧ ಕಲಾತಂಡಗಳಿಂದ ಕನ್ನಡಾಂಬೆಯ ಮೆರವಣಿಗೆ ಕಾರ್ಯಕ್ರಮ ಪಟ್ಟಣಕ್ಕೆ ಹೊಸ ಬಾಷ್ಯ ಬರೆಯಿತು.