ಕಾರವಾರ: ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿ, ನಟ ದರ್ಶನ್‌ಗೆ ವಿಐಪಿ ಸೌಕರ್ಯ ನೀಡಿದ ಫೋಟೋಗಳು ಬಹಿರಂಗವಾದ ಬಳಿಕ ಕಾರಾಗೃಹ ಇಲಾಖೆ ಎಚ್ಚೆತ್ತುಕೊಂಡಿದೆ. ಎಲ್ಲೆಡೆ ಸಿಗುತ್ತಿದ್ದ ಅನಽಕೃತ ಸೌಲಭ್ಯಗಳನ್ನು ಕಟ್ ಮಾಡಿದೆ. ಪರಿಣಾಮ ಹೊಸ ವಿಚಿತ್ರ ಘಟನೆಗಳು ನಡೆಯಲಾರಂಭಿಸಿವೆ. ತಂಬಾಕು ಬೇಕು ಎಂದು ಕೈದಿಗಳು ರಂಪ ಮಾಡಿ, ಕಲ್ಲಿನಿಂದ ತಲೆ ಚಚ್ಚಿಕೊಂಡ ಘಟನೆ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಬಂಽತನಾದ ದಾಂಡೇಲಿಯ ಫರಾನ್ ಛಬ್ಬಿ ಹಾಗೂ ಕಳ್ಳತನ ಪ್ರಕಣದಲ್ಲಿ ಬಂಽತನಾದ ಕುಮಟಾದ ಮುಜಾಮಿಲ್ ಎಂಬ ಇಬ್ಬರು ವಿಚಾರಣಾಧೀನ ಕೈದಿಗಳಿಗೆ ಹಣೆ, ಕೈಗೆ ಗಾಯವಾಗಿದ್ದು, ಇಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಕೈದಿಗಳ ವಿರುದ್ಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬ್ಯಾರಕ್ ನಂಬರ್ 1 ರಲ್ಲಿ ಗುರುವಾರ ಮಧ್ಯಾಹ್ನ 2.30 ರ ಹೊತ್ತಿಗೆ ಗಲಾಟೆ ಪ್ರಾರಂಭವಾಗಿದೆ. ಟಿವಿ ಹಚ್ಚುವ ವಿಚಾರವಾಗಿ ಮೊದಲು ಜೈಲು ಸಿಬ್ಬಂದಿಯೊಂದಿಗೆ ಕೈದಿಗಳು ಗಲಾಟೆ ತೆಗೆದಿದ್ದರು. ನಂತರ ತಂಬಾಕು ಬೇಕು ಎಂದು ಜೈಲಿನಲ್ಲಿದ್ದ ನಾಲ್ಕಾರು ಕೈದಿಗಳು ಸೇರಿ ದೊಡ್ಡಕ್ಕೆ ಕೂಗಲು ಪ್ರಾರಂಭಿಸಿದ್ದರು. ಈ ನಡುವೆ ಮುಜಾಮಿಲ್ ಎಂಬಾತ ಅಲ್ಲೇ ಇದ್ದ ಕಲ್ಲನ್ನು ತನ್ನ ತಲೆಗೆ ಚಚ್ಚಿಕೊಂಡು ನಂತರ ಗೋಡೆಗೆ ವೇಗವಾಗಿ ಅಪ್ಪಳಿಸಿದ್ದ. ಕಲ್ಲು ಗೋಡೆಯಿಂದ ಪುಟಿದು ಹಿಂದೆ ನಿಂತಿದ್ದ ಫರಾನ್ ಛಬ್ಬಿ ತಲೆಗೆ ತಾಗಿ ಗಾಯವಾಗಿದೆ.
ಜೈಲಿನಲ್ಲಿ ಗಲಾಟೆ ನಡೆದ ಸುದ್ದಿ ಕೇಳಿ ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಹೆಚ್ಚುವರಿ ಎಸ್‌ಪಿ ಸಿ.ಟಿ.ಜಯಕುಮಾರ್ ನೇತೃತ್ವದಲ್ಲಿ ಪೊಲೀಸರು ವಿಚಾರಣೆ ನಡೆಸಿದರು. ಜೈಲು ಅಧಿಕಾರಿಗಳು ತಮ್ಮ ಮೇಲೆ ಹಲ್ಲೆ ಮಾಡಿದರು ಎಂದು ಕೈದಿಗಳು ಪೊಲೀಸರ ಎದುರು ನಂತರ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾಧ್ಯಮಗಳ ಎದುರು ಹೇಳಿಕೆ ನೀಡಿದರು.
ಆದರೆ, ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕೈದಿಯೇ ಸ್ವತಃ ಹೊಡೆದುಕೊಂಡಿರುವುದು ದಾಖಲಾಗಿದೆ. ಇದರಿಂದ ಜೈಲರ್ ಅವರಿಂದ ದೂರು ಪಡೆದುಕೊಂಡು ಇಬ್ಬರ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಹೆಚ್ಚುವರಿ ಎಸ್‌ಪಿ ಸಿ.ಟಿ.ಜಯಕುಮಾರ್ ತಿಳಿಸಿದ್ದಾರೆ.
ಕಾರವಾರ ಕಾರಾಗೃಹದಲ್ಲಿ 143 ವಿಚಾರಣಾಧೀನ ಕೈದಿಗಳಿದ್ದು, ಅದರಲ್ಲಿ ಮೂವರು ಮಹಿಳಾ ಕೈದಿಗಳಾಗಿದ್ದಾರೆ. ಇಲ್ಲಿ ಈ ಹಿಂದೆಯೂ ನಾವು ಪರಿಶೀಲಿಸಿದ್ದು,ಮೊಬೈಲ್ ಬಳಕೆ, ಗಾಂಜಾ ಮುಂತಾದ ವಸ್ತುಗಳು ಕಂಡುಬಂದಿಲ್ಲ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಯಕುಮಾರ್ ವಿವರಿಸಿದ್ದಾರೆ.