ಜಿಲ್ಲೆ

ನ್ಯಾಯಕ್ಕಾಗಿ ಆಗ್ರಹಿಸಿ ಕಟ್ಟಡವೇರಿದ ಕೈದಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿಚಾರಣಾಧೀನ ಕೈದಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಮೂರು ಅಂತಸ್ತಿನ ಕಟ್ಟಡ ಏರಿ ನ್ಯಾಯಕ್ಕಾಗಿ ಆಗ್ರಹಿಸಿದ ಘಟನೆ ಭಾನುವಾರ ನಡೆದಿದೆ.

ಅಣ್ಣಿಗೇರಿ ಮೂಲದ ವಿಜಯ ಎಂಬುವವನ ಮೇಲೆ ಪೋಕ್ಸೊ ಪ್ರಕರಣದಡಿ ದೂರು ದಾಖಲಾಗಿ ಜಾಮೀನಿನ ಮೇಲೆ ಹೊರಗಿದ್ದ. ಆದರೆ ಆತನ ಮೇಲೆ ಬಾಡಿ ವಾರಂಟ್​ ಜಾರಿಯಾಗಿದ್ದರಿಂದ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಧೀಶರೆದರು ಹಾಜರುಪಡಿಸಲು ಕರೆದುಕೊಂಡು ಬರುತ್ತಿದ್ದರು.

ಮಲಪ್ರಭಾ ನಗರದ ಬಳಿ ಪೊಲೀಸರಿಂದ ತಪ್ಪಿಸಿಕೊಂಡು 3 ಅಂತಸ್ತಿನ ಕಟ್ಟಡ ಏರಿ ನಾನೇನು ತಪ್ಪು ಮಾಡಿಲ್ಲ. ನನಗೆ ನ್ಯಾಯ ಬೇಕು. ಪೊಲೀಸರು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ನ್ಯಾಯಾಧೀಶರು ಸ್ಥಳಕ್ಕೆ ಬರಬೇಕು. ನನ್ನ ತಂದೆ-ತಾಯಿಯನ್ನು ಕರೆಯಿಸಬೇಕು. ಇಲ್ಲವಾದಲ್ಲಿ ಕಟ್ಟಡ ಮೇಲಿಂದ ಬಿದ್ದು ಸಾಯುವುದಾಗಿ ಬೆದರಿಕೆ ಹಾಕಿ ಹೈ ಡ್ರಾಮಾ ಸೃಷ್ಟಿಸಿದ್ದ.

ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಆಗ ಕೋಟ್​ ಧರಿಸಿದ್ದ ಉಪನ್ಯಾಸಕರೊಬ್ಬರು ಏನು ನಡೆಯುತ್ತಿದೆ ಎಂದು ನೋಡಲು ಆಗಮಿಸಿದ್ದರು. ಇದನ್ನೇ ಸದುಪಯೋಗಪಡಿಸಿಕೊಂಡ ಪೊಲೀಸರು, ಉಪನ್ಯಾಸಕರನ್ನೇ ನ್ಯಾಯಾಧೀಶರೆಂದು ತೋರಿಸಿ ಆರೋಪಿ ವಿಜಯಗೆ ಕೆಳಗಿಳಿಯುವಂತೆ ಮನವಿ ಮಾಡಿದರು. ಸ್ಥಳಕ್ಕೆ ಮಾಧ್ಯಮದವರೂ ಬಂದಿದ್ದಾರೆ. ನ್ಯಾಯ ಕೊಡಿಸುತ್ತಾರೆ ಎಂದು ಮನಮೊಲಿಸಿದರು. ನಂತರ ಕಟ್ಟಡದ ಮೇಲೆ ಉಪನ್ಯಾಸಕರು ಹಾಗೂ ಇತರರು ತೆರಳಿ ವಿಜಯನನ್ನು ಕೆಳಗಿಳಿಸಿದ ಪ್ರಸಂಗ ನಡೆದಿದೆ.