ಮೈಸೂರು: ಬೇರೆಯವರ ಮರದಲ್ಲಿ ಎಳನೀರು ಕೀಳುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರಿಂದ ಕುಪಿತಕೊಂಡು ಹಲ್ಲೆ ನಡೆಸಿ ಕೊಲೆಗೆ ಯತ್ನ ನಡೆಸಿದ ಆರು ಅಪರಾಧಿಗಳಿಗೆ ನ್ಯಾಯಾಲಯ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ವರುಣ ಬಳಿಯ ಅರಗೌಡನಹಳ್ಳಿಯ ಎಸ್.ಕೀರ್ತಿ, ಪ್ರಸನ್ನಕುಮಾರ್, ಅವಿನಾಶ್, ಡಿ.ಸಿ.ಕಾರ್ತಿಕ್, ಕೆ.ಮನು, ಎಸ್.ಮನೋಜ್ ಶಿಕ್ಷೆಗೆ ಗುರಿಯಾದವರು.
ಆರೋಪಿಗಳು 2020ರ ಏಪ್ರಿಲ್ 5ರಂದು ಬಸವರಾಜು ಅವರ ಜಮೀನಿನಲ್ಲಿ ಕದ್ದು ಎಳನೀರು ಕೀಳುವುದನ್ನು ಪಕ್ಕದ ಜಮೀನಿನ ಶಿವಣ್ಣ ಅವರು ವಿಡಿಯೋ ಮಾಡಿದ್ದನ್ನು ನೋಡಿದ್ದಾರೆ. ಇದನ್ನ್ನು ಬೇರೆಯವರಿಗೆ ತೋರಿಸಿದರೆ ಅವಮಾನ ಅಗುತ್ತದೆ ಎಂದು ಶಿವಣ್ಣ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಲೋಕೇಶ್, ಹೇಮಂತ್, ಅಭಿಷೇಕ್ ಎಂಬುವರ ಮೇಲೂ ಆರು ಜನರು ಹಲ್ಲೆ ನಡೆಸಿ ಸೈಜುಗಲ್ಲನ್ನು ಎತ್ತಿ ಹಾಕಿ ಕೊಲೆಗೂ ಯತ್ನಿಸಿದ್ದರೆನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಸಬ್ ಇನ್ಸ್‌ಪೆಕ್ಟರ್ ಆರ್.ಲಕ್ಷ್ಮೀ ಅವರು ನಗರದ ನಾಲ್ಕನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಲ್ಲನಗೌಡ ಅವರು, ಆರು ಆರೋಪಿಗಳಿಗೆ ವಿವಿಧ ಕಲಂ ಅಡಿ 2 ತಿಂಗಳಿಂದ 5 ವರ್ಷದ ವರೆಗೂ ಶಿಕ್ಷೆ, ಒಟ್ಟು 22 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಎಸ್.ಟಿ.ಸುಧಾ ವಕಾಲತ್ತು ವಹಿಸಿದ್ದರು.